Published
3 months agoon
By
Akkare Newsಮಂಗಳೂರು: ದ.ಕ. ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಸಹಿತ ಪದೇಪದೆ ಅಪಘಾತಗಳು ಸಂಭವಿಸುತ್ತಿರುವ ಸ್ಥಳಗಳನ್ನು “ಬ್ಲ್ಯಾಕ್ ಸ್ಪಾಟ್’ಗಳೆಂದು ಸುಮಾರು 6 ವರ್ಷಗಳ ಹಿಂದೆಯೇ ಗುರುತಿಸಲಾಗಿದ್ದರೂ ಪರಿಣಾಮಕಾರಿ ಪರಿಹಾರ ಕ್ರಮಗಳು ಇನ್ನೂ ಅನುಷ್ಠಾನ ಗೊಂಡಿಲ್ಲ. ಇಲ್ಲೆಲ್ಲ ಅಪಘಾತಗಳು ಸಂಭವಿಸುತ್ತಲೇ ಇವೆ.
ಮಂಗಳೂರು ನಗರ ಪೊಲೀಸ್ ಕಮಿಷನರೆಟ್ ಸಹಿತ ಜಿಲ್ಲೆಯಲ್ಲಿ ಸಂಭವಿಸಿದ ಅಪಘಾತಗಳಲ್ಲಿ ಇಂತಹ ಬ್ಲ್ಯಾಕ್‌ಸ್ಪಾಟ್‌ಗಳ ಕೊಡುಗೆ ಹೆಚ್ಚು. ಕಮಿಷನರೆಟ್ ವ್ಯಾಪ್ತಿಯ ಮೂಲ್ಕಿ, ಉಳ್ಳಾಲ, ಮೂಡುಬಿದಿರೆ ಸಹಿತ 15 ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿ -66ರಲ್ಲಿ 11 ಬ್ಲ್ಯಾಕ್‌ಸ್ಪಾಟ್‌ಗಳು, ರಾಷ್ಟ್ರೀಯ ಹೆದ್ದಾರಿ 73ರಲ್ಲಿ 2 ಬ್ಲ್ಯಾಕ್‌ಸ್ಪಾಟ್‌ಗಳನ್ನು ಗುರುತಿಸಲಾಗಿದೆ. ದ.ಕ. ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ 2016ರಿಂದ ಇದುವರೆಗೆ 47 ಬ್ಲ್ಯಾಕ್‌ಸ್ಪಾಟ್‌ಗಳನ್ನು ಗುರುತಿಸಲಾಗಿದೆ.
ಕ್ರಮವೇನು?
ದ.ಕ. ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ 2016-18ರಲ್ಲಿ 4 ಬ್ಲ್ಯಾಕ್‌ಸ್ಪಾಟ್‌ಗಳನ್ನು ಗುರುತಿಸಲಾಗಿತ್ತು. 2019-21ರಲ್ಲಿ 34 ಹಾಗೂ 2022-24ರಲ್ಲಿ 9 ಬ್ಲ್ಯಾಕ್‌ಸ್ಪಾಟ್‌ಗಳನ್ನು ಗುರುತಿಸಲಾಗಿದೆ. ಈ ಪೈಕಿ 18 ಬ್ಲ್ಯಾಕ್‌ಸ್ಪಾಟ್‌ಗಳಲ್ಲಿ ಸೂಚನಾ ಫಲಕ, ದುರಸ್ತಿ, ನಿರ್ವಹಣೆ ಮೊದಲಾದ ಪರಿಹಾರ ಕೆಲಸಗಳು ಇನ್ನೂ ಪ್ರಗತಿಯಲ್ಲಿವೆ. ರಾಷ್ಟ್ರೀಯ ಹೆದ್ದಾರಿ 66ರ ಪಾವಂಜೆ, ಮುಕ್ಕ, ತಡಂಬೈಲ್, ಹೊಸಬೆಟ್ಟು, ಕುಳಾಯಿ, ಜೋಕಟ್ಟೆ ಕ್ರಾಸ್, ಕೂಳೂರು, ಕೆಪಿಟಿ, ನಂತೂರು, ರಾಷ್ಟ್ರೀಯ ಹೆದ್ದಾರಿ 73ರ ಬಿಕರ್ನಕಟ್ಟೆ, ಅಡ್ಯಾರ್‌ಕಟ್ಟೆಗಳನ್ನು ಬ್ಲ್ಯಾಕ್‌ಸ್ಪಾಟ್‌ಗಳೆಂದು ಗುರುತಿಸಲಾಗಿದೆ.
