Published
2 months agoon
By
Akkare Newsಓಲಾ ಎಲೆಕ್ಟ್ರಿಕ್‌ನಿಂದ ಗ್ರಾಹಕರ ಹಕ್ಕುಗಳ ಉಲ್ಲಂಘನೆಯ ಆರೋಪಗಳನ್ನು ಪರಿಶೀಲಿಸುವಂತೆ ಕೇಂದ್ರ ಸರ್ಕಾರ ಬುಧವಾರ ಆದೇಶಿಸಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಕೇಂದ್ರ ಭಾರೀ ಕೈಗಾರಿಕೆಗಳ ಸಚಿವಾಲಯವು ತನ್ನ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಾಹನ ಪರೀಕ್ಷಾ ಸಂಸ್ಥೆಯಾದ ಆಟೋಮೋಟಿವ್ ರಿಸರ್ಚ್ ಅಸೋಸಿಯೇಷನ್ ಆಫ್ ಇಂಡಿಯಾಗೆ ಈ ಬಗ್ಗೆ ಕೇಳಿಕೊಂಡಿದೆ ಎಂದು ವರದಿ ಉಲ್ಲೇಖಿಸಿದೆ.
ಎಲೆಕ್ಟ್ರಿಕ್ ಸ್ಕೂಟರ್ ತಯಾರಕರಾಗಿರುವ ಓಲಾ ಎಲೆಕ್ಟ್ರಿಕ್ ಸಂಸ್ಥೆಯು ವಾಹನ ತಯಾರಿಕೆ ಮತ್ತು ಅಳವಡಿಕೆಗಾಗಿ ಕೇಂದ್ರ ಸರ್ಕಾರದ ಕನಿಷ್ಠ ಎರಡು ಪ್ರೋತ್ಸಾಹ ಯೋಜನೆಗಳ ಫಲಾನುಭವಿಯಾಗಿದೆ.
ದಾರಿತಪ್ಪಿಸುವ ಜಾಹೀರಾತುಗಳು ಮತ್ತು ಅನ್ಯಾಯದ ವ್ಯಾಪಾರ ಪ್ರಕ್ರಿಯೆಗಳಿಗಾಗಿ ಓಲಾ ಎಲೆಕ್ಟ್ರಿಕ್‌ಗೆ ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರವು ಶೋಕಾಸ್ ನೋಟಿಸ್ ನೀಡಿದ್ದು, ಅದರ ನಂತರ ಕೇಂದ್ರ ಸರ್ಕಾರ ಈ ಆದೇಶ ನೀಡಿದೆ. 2023ರ ಸೆಪ್ಟೆಂಬರ್ 1ರಿಂದ 2024ರ ಆಗಸ್ಟ್ 30ರ ನಡುವೆ ರಾಷ್ಟ್ರೀಯ ಗ್ರಾಹಕ ಸಹಾಯವಾಣಿಯಲ್ಲಿ ಸ್ವೀಕರಿಸಿದ ಗ್ರಾಹಕರ 9,948 ದೂರುಗಳನ್ನು ಆಧರಿಸಿ ಈ ಶೋಕಾಸ್ ನೋಟಿಸ್ ನೀಡಲಾಗಿತ್ತು.
ಕಂಪನಿಯ ಉಚಿತ ಸೇವಾ ಅವಧಿಯಲ್ಲಿ ಬಿಲ್ಲಿಂಗ್ ಮಾಡಿದ್ದು, ಗ್ರಾಹಕರಿಗೆ ವಾಹನ ವಿತರಣೆ ಮತ್ತು ರಿಪೇರಿಯಲ್ಲಿ ವಿಳಂಬ ಮಾಡಿರುವ ಬಗ್ಗೆ ಆರೋಪಿಸಲಾಗಿದೆ.
ಗ್ರಾಹಕರ ಸಮಸ್ಯೆಗಳನ್ನು ಸಮರ್ಪಕವಾಗಿ ಪರಿಹರಿಸಲು ಎರಡು ಪ್ರೋತ್ಸಾಹಕ ಯೋಜನೆಗಳ ಅಡಿಯಲ್ಲಿ ಪ್ರತಿ ವಾಹನ ತಯಾರಕರು ಸಾಕಷ್ಟು ಸೇವಾ ಕೇಂದ್ರಗಳನ್ನು ಹೊಂದಿರಬೇಕು ಎಂದು ಸಚಿವಾಲಯ ಹೇಳಿದೆ. ಓಲಾ ಎಲೆಕ್ಟ್ರಿಕ್ ಸಂಸ್ಥೆ ಸೇರಿದಂತೆ ಈ ಪ್ರೋತ್ಸಾಹಕ ಯೋಜನೆ ಪಡೆದ ಕಂಪನಿಗಳು ಗ್ರಾಹಕರಿಗೆ ವಾರಂಟಿಗಳನ್ನು ನೀಡಬೇಕಾಗುತ್ತದೆ.
ಒಂದು ವರ್ಷದ ಹಿಂದೆಯೇ ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರದ ರಾಷ್ಟ್ರೀಯ ಗ್ರಾಹಕ ಸಹಾಯವಾಣಿಯಲ್ಲಿ ದಾಖಲಾಗಿದ್ದ ದೂರುಗಳನ್ನು ಪರಿಹರಿಸುವಲ್ಲಿ ಓಲಾ ಎಲೆಕ್ಟ್ರಿಕ್ ವಿಫಲವಾಗಿದೆ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ ಕಾರ್ಯದರ್ಶಿ ನಿಧಿ ಖರೆ ಟೈಮ್ಸ್ ಆಫ್ ಇಂಡಿಯಾಗೆ ತಿಳಿಸಿದ್ದಾರೆ.
ಓಲಾ ಸಂಸ್ಥಾಪಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭವಿಶ್ ಅಗರ್ವಾಲ್ ಅವರು ಹಾಸ್ಯನಟ ಕುನಾಲ್ ಕಮ್ರಾ ಅವರೊಂದಿಗೆ ಆನ್‌ಲೈನ್ ಜಗಳ ಮಾಡಿದ ನಂತರ ಸಂಸ್ಥೆಯ ಮೌಲ್ಯ 8% ಕ್ಕಿಂತ ಹೆಚ್ಚು ಕುಸಿದಿರುವ ಬಗ್ಗೆ ವರದಿಯಾಗಿತ್ತು.