Published
3 months agoon
By
Akkare Newsನಿಷೇಧಿತ ಉಲ್ಫಾ (ಯುನೈಟೆಡ್ ಲಿಬರೇಶನ್ ಫ್ರಂಟ್ ಆಫ್ ಅಸೋಮ್-ಇಂಡಿಪೆಂಡೆಂಟ್ (ULFA-I)) ಸಂಘಟನೆಗೆ ಸೇರಿದ ಶಂಕಿತ ಉಗ್ರರನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಮತ್ತು ಅಸ್ಸಾಂ ಪೊಲೀಸರು ಇತ್ತೀಚೆಗೆ ಬೆಂಗಳೂರಿನಲ್ಲಿ ಬಂಧಿಸಿದ್ದಾರೆ ಎಂದು ವರದಿಯಾಗಿದೆ.
ಆರೋಪಿಯನ್ನು ಜಿಗಣಿ ಕೈಗಾರಿಕಾ ಪ್ರದೇಶದ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಗಿರೀಶ್ ಬರುವಾ (26) ಎಂದು ಗುರುತಿಸಲಾಗಿದೆ. ಆರೋಪಿಯು ಕಳೆದ ತಿಂಗಳು ಅಸ್ಸಾಂನ ಉತ್ತರ ಲಖಿಂಪುರ ಜಿಲ್ಲೆಯಲ್ಲಿ ಐಇಡಿಗಳನ್ನು ಇರಿಸಿದ್ದ ಗುಂಪಿನ ಭಾಗವಾಗಿದ್ದಾನೆ ಎಂದು ಹೇಳಲಾಗಿದೆ.
ಎನ್‌ಐಎ ಈ ತಿಂಗಳ ಆರಂಭದಲ್ಲಿ ಈ ಪ್ರಕರಣವನ್ನು ದಾಖಲಿಸಿ ತನಿಖೆ ಪ್ರಾಂಭಿಸಿತ್ತು. ಶಂಕಿತನನ್ನು ಬುಧವಾರ ಬೆಂಗಳೂರಿನ ವಿಶೇಷ ಎನ್‌ಐಎ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು ಮತ್ತು ಆರೋಪಿಯನ್ನು ಟ್ರಾನ್ಸಿಟ್ ರಿಮಾಂಡ್ ಮತ್ತು ಗುವಾಹಟಿಯ ಎನ್‌ಐಎ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಲು ಆದೇಶ ನೀಡಿದೆ.
ಸ್ವಾತಂತ್ರ್ಯ ದಿನದಂದು ಈಶಾನ್ಯ ರಾಜ್ಯದ ಕನಿಷ್ಠ 10 ಸ್ಥಳಗಳಿಂದ ಅಸ್ಸಾಂ ಪೊಲೀಸರು ‘ಬಾಂಬ್ ತರಹದ ವಸ್ತುಗಳನ್ನು’ ಪತ್ತೆ ಹಚ್ಚಿದ್ದರು. ಅದರ ನಂತರ, ಕೆಲವರನ್ನು ಅಸ್ಸಾಂನಲ್ಲಿ ಬಂಧಿಸಲಾಯಿತು ಆದರೆ ಬರುವಾ ತನ್ನ ಸ್ನೇಹಿತರೊಬ್ಬರು ಕರ್ನಾಟಕದ ರಾಜಧಾನಿಯಲ್ಲಿ ತಂಗಿದ್ದರಿಂದ ಬೆಂಗಳೂರಿಗೆ ಬಂದರು.
ಅದೇ ಗೆಳೆಯನೊಂದಿಗೆ ಇದ್ದುಕೊಂಡು ಬೆಂಗಳೂರಿನಲ್ಲಿ ಕೆಲಸಕ್ಕೆ ಹೋಗಲು ಆರಂಭಿಸಿದ್ದ. ಈ ಪ್ರಕರಣದಲ್ಲಿ ಭಾಗಿಯಾಗಿರುವ ಬಗ್ಗೆ ಆತನ ಸ್ನೇಹಿತನಿಗೆ ಯಾವುದೇ ಸುಳಿವು ಇರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.