Published
2 months agoon
By
Akkare Newsಕೌಶಲ್ಯಾಭಿವೃದ್ಧಿ ನಿಗಮದ 371 ಕೋಟಿ ರೂಪಾಯಿ ಹಗರಣದಲ್ಲಿ ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರಿಗೆ ಜಾರಿ ನಿರ್ದೇಶನಾಲಯ (ಇಡಿ) ಕ್ಲೀನ್ ಚಿಟ್ ನೀಡಿದೆ.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದಿನ ಜಗನ್‌ಮೋಹನ್ ರೆಡ್ಡಿ ಸರ್ಕಾರ ರಚಿಸಿದ್ದ ಸಿಐಡಿ ತನಿಖೆ ಆಧರಿಸಿ ಚಂದ್ರಬಾಬು ನಾಯ್ಡು ಅವರನ್ನು 2023ರಲ್ಲಿ ಬಂಧಿಸಲಾಗಿತ್ತು. 53 ದಿನಗಳ ಕಾಲ ಜೈಲಿನಲ್ಲಿದ್ದ ಅವರು ಅಕ್ಟೋಬರ್ 31, 2023ರಂದು ರಂದು ಜಾಮೀನು ಪಡೆದು ಹೊರ ಬಂದಿದ್ದರು.
ಪ್ರಕರಣ ಚಾರ್ಜ್‌ಶೀಟ್‌ನಲ್ಲಿ ಹೆಸರಿಸಲಾದ ಡಿಸೈನ್‌ಟೆಕ್ ಸಿಸ್ಟಮ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿ ಮತ್ತು ಇತರರಿಗೆ ಸೇರಿದ 23.5 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಹಣ ಅಕ್ರಮ ವರ್ಗಾವಣೆ (ತಡೆ) ಕಾಯ್ದೆಯಡಿ ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಿಕೊಳ್ಳಲು ಇಡಿಯ ಹೈದರಾಬಾದ್ ಘಟಕ ಮುಂದಾಗಿದೆ.
ಆದರೆ, ಸೀಮೆನ್ಸ್ ಕಂಪನಿಯ ಸಹಭಾಗಿತ್ವದ ಸರ್ಕಾರದ ಕೌಶಲ್ಯ ಮತ್ತು ಉದ್ಯಮಶೀಲತೆ ಅಭಿವೃದ್ಧಿಯ ಯೋಜನೆಯ ಹಣವನ್ನು ದುರುಪಯೋಗಪಡಿಸಿಕೊಂಡ ಪ್ರಕರಣದಲ್ಲಿ ಚಂದ್ರಬಾಬು ನಾಯ್ಡು ಪಾತ್ರವಿಲ್ಲ ಎಂದಿದೆ.
ಕಳೆದ ಜೂನ್‌ನಲ್ಲಿ ಪ್ರಕಟಗೊಂಡ ಆಂಧ್ರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಮತ್ತು ಲೋಕಸಭೆಯ ಚುನಾವಣೆಯ ಫಲಿತಾಂಶದಲ್ಲಿ ಚಂದ್ರಬಾಬು ನಾಯ್ದು ಅವರ ತೆಲುಗು ದೇಶಂ ಪಕ್ಷ (ಟಿಡಿಪಿ) ಅಭೂತಪೂರ್ವ ಜಯಗಳಿಸಿದೆ. ಪ್ರಸ್ತುತ ಚಂದ್ರಬಾಬು ನಾಯ್ಡು ಆಂಧ್ರ ಪ್ರದೇಶದ ಸಿಎಂ ಆಗಿದ್ದಾರೆ. ಕೇಂದ್ರದಲ್ಲಿ ಎನ್‌ಡಿಎ ಒಕ್ಕೂಟವನ್ನು ಬೆಂಬಲಿಸಿ ಸರ್ಕಾರ ರಚನೆಯಲ್ಲಿ ಮುಖ್ಯ ಪಾತ್ರ ವಹಿಸಿದ್ದಾರೆ.
ಇದಕ್ಕೂ ಎರಡು ತಿಂಗಳ ಮುಂದೆ, ಅಂದರೆ ಏಪ್ರಿಲ್ 5ರಂದು ಚಂದ್ರಬಾಬು ನಾಯ್ದು ಮತ್ತು ಇತರರ ವಿರುದ್ದ ವಿಜಯವಾಡದ ಭ್ರಷ್ಟಾಚಾರ ವಿರೋಧಿ ಬ್ಯೂರೋ (ಎಸಿಬಿ) ಕೋರ್ಟ್‌ಗೆ ಸಿಐಡಿ ಚಾರ್ಜ್‌ಶೀಟ್ ಸಲ್ಲಿಸಿದೆ.
ಸೀಮೆನ್ಸ್ ಯೋಜನೆಯಲ್ಲಿ ರಾಜ್ಯವು ಹೂಡಿಕೆ ಮಾಡಿದ ಹಣವನ್ನು ಬೇರೆಡೆಗೆ ತಿರುಗಿಸುವ ಮೂಲಕ ಆಂಧ್ರ ಸರ್ಕಾರವನ್ನು ವಂಚಿಸಿದ ಆರೋಪದ ಮೇಲೆ ಡಿಸೈನ್‌ಟೆಕ್ ಸಿಸ್ಟಮ್ಸ್ ಮತ್ತು ಇತರರ ವಿರುದ್ಧ ಸಿಐಡಿ ದಾಖಲಿಸಿದ ಎಫ್‌ಐಆರ್ ಆಧರಿಸಿ ಇಡಿ ತನಿಖೆ ಪ್ರಾರಂಭಿಸಿತ್ತು.
