Published
2 months agoon
By
Akkare Newsಬಂಟ್ವಾಳ: ಯಕ್ಷಗಾನದ ಹಾಸ್ಯರಾಜ ಎಂದೇ ಹೇಳಲಾಗುವ ಶುದ್ಧ ಹಾಸ್ಯ ನೀಡುವ ಮೂಲಕ ಪ್ರೇಕ್ಷಕರ ಮನರಂಜಿಸುತ್ತಿದ್ದ ಬಂಟ್ವಾಳ ಜಯರಾಮ ಆಚಾರ್ಯ ಬೆಂಗಳೂರಿನಲ್ಲಿ ಅ.21ರಂದು ಬೆಳಗ್ಗೆ ನಿಧನ ಹೊಂದಿದ್ದಾರೆ. ಬೆಂಗಳೂರಿನಲ್ಲಿ ಯಕ್ಷಗಾನ ಕಾರ್ಯಕ್ರಮವೊಂದಕ್ಕೆ ಭಾಗವಹಿಸಲು ಆಗಮಿಸಿದ್ದ ಅವರು ಇಂದು ಮುಂಜಾನೆ ನಾಲ್ಕು ಗಂಟೆಗೆ ಹೃದಯಸ್ತಂಭನವಾಗಿ ಜೊತೆ ಕಲಾವಿದರು ಆಸ್ಪತ್ರೆಗೆ ಸೇರಿಸಿದರೂ ಫಲವಾಗದೆ ನಿಧನ ಹೊಂದಿದ್ದಾರೆ. ಅವರಿಗೆ 67 ವರ್ಷ ವಯಸ್ಸಾಗಿತ್ತು.
ಬಂಟ್ವಾಳದಲ್ಲಿ 1957, ಅಕ್ಟೋಬರ್ 12ರಂದು ಬಂಟ್ವಾಳ ಗಣಪತಿ ಆಚಾರ್ಯ, ಭವಾನಿ ಅಮ್ಮ ಅವರ ಪುತ್ರರಾಗಿ ಜನಿಸಿದ ಜಯರಾಮ ಆಚಾರ್ಯರು, ಬಂಟ್ವಾಳ ಸರಕಾರೀ ಹಿರಿಯ ಪ್ರಾಥಮಿಕ ಶಾಲೆಯಲ್ಲಿ (ಬೋರ್ಡ್ ಶಾಲೆ)ಯಲ್ಲಿ ವಿದ್ಯಾಭ್ಯಾಸ ನಡೆಸಿ, ತಂದೆಯವರ ಪ್ರೇರಣೆಯಿಂದ ಅಮ್ಮಾಡಿ, ಸೊರ್ನಾಡು ಮೇಳಗಳಲ್ಲಿ ತಿರುಗಾಟ ನಡೆಸಿ ವೇಷವನ್ನೂ ಮಾಡಿದ್ದರು. ಬಳಿಕ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ನಡೆಸಲ್ಪಡುತ್ತಿದ್ದ `ಲಲಿತ ಕಲಾ ಕೇಂದ್ರ’ಕ್ಕೆ ಸೇರಿ ಯಕ್ಷಗಾನ ಹೆಜ್ಜೆಗಾರಿಕೆ ಕಲಿತರು. ಅದಾದ ಬಳಿಕ ಕಟೀಲು ಮೇಳದಲ್ಲಿ 4 ವರ್ಷ, ಪುತ್ತೂರು ಮೇಳ, ಕದ್ರಿ ಮೇಳ, ಕುಂಬಳೆ ಮೇಳದಲ್ಲಿ ತಿರುಗಾಟ ನಡೆಸಿದರು.