Published
3 months agoon
By
Akkare News
ಪುತ್ತೂರು: ವಿಟ್ಲ-ಸಾಲೆತ್ತೂರು ರಸ್ತೆಯ ಕೊಳ್ನಾಡು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸೆ.10ರಂದು ನಡೆದಿದ್ದ ರಸ್ತೆ ಅಪಘಾತದಲ್ಲಿ ಗಾಯಗೊಂಡು ಮಂಗಳೂರು ದೇರಳಕಟ್ಟೆಯ ಕೆ.ಎಸ್.ಹೆಗ್ಡೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕೋಡಿಂಬಾಡಿಯ ಮಹಿಳೆಯೋರ್ವರು ಮೃತಪಟ್ಟ ಘಟನೆ ಸೆ.16ರಂದು ನಡೆದಿದೆ. ಕೋಡಿಂಬಾಡಿ ಗ್ರಾಮದ ಸೇಡಿಯಾಪು ಸಮೀಪದ ಬದಿನಾರು ನಿವಾಸಿ ಧರ್ಮಪಾಲ ಗೌಡ ಎಂಬವರ ಪತ್ನಿ ಸುಂದರಿ(52ವ) ಮೃತಪಟ್ಟವರು.
ತನ್ನ ಮಗಳೊಂದಿಗೆ ಸ್ಕೂಟಿಯಲ್ಲಿ ತನ್ನ ಸಂಬಂಧಿಕರ ಮನೆಗೆ ಹೋಗುತ್ತಿದ್ದಾಗ ಸ್ಕೂಟಿ ಸ್ಕಿಡ್ ಆಗಿ ರಸ್ತೆಗೆ ಬಿದ್ದು ಗಂಭೀರ ಗಾಯಗೊಂಡಿದ್ದ ಸುಂದರಿ ಅವರನ್ನು ತಕ್ಷಣವೇ ಸ್ಥಳೀಯರು ಆಂಬುಲೆನ್ಸ್ ಮೂಲಕ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ದೇರಳಕಟ್ಟೆ ಕೆ.ಎಸ್. ಹೆಗ್ಡೆ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿತ್ತು. ಅಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ.
ಮೃತರು ಪತಿ ಧರ್ಮಪಾಲ ಗೌಡ, ಮಕ್ಕಳಾದ ಪ್ರಿಯಾಂಕ ಮತ್ತು ಹರ್ಷಿತಾ ಅವರನ್ನು ಅಗಲಿದ್ದಾರೆ. ಘಟನೆಯ ಕುರಿತು ಕೋಡಿಂಬಾಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಜಯಪ್ರಕಾಶ್ ಬದಿನಾರು ನೀಡಿದ ದೂರಿನಂತೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜಯಪ್ರಕಾಶ್ ಬದಿನಾರು ಅವರ ಉಪಸ್ಥಿತಿಯಲ್ಲಿ ದೇರಳಕಟ್ಟೆ ಕೆ.ಯಸ್. ಹೆಗ್ಡೆ ಆಸ್ಪತ್ರೆಯಲ್ಲಿ ಮೃತರ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು ಬಳಿಕ ಸೇಡಿಯಾಪು ಬದಿನಾರು ಮನೆಯಲ್ಲಿ ಅಂತ್ಯ ಸಂಸ್ಕಾರ ನಡೆಸಲಾಗಿದೆ.