Published
3 months agoon
By
Akkare Newsಬೆಂಗಳೂರು : ಸಂಚಾರಿ ನಿಯಮ ಪಾಲಿಸದೆ ವಾಹನ ಓಡಿಸುವವರ, ಕುಡಿದು ವಾಹನ ಚಲಾಯಿಸುವರ ಚಾಲನಾ ಪರವಾನಗಿಯನ್ನು ರದ್ದು ಮಾಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾರಿಗೆ ಸಚಿವ ರಾಮಲಿಂಗಾರೆಡ್ಡಿಗೆ ಮಹತ್ವದ ಸೂಚನೆ ನೀಡಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ರಾಜ್ಯ ರಸ್ತೆ ಸುರಕ್ಷತಾ ಪ್ರಾಧಿಕಾರದ 65 ಆಧುನಿಕ ಜೀವ ರಕ್ಷಕ ಸವಲತ್ತುಗಳಿರುವ ಆ್ಯಂಬುಲೆನ್ಸ್ ಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಲೋಕಾರ್ಪಣೆ ಮಾಡಿದರು. ವಿಧಾನಸೌಧ ಮುಂಭಾಗದ ಮೆಟ್ಟಿಲುಗಳ ಮೇಲೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ “ಮುಖ್ಯಮಂತ್ರಿಗಳ ಆಪತ್ಕಾಲಯಾನ ಸೇವೆ: ನೂತನ 65 ಆ್ಯಂಬುಲನ್ಸ್ ಗಳನ್ಮು ಲೋಕಾರ್ಪಣೆ” ಮಾಡಿದರು.
ಬಳಿಕ ಮಾತನಾಡಿದ ಸಿದ್ದರಾಮಯ್ಯ ಅವರು, ” ಸಂಚಾರಿ ನಿಯಮಗಳನ್ನು ಶಿಸ್ತಿನಿಂದ ಪಾಲಿಸಿದರೆ ಬಹುತೇಕ ಅಪಘಾತಗಳು ಸಂಭವಿಸುವುದೇ ಇಲ್ಲ. ಕುಡಿದು ವಾಹನ ಓಡಿಸುವುದನ್ನು ನೂರಕ್ಕೆ ನೂರರಷ್ಟು ನಿಲ್ಲಿಸಿ. ನಿಮ್ಮ ಕುಟುಂಬಗಳನ್ನು ಅನಾಥ ಮಾಡಬೇಡಿ” ಎಂದು ಯುವ ಸಮೂಹಕ್ಕೆ ಕರೆ ಕೊಟ್ಟರು.
ಮೊಬೈಲ್ ಮಾತಾಡಿಕೊಂಡು ವಾಹನ ಓಡಿಸಿದರೆ ಅಪಘಾತಗಳಾಗದೆ ಇರುತ್ತದಾ ಎಂದು ಪ್ರಶ್ನಿಸಿದ ಸಿಎಂ, ನಿಮ್ಮ ಜೀವಕ್ಕೆ ನೀವೇ ಜವಾಬ್ದಾರಿ. ನಿಮ್ಮ ಕುಟುಂಬಕ್ಕೆ ನೀವೇ ಜವಾಬ್ದಾರಿ. ಆದ್ದರಿಂದ ಸಂಚಾರಿ ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸಿ. ಸಂಚಾರಿ ನಿಯಮ ಪಾಲಿಸದೆ ವಾಹನ ಓಡಿಸುವವರ, ಕುಡಿದು ವಾಹನ ಚಲಾಯಿಸುವರ ಚಾಲನಾ ಪರವಾನಗಿಯನ್ನು ರದ್ದು ಮಾಡಿ ಎಂದು ಮುಖ್ಯಮಂತ್ರಿಗಳು ಇದೇ ಸಂದರ್ಭದಲ್ಲಿ ಸಾರಿಗೆ ಸಚಿವರಿಗೆ ಸೂಚನೆ ನೀಡಿದರು.