Published
2 months agoon
By
Akkare Newsಹರಿಯಾಣದ 20 ವಿಧಾನಸಭಾ ಕ್ಷೇತ್ರಗಳಲ್ಲಿನ ಮತ ಎಣಿಕೆ ಪ್ರಕ್ರಿಯೆಯಲ್ಲಿನ ಅಕ್ರಮಗಳ ಕುರಿತು ತನಿಖೆ ಪೂರ್ಣಗೊಳ್ಳುವವರೆಗೆ ವಿದ್ಯುನ್ಮಾನ ಮತಯಂತ್ರಗಳಿಗೆ ಮೊಹರು ಹಾಕುವಂತೆ ಕಾಂಗ್ರೆಸ್ ಬುಧವಾರ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ. 90 ಸದಸ್ಯ ಬಲದ ಅಸೆಂಬ್ಲಿಯಲ್ಲಿ ಬಿಜೆಪಿ 48 ಸ್ಥಾನಗಳನ್ನು ಗೆದ್ದರೆ, ಕಾಂಗ್ರೆಸ್ 37 ಕ್ಷೇತ್ರಗಳಲ್ಲಿ ಗೆದ್ದಿದೆ.
ಮಂಗಳವಾರ ರಾಜ್ಯದಲ್ಲಿ ಬಿಜೆಪಿ ಜಯಭೇರಿ ಬಾರಿಸಿದ ಕೆಲವೇ ಗಂಟೆಗಳ ನಂತರ, ಕಾಂಗ್ರೆಸ್ ನಾಯಕರಾದ ಪವನ್ ಖೇರಾ ಮತ್ತು ಜೈರಾಮ್ ರಮೇಶ್ ಅವರು ಮತ ಎಣಿಕೆ ಪ್ರಕ್ರಿಯೆ ಮತ್ತು ಹಲವಾರು ಜಿಲ್ಲೆಗಳಲ್ಲಿ ಎಲೆಕ್ಟ್ರಾನಿಕ್ ಮತಯಂತ್ರಗಳ ಕಾರ್ಯಚಟುವಟಿಕೆಗೆ ಸಂಬಂಧಿಸಿ “ಗಂಭೀರ ಸಮಸ್ಯೆಗಳನ್ನು” ಉಲ್ಲೇಖಿಸಿ, ಫಲಿತಾಂಶಗಳು “ಸ್ವೀಕಾರಾರ್ಹವಲ್ಲ” ಎಂದು ಹೇಳಿದ್ದರು.
ಬಿಜೆಪಿ ಗೆದ್ದ ಹಿಸಾರ್, ಮಹೇಂದ್ರಗಢ ಮತ್ತು ಪಾಣಿಪತ್ ಕ್ಷೇತ್ರಗಳಿಂದ ವಿದ್ಯುನ್ಮಾನ ಮತಯಂತ್ರಗಳು 99% ಬ್ಯಾಟರಿ ಮಟ್ಟವನ್ನು ಹೊಂದಿರುವ ಬಗ್ಗೆ ಕಾಂಗ್ರೆಸ್ಗೆ ದೂರುಗಳು ಬಂದಿವೆ ಎಂದು ಪಕ್ಷದ ನಾಯಕ ಪವನ್ ಖೇರಾ ಆರೋಪಿಸಿದ್ದಾರೆ. ಮತಯಂತ್ರಗಳು 60% ರಿಂದ 70% ವರೆಗೆ ಬ್ಯಾಟರಿ ಮಟ್ಟವನ್ನು ಹೊಂದಿದ್ದಲ್ಲಿ ಕಾಂಗ್ರೆಸ್ ಗೆದ್ದಿದೆ ಎಂದು ಅವರು ಹೇಳಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ್ದ ಚುನಾವಣಾ ಆಯೋಗ, ಕಾಂಗ್ರೆಸ್ನ ಹೇಳಿಕೆಗಳು, “ದೇಶದ ಶ್ರೀಮಂತ ಪ್ರಜಾಪ್ರಭುತ್ವ ಪರಂಪರೆಯಲ್ಲಿ ಈ ವರೆಗೆ ಕೇಳಿರದ” ವಿಷಯಗಳಾಗಿವೆ ಎಂದು ಹೇಳಿದೆ. ಚುನಾವಣಾ ಫಲಿತಾಂಶದ ಒಂದು ದಿನದ ನಂತರ ಕಾಂಗ್ರೆಸ್ ಈ ಆಗ್ರಹ ಮುಂದಿಟ್ಟಿದೆ. ಬಹುತೇಕ ಎಕ್ಸಿಟ್ ಪೋಲ್ಗಳು ರಾಜ್ಯದಲ್ಲಿ ಕಾಂಗ್ರೆಸ್ ಗೆಲುವಿನ ಬಗ್ಗೆ ಮುನ್ಸೂಚನೆ ನೀಡಿದ್ದವು.
ಬುಧವಾರದಂದು ಪವನ್ ಖೇರಾ, ಜೈರಾಮ್ ರಮೇಶ್, ಕೆಸಿ ವೇಣುಗೋಪಾಲ್, ಅಶೋಕ್ ಗೆಹ್ಲೋಟ್, ಅಜಯ್ ಮಾಕನ್ ಮತ್ತು ಹರಿಯಾಣದ ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ ಸೇರಿದಂತೆ ಕಾಂಗ್ರೆಸ್ ನಾಯಕರ ನಿಯೋಗವು ನವದೆಹಲಿಯಲ್ಲಿ ಚುನಾವಣಾ ಆಯೋಗದ ಅಧಿಕಾರಿಗಳನ್ನು ಭೇಟಿ ಮಾಡಿ ಅಕ್ರಮಗಳ ಕುರಿತು ಮನವಿ ಸಲ್ಲಿಸಿವೆ.