13 ಸ್ಪಾಟ್, 275 ಅಪಘಾತ
ಕಮಿಷನರೆಟ್ ವ್ಯಾಪ್ತಿಯ 13 ಬ್ಲ್ಯಾಕ್‌ಸ್ಪಾಟ್‌ಗಳಲ್ಲಿ ಕಳೆದ ಎರಡು ವರ್ಷಗಳಲ್ಲಿ 275 ಅಪಘಾತಗಳು ಸಂಭವಿಸಿವೆ. ಈ ಪೈಕಿ ನಂತೂರಿನಲ್ಲಿ ಅತ್ಯಧಿಕ ಅಂದರೆ 36 ಅಪಘಾತಗಳು ಸಂಭವಿಸಿವೆ. ಕೆಪಿಟಿಯಲ್ಲಿ 20, ಬಿಕರ್ನಕಟ್ಟೆಯಲ್ಲಿ 30, ಕುಳಾಯಿಯಲ್ಲಿ 32 ಹಾಗೂ ಮುಕ್ಕದಲ್ಲಿ 25 ಅಪಘಾತಗಳು ಸಂಭವಿಸಿವೆ. ಸದ್ಯ ನಂತೂರಿನಲ್ಲಿ ಕಾಮಗಾರಿ ನಡೆಯುತ್ತಿದೆ. ಕೆಪಿಟಿಯಲ್ಲಿ ವೆಹಿಕ್ಯುಲರ್ ಓವರ್‌ಪಾಸ್ ಯೋಜನೆ ನನೆಗುದಿಗೆ ಬಿದ್ದಿದೆ. ಉಳಿದ ಕಡೆಗಳಲ್ಲಿ ಪೊಲೀಸರು ಬ್ಯಾರಿಕೇಡ್ ಅಳವಡಿಕೆಯಂತಹ ತಾತ್ಕಾಲಿಕ ಪರಿಹಾರ ಕ್ರಮಗಳನ್ನು ಮಾತ್ರ ಕೈಗೊಂಡಿದ್ದಾರೆ.
ಗುರುತಿಸಿರುವ ಬ್ಲ್ಯಾಕ್‌ಸ್ಪಾಟ್‌ಗಳಲ್ಲಿ ಸರ್ವಿಸ್ ರಸ್ತೆ ನಿರ್ಮಾಣ, ಸೂಕ್ತ ಎಚ್ಚರಿಕೆ ಫಲಕ, ಬೀದಿದೀಪ ಅಳವಡಿಕೆ, ಝೀಬ್ರಾ ಕ್ರಾಸಿಂಗ್, ತಿರುವುಗಳನ್ನು ಸರಿಪಡಿಸುವುದು, ಸ್ಟಾಪ್ ಲೇನ್ ಮಾರ್ಕಿಂಗ್ ಮೊದಲಾದ ಸುರûಾ ಕ್ರಮಗಳಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ರಾಜ್ಯ ಹೆದ್ದಾರಿ ಇಲಾಖೆ, ಪಂಚಾಯತ್‌ರಾಜ್ ಎಂಜಿನಿಯರಿಂಗ್ ಇಲಾಖೆ ಮತ್ತು ಲೋಕೋಪಯೋಗಿ ಇಲಾಖೆಗೆ ಸೂಚನೆ ನೀಡಲಾಗಿದೆ.
615ಕ್ಕೂ ಅಧಿಕ ಮಂದಿ ಸಾವು
ದ.ಕ. ಜಿಲ್ಲೆಯಲ್ಲಿ ಕಮಿಷನರೆಟ್ ವ್ಯಾಪ್ತಿ ಸಹಿತ ಕಳೆದ ಎರಡೂವರೆ ವರ್ಷಗಳಲ್ಲಿ ಸಂಭವಿಸಿರುವ ರಸ್ತೆ ಅಪಘಾತಗಳಲ್ಲಿ 615ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ 8 ತಿಂಗಳಲ್ಲಿ 566 ಅಪಘಾತಗಳು ಸಂಭವಿಸಿ 94 ಮಂದಿ ಸಾವನ್ನಪ್ಪಿದ್ದಾರೆ. ಉಡುಪಿ ಜಿಲ್ಲೆಯಲ್ಲಿ ಕಳೆದೆರಡು ವರ್ಷಗಳಲ್ಲಿ ರಸ್ತೆ ಅಪಘಾತಗಳಲ್ಲಿ 500ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ.
ಇದರಲ್ಲಿ ಬ್ಲ್ಯಾಕ್‌ಸ್ಪಾಟ್‌ಗಳಲ್ಲದ ಸ್ಥಳಗಳಲ್ಲಿ ಸಂಭವಿಸಿದ ಅಪಘಾತಗಳೂ ಸೇರಿವೆ. ಈಗಾಗಲೇ ಗುರುತಿಸಲಾಗಿರುವ ಬ್ಲ್ಯಾಕ್‌ಸ್ಪಾಟ್‌ಗಳನ್ನು ಸರಿಪಡಿಸುವ ಮೊದಲೇ ಮತ್ತಷ್ಟು ಬ್ಲ್ಯಾಕ್‌ಸ್ಪಾಟ್‌ಗಳು ಸೃಷ್ಟಿಯಾಗುತ್ತಿವೆ !
