Published
3 months agoon
By
Akkare Newsಮಧ್ಯ ಪ್ರದೇಶದ ಇಂದೋರ್‌ನ ಕಾಲೇಜೊಂದರಲ್ಲಿ ಭಾರತೀಯ ಜನತಾ ಪಾರ್ಟಿ(ಬಿಜೆಪಿ) ಯ ಸದಸ್ಯತ್ವ ಅಭಿಯಾನದ ವಿರುದ್ದ ಅದರ ಸಹೋದರ ಸಂಘಟನೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್(ಎಬಿವಿಪಿ) ಪ್ರತಿಭಟನೆ ನಡೆಸಿದೆ ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಸರ್ಕಾರಿ ಹೋಳ್ಕರ್ ವಿಜ್ಞಾನ ಕಾಲೇಜಿನಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನ ಹಮ್ಮಿಕೊಂಡಿತ್ತು. ಈ ಸಂಬಂಧ ಪ್ರಾಂಶುಪಾಲರ ವಿರುದ್ಧ ಪ್ರತಿಭಟಿಸಿದ ಎಬಿವಿಪಿ ಕಾರ್ಯಕರ್ತರು, “ವಿದ್ಯಾ ದೇಗುಲವನ್ನು ರಾಜಕೀಯ ಕೇಂದ್ರವಾಗಿ ಪರಿವರ್ತಿಸಬೇಡಿ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂದು ವರದಿ ಹೇಳಿದೆ.
ಆರ್‌ಎಸ್‌ಎಸ್‌ನ ಅಂಗಗಳಾದ ಬಿಜೆಪಿ ಮತ್ತು ಎಬಿವಿಪಿ ಪರಸ್ಪರ ಜಟಾಪಟಿಗೆ ಇಳಿದ ಹಿನ್ನೆಲೆ,ಇಂದೋರ್-3 ಕ್ಷೇತ್ರದ ಬಿಜೆಪಿ ಶಾಸಕ ರಾಕೇಶ್ ಶುಕ್ಲಾ ಮತ್ತು ಬಿಜೆಪಿ ಇಂದೋರ್ ನಗರ ಮುಖ್ಯಸ್ಥ ಗೌರವ್ ರಣದಿವ್ ಸಮಸ್ಯೆ ಬಗೆಹರಿಸಲು ಮಧ್ಯಪ್ರವೇಶಿಸಿದ್ದಾರೆ.
ಈ ನಡುವೆ ಎಬಿವಿಪಿಗೆ ಗೊತ್ತಿಲ್ಲದಂತೆ ಕಾಲೇಜಿನ ಪ್ರಾಂಶುಪಾಲರಾದ ಸುರೇಶ್ ಟಿ ಸಿಲಾವತ್ ಅವರು ಕಾಲೇಜಿನಲ್ಲಿ ರಾಜಕೀಯ ಕಾರ್ಯಕ್ರಮಗಳನ್ನು ನಿಷೇಧಿಸಿ ಆದೇಶ ಹೊರಡಿಸಿದ್ದಾರೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ತಿಳಿಸಿದೆ.
ಘಟನೆ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಎಬಿವಿಪಿ ಇಂದೋರ್ ನಗರ ಕಾರ್ಯದರ್ಶಿ ರಿತೇಶ್ ಪಟೇಲ್, “ಕಾಲೇಜು ಆವರಣದಲ್ಲಿ ಬಿಜೆಪಿ ಕಾರ್ಯಕರ್ತರು ಸದಸ್ಯತ್ವ ಅಭಿಯಾನ ನಡೆಸುತ್ತಿರುವುದನ್ನು ಕಂಡು ಬಂತು. ಕಾಲೇಜಿನಲ್ಲಿ ಏಕೆ ಸದಸ್ಯತ್ವ ಮಾಡುತ್ತಿದ್ದೀರಿ ಎಂದು ನಾವು ಪ್ರಶ್ನಿಸಿದೆವು. ಆಗ ಅವರು ಪ್ರಾಂಶುಪಾಲರು ಅನುಮತಿ ನೀಡಿದ್ದಾರೆ ಎಂದರು. ನಾವು ಪ್ರಾಂಶುಪಾಲರನ್ನು ಕೇಳಿದಾಗ “ನಾವು ಅವರಿಗೆ ಅನುಮತಿ ನಿರಾಕರಿಸಲು ಸಾಧ್ಯವಿಲ್ಲ” ಎಂದರು. ಹಾಗಾಗಿ, ನಾವು ಪ್ರತಿಭಟಿಸಿದೆವು” ಎಂದಿದ್ದಾರೆ.
ಇವತ್ತು ಬಿಜೆಪಿ ಬಂದ್ರೆ, ನಾಳೆ ಇನ್ಯಾವುದೋ ಪಕ್ಷ ಬರುತ್ತೆ. ಇದು ಜ್ಞಾನ ದೇಗುಲ, ರಾಜಕೀಯ ಕೇಂದ್ರ ಆಗಬಾರದು ಎಂದು ನಾವು ಅವರಿಗೆ (ಬಿಜೆಪಿ) ಹೇಳಿದ್ದೇವೆ ಎಂದು ರಿತೇಶ್ ಪಟೇಲ್ ವಿವರಿಸಿದ್ದಾರೆ.
ತಪ್ಪು ತಿಳುವಳಿಕೆಯಿಂದ ಈ ಘಟನೆ ನಡೆದಿದೆ ಎಂದು ಬಿಜೆಪಿ ಇಂದೋರ್ ನಗರ ಮುಖ್ಯಸ್ಥ ಗೌರವ್ ರಣದಿವ್ ಪ್ರತಿಕ್ರಿಯಿಸಿದ್ದಾರೆ. ಎಬಿವಿಪಿ ಕ್ಯಾಂಪಸ್ ಒಳಗೆ ಮತ್ತು ನಾವು ಹೊರಗೆ ಕಾರ್ಯಾಚರಣೆ ಮಾಡುತ್ತೇವೆ. ನಾವು ಕ್ಯಾಂಪಸ್ ಹೊರಗೆ ಸದಸ್ಯತ್ವ ಅಭಿಯಾನ ಕೈಗೊಂಡಿದ್ದೆವು. ಈ ಬಗ್ಗೆ ಎಬಿವಿಪಿಯವರಿಗೆ ಮನವರಿಗೆ ಮಾಡಿಕೊಡಲು ಪ್ರಯತ್ನಿಸಿದರೂ ಆಗಿಲ್ಲ ಎಂದಿದ್ದಾರೆ.