Published
3 months agoon
By
Akkare News
ಸಿಜೆಐ ಚಂದ್ರಚೂಡ್ ಮತ್ತು ಅವರ ಪತ್ನಿಯ ಜೊತೆಗೂಡಿ ಪ್ರಧಾನಿ ಮೋದಿ ಗಣೇಶನ ವಿಗ್ರಹಕ್ಕೆ ಆರತಿ ಮಾಡಿ ಪ್ರಾರ್ಥನೆ ಸಲ್ಲಿಸುತ್ತಿರುವ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಈ ಕುರಿತು ಹಲವು ಪ್ರಮುಖ ವಕೀಲರು, ಚಿಂತಕರು, ಹೋರಾಟಗಾರರು ಪ್ರತಿಕ್ರಿಯಿಸಿದ್ದಾರೆ.
ಸಿಜೆಐ ನಡೆಗೆ ಆಕ್ಪೇಪ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲೆ ಇಂದಿರಾ ಜೈಸಿಂಗ್ “ಭಾರತದ ಮುಖ್ಯ ನ್ಯಾಯಾಧೀಶರು ಕಾರ್ಯಾಂಗ ಮತ್ತು ನ್ಯಾಯಾಂಗದ ನಡುವಿನ ಅಧಿಕಾರದ ಅಂತರದಲ್ಲಿ ರಾಜಿ ಮಾಡಿಕೊಂಡಿದ್ದಾರೆ. ಸಿಜೆಐ ಸ್ವತಂತ್ರ ಎಂಬುವುದರ ಮೇಲಿನ ನಂಬಿಕೆ ಸಂಪೂರ್ಣ ಕಳೆದುಕೊಂಡಿದ್ದೇನೆ. ಸ್ವತಂತ್ರ ಸಿಜೆಐ ಕಾರ್ಯಾಂಗದ ಜೊತೆ ಸಾರ್ವಜನಿಕವಾಗಿ ರಾಜಿ ಮಾಡಿಕೊಂಡಿರುವುದನ್ನು ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಶನ್ (ಎಸ್‌ಸಿಬಿಎ) ಖಂಡಿಸಬೇಕು” ಎಂದು ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.
ಸುಪ್ರೀಂ ಕೋರ್ಟ್‌ನ ಮತ್ತೋರ್ವ ಹಿರಿಯ ವಕೀಲ ಪ್ರಶಾಂತ್ ಭೂಷಣ್ ಪ್ರತಿಕ್ರಿಯಿಸಿ “ಸಿಜೆಐ ಚಂದ್ರಚೂಡ್ ಅವರು ಮೋದಿಯವರನ್ನು ಅವರ ನಿವಾಸಕ್ಕೆ ಖಾಸಗಿ ಭೇಟಿ ಮಾಡಲು ಅವಕಾಶ ಮಾಡಿಕೊಟ್ಟಿರುವುದು ಆಘಾತಕಾರಿಯಾಗಿದೆ. ಇದು ಸರ್ಕಾರ ಸಂವಿಧಾನದ ಮಿತಿಯಲ್ಲಿ ಕಾರ್ಯಾಚರಿಸುತ್ತಿದೆ ಎಂದು ಖಚಿತಪಡಿಸುವ ಮತ್ತು ಕಾರ್ಯಾಂಗದಿಂದ ನಾಗರಿಕರ ಮೂಲಭೂತ ಹಕ್ಕನ್ನು ರಕ್ಷಿಸುವ ಜವಾಬ್ದಾರಿಯನ್ನು ಹೊಂದಿರುವ ನ್ಯಾಯಾಂಗಕ್ಕೆ ಕೆಟ್ಟ ಸಂದೇಶವನ್ನು ರವಾನಿಸುತ್ತದೆ. ಕಾರ್ಯಾಂಗ ಮತ್ತು ನ್ಯಾಯಾಂಗದ ನಡುವೆ ದೀರ್ಘವಾದ ಅಂತರ ಇರಬೇಕು” ಎಂದು ಹೇಳಿದ್ದಾರೆ.
ವಕೀಲ, ಹೋರಾಟಗಾರ ವಿನಯ್ ಕೂರಗಾಯಲ ಶ್ರೀನಿವಾಸ ಪ್ರತಿಕ್ರಿಯಿಸಿ “ಇದು ನ್ಯಾಯಾಧೀಶರ ಒಂದು ಭಯಾನಕ ಉದಾಹರಣೆಯಾಗಿದೆ. ಸಿದ್ದರಾಮಯ್ಯ ಅವರ ಪ್ರಕರಣ ವಿಚಾರಣೆಯಲ್ಲಿರುವಾಗ, ಅವರು ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯ ಮನೆಗೆ ಊಟಕ್ಕೆ ಹೋದರೆ ಒಪ್ಪಿಕೊಳ್ಳಬಹುದೇ? ಸಂವಿಧಾನವನ್ನು ಎತ್ತಿ ಹಿಡಿಯಬೇಕಾದ ವ್ಯಕ್ತಿಯೇ ಅದನ್ನು ದುರ್ಬಲಗೊಳಿಸಿದ್ದಾರೆ. ಸಿಜೆಐ ಚಂದ್ರಚೂಡ್ ಕ್ಷಮೆಯಾಚಿಸಬೇಕು ಅಥವಾ ರಾಜೀನಾಮೆ ನೀಡಬೇಕು” ಎಂದು ಆಗ್ರಹಿಸಿದ್ದಾರೆ.
ಸಿಜೆಐ ಚಂದ್ರಚೂಡ್ ಅವರೇ ನೀವು ಚುನಾವಣಾ ಬಾಂಡ್ ಕುರಿತು ತೀರ್ಪು ನೀಡಿದಾಗಿನಿಂದ ನಿಮ್ಮ ಮೇಲೆ ಅತೀವ ಗೌರವ ಇತ್ತು. ಅದು ಇವತ್ತು ಹೊರಟೋಯಿತು” ಎಂದು ಎಕ್ಸ್ ಬಳಕೆದಾರರೊಬ್ಬರು ಬರೆದುಕೊಂಡಿದ್ದಾರೆ.
“ನ್ಯಾಯಮೂರ್ತಿ ಲೋಯಾ ಅವರ ಮೇಲಿನ ನನ್ನ ಗೌರವ ಇಂದು ಹೆಚ್ಚಾಗಿದೆ. ಅವರಂತಹ ಶಕ್ತಿ ಎಲ್ಲರಿಗೂ ಇರಲಾರದು. ನಮ್ಮನ್ನು ಕ್ಷಮಿಸಿ ಸರ್ ” ಎಂದು ಮತ್ತೊಬ್ಬರು ಎಕ್ಸ್ ಬಳಕೆದಾರರು ಸಿಜೆಐ ನಡೆಯನ್ನು ಖಂಡಿಸಿದ್ದಾರೆ.