ಕಂಪನಿಯ ಎಂಡಿ ವಿಕಾಸ್ ವಿನಾಯಕ್ ಖಾನ್‌ವಾಲ್ಕರ್, ಸೌಮ್ಯಾದ್ರಿ ಶೇಖರ್ ಬೋಸ್, ಅಲಿಯಾಸ್ ಸುಮನ್ ಬೋಸ್ (ಸೀಮೆನ್ಸ್ ಇಂಡಸ್ಟ್ರಿ ಸಾಫ್ಟ್‌ವೇರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನ ಮಾಜಿ ಎಂಡಿ), ಮತ್ತು ಅವರ ಸಹಚರರಾದ ಮುಕುಲ್ ಚಂದ್ರ ಅಗರ್ವಾಲ್ ಮತ್ತು ಸುರೇಶ್ ಗೋಯಲ್ ಅವರು, ಸಾಮಾಗ್ರಿ/ಸೇವೆಗಳನ್ನು ಪೂರೈಸುವ ನೆಪದಲ್ಲಿ ನಕಲಿ ಇನ್‌ವಾಯ್ಸ್‌ಗಳನ್ನು ಬಳಸಿಕೊಂಡು ಬಹು-ಪದರದ ವಹಿವಾಟುಗಳ ಮೂಲಕ ಶೆಲ್ ಕಂಪನಿಗಳು ಅಥವಾ ನಿಷ್ಕ್ರಿಯ ಘಟಕಗಳ ಮೂಲಕ ಸರ್ಕಾರಿ ಹಣವನ್ನು ಬೇರೆಡೆಗೆ ತಿರುಗಿಸಿದ್ದಾರೆ ಎಂಬುವುದು ತನಿಖೆಯಿಂದ ತಿಳಿದು ಬಂದಿರುವುದಾಗಿ ಇಡಿ ಹೇಳಿದೆ.
ಡಿಸೈನ್‌ಟೆಕ್ ಕಂಪನಿಯ 31.2 ಕೋಟಿ ಮೊತ್ತದ ಸ್ಥಿರ ಠೇವಣಿಯನ್ನು ಈ ಹಿಂದೆಯೇ ಇಡಿ ಮುಟ್ಟುಗೋಲು ಹಾಕಿಕೊಂಡಿದೆ. ಖಾನ್‌ವಾಲ್ಕರ್, ಬೋಸ್, ಅಗರ್ವಾಲ್ ಮತ್ತು ಗೋಯಲ್ ಅವರನ್ನು ಬಂಧಿಸಿದೆ. ವಿಶಾಖಪಟ್ಟಣ ಪಿಎಂಎಲ್ಎ ನ್ಯಾಯಾಲಯದಲ್ಲಿ ಪ್ರಾಸಿಕ್ಯೂಷನ್ ದೂರು ದಾಖಲಿಸಿದೆ.
ಮೋದಿಯ ವಾಷಿಂಗ್ ಮೆಷಿನ್‌ನಲ್ಲಿ ಸ್ವಚ್ಛಗೊಂಡ ನಾಯ್ಡು – ಕಾಂಗ್ರೆಸ್
ಬಿಜೆಪಿಯನ್ನು ಬೆಂಬಲಿಸಿದ ಬೆನ್ನಲ್ಲೇ ಚಂದ್ರಬಾಬು ನಾಯ್ಡು ಅವರಿಗೆ ಇಡಿ ಕ್ಲೀನ್ ಚಿಟ್ ನೀಡಿರುವುದಕ್ಕೆ ಕಾಂಗ್ರೆಸ್ ವ್ಯಂಗ್ಯವಾಡಿದೆ. ಈ ಕುರಿತು ಎಕ್ಸ್‌ನಲ್ಲಿ ವಿಡಿಯೋ ಪೋಸ್ಟ್ ಮಾಡಿರುವ ಕಾಂಗ್ರೆಸ್ “ಮೋದಿಯವರ ವಾಷಿಂಗ್ ಮೆಷಿನ್ ಬಗ್ಗೆ ನಿಮಗೆ ಗೊತ್ತಾ? ಈ ವಾಷಿಂಗ್ ಮೆಷಿನ್‌ನಲ್ಲಿ ಭ್ರಷ್ಟಾಚಾರಿಗಳನ್ನು ಹಾಕಿದರೆ ಕೊಳೆಯೆಲ್ಲ ಹೋಗುತ್ತದೆ. ಈ ಬಾರಿ ಚಂದ್ರಬಾಬು ನಾಯ್ಡು ಅವರ ಸರದಿ. ಅವರ ವಿರುದ್ದ ಭ್ರಷ್ಟಾಚಾರದ ಕೊಳೆ ಹೋಗಿದೆ. ಇದು ಬಿಜೆಪಿ ವಾಷಿಂಗ್ ಮೆಷಿನ್” ಎಂದಿದೆ.