ಉಡುಪಿ ಜಿಲ್ಲೆಯ ಬ್ಲ್ಯಾಕ್‌ಸ್ಪಾಟ್‌ಗಳು
ಪಡುಬಿದ್ರಿ ಜಂಕ್ಷನ್, ಉಚ್ಚಿಲ, ಮೂಳೂರು, ಕಾಪು ವಿದ್ಯಾನಿಕೇತನ ಜಂಕ್ಷನ್, ಪಾಂಗಾಳ, ಅಂಬಲಪಾಡಿ ಜಂಕ್ಷನ್, ನಿಟ್ಟೂರು ಜಂಕ್ಷನ್, ಅಂಬಾಗಿಲು ಜಂಕ್ಷನ್, ಆಶೀರ್ವಾ ದ್, ಸಂತೆಕಟ್ಟೆ ಜಂಕ್ಷನ್, ಮಹೇಶ್ ಹಾಸ್ಪಿಟಲ್ ಜಂಕ್ಷನ್, ಭರಣಿ ಪೆಟ್ರೋಲ್ ಬಂಕ್ ಬ್ರಹ್ಮಾವರ, ಕುಮ್ರಗೋಡು ಕ್ರಾಸ್, ಕೋಟ ಜಂಕ್ಷನ್, ತೆಕ್ಕಟ್ಟೆ ಜಂಕ್ಷನ್, ಕುಂಭಾಶಿ ಸ್ವಾಗತ ಗೋಪುರ, ನೆಹರೂ ಮೈದಾ ನದ ಎದುರು, ತಲ್ಲೂರು ಜಂಕ್ಷನ್, ಮುಳಿಕಟ್ಟೆ ಜಂಕ್ಷನ್ ಗಂಗೊಳ್ಳಿ, ತ್ರಾಸಿ ಜಂಕ್ಷನ್, ಯೆಡ್ತರೆ ಜಂಕ್ಷನ್, ನೀರ್ಗದ್ದೆ ಶಿರೂರು, ಒತ್ತಿನೆಣೆ
ಇಲಾಖೆಗಳಿಗೆ ಸೂಚನೆ
ರಸ್ತೆ ಸುರಕ್ಷಾ ಸಮಿತಿಯ ಸಭೆಗಳಲ್ಲಿ ಬ್ಲ್ಯಾಕ್‌ಸ್ಪಾಟ್‌ಗಳ ಕುರಿತು ಕೂಡ ಪರಿಶೀಲನೆ ನಡೆಸಿ ಸಂಬಂಧಿಸಿದ ಇಲಾಖೆಗಳಿಗೆ ಸೂಚನೆ ನೀಡುತ್ತಿದ್ದೇವೆ.
ಹಲವೆಡೆ ಬ್ಲ್ಯಾಕ್‌ಸ್ಪಾಟ್‌ಗಳನ್ನು ಸರಿಪಡಿಸುವ ಕೆಲಸ ನಡೆಯುತ್ತಿದೆ. ನಂತೂರು, ಕೆಪಿಟಿ ಕೂಡ ಬ್ಲ್ಯಾಕ್‌ಸ್ಪಾಟ್ ಆಗಿದ್ದ ಹಿನ್ನೆಲೆಯಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತಿದೆ. ಬ್ಲ್ಯಾಕ್‌ಸ್ಪಾಟ್‌ಗಳನ್ನು ಗುರುತಿಸುವ, ಪರಿಹಾರ ಕ್ರಮಗಳನ್ನು ಕೈಗೊಳ್ಳುವ ಕೆಲಸಗಳು ನಿರಂತರವಾಗಿ ನಡೆಯುತ್ತಿರುತ್ತವೆ.
-ಮುಲ್ಲೈ ಮುಗಿಲನ್, ದ.ಕ. ಜಿಲ್ಲಾಧಿಕಾರಿ
13 ಕಡೆ ಭಾಗಶಃ ಸರಿಪಡಿಸುವಿಕೆ
ಉಡುಪಿ ಜಿಲ್ಲೆಯಲ್ಲಿ ಒಟ್ಟು 23 ಬ್ಲ್ಯಾಕ್‌ಸ್ಪಾಟ್‌ಗಳನ್ನು ಗುರುತಿಸಲಾಗಿದ್ದು, ಇವುಗಳಲ್ಲಿ 13 ಸ್ಪಾಟ್‌ಗಳಲ್ಲಿ ಭಾಗಶಃ ಮುನ್ನೆಚ್ಚರಿಕೆ ಕ್ರಮಗಳಾದ ಮಾರ್ಗಸೂಚಿಗಳ ಅಳವಡಿಕೆ, ಅನಧಿಕೃತ ಡಿವೈಡರ್‌ಗಳನ್ನು ಮುಚ್ಚಿರುವುದು, ರಸ್ತೆ ಉಬ್ಬುಗಳ ಅಳವಡಿಕೆ ಇತ್ಯಾದಿ ಮಾಡಲಾಗಿದೆ.