Published
2 months agoon
By
Akkare News‘ದಿ ಹಿಂದೂ’ ಪತ್ರಕರ್ತ ಮಹೇಶ್ ಲಾಂಗಾ ವಿರುದ್ಧ ಎರಡನೇ ಎಫ್‌ಐಆರ್ ದಾಖಲಿಸಿರುವುದನ್ನು ಪ್ರೆಸ್ ಕ್ಲಬ್ ಆಫ್ ಇಂಡಿಯಾ ಸೇರಿದಂತೆ ವಿವಿಧ ಮಾಧ್ಯಮ ಒಕ್ಕೂಟಗಳು ಖಂಡಿಸಿವೆ.
ಈ ಸಂಬಂಧ ಪ್ರಕಟಣೆ ಹೊರಡಿಸಿರುವ ಪ್ರೆಸ್ ಕ್ಲಬ್ ಆಫ್ ಇಂಡಿಯಾ “ಮಹೇಶ್ ಲಾಂಗಾ ವಿರುದ್ದದ ಎಫ್‌ಐಆರ್ ಹಿಂಪಡೆಯಬೇಕು. ಅವರಿಗೆ ಕಿರುಕುಳ ನೀಡುವುದನ್ನು ನಿಲ್ಲಿಸಬೇಕು” ಎಂದು ಆಗ್ರಹಿಸಿದೆ. ಪತ್ರಿಕಾ ಸ್ವಾತಂತ್ರ್ಯವನ್ನು ಕಾಪಾಡುವಂತೆ ಒತ್ತಾಯಿಸಿದೆ.
ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ ಕೂಡ ಹೇಳಿಕೆ ಬಿಡುಗಡೆ ಮಾಡಿದ್ದು, ಮಹೇಶ್ ಲಾಂಗಾ ಅವರ ವಿರುದ್ಧ ಎರಡನೇ ಎಫ್‌ಐಆರ್ ದಾಖಲಿಸಿರುವುದನ್ನು ಖಂಡಿಸಿದೆ. ಪತ್ರಕರ್ತರು ತಮ್ಮ ಕರ್ತವ್ಯವನ್ನು ನಿರ್ವಹಿಸಲು ಅನುವು ಮಾಡಿಕೊಡುವ ಮೂಲಕ ಪತ್ರಿಕಾ ಸ್ವಾತಂತ್ರ್ಯವನ್ನು ಕಾಪಾಡುವಂತೆ ಆಗ್ರಹಿಸಿದೆ.
ಭಾರತೀಯ ಮಹಿಳಾ ಪತ್ರಿಕಾ ದಳ, ದೆಹಲಿ ಪತ್ರಕರ್ತರ ಒಕ್ಕೂಟ ಮತ್ತು ಕೇರಳದ ಕಾರ್ಯನಿರತ ಪತ್ರಕರ್ತರ ಒಕ್ಕೂಟ ಕೂಡ ಮಹೇಶ್ ಲಾಂಗಾ ವಿರುದ್ದದ ಎರಡನೇ ಎಫ್‌ಐಆರ್ ಹಿಂಪಡೆಯಬೇಕು ಎಂದು ಒತ್ತಾಯಿಸಿವೆ.
ಕಳೆದ ವಾರ, ದಿ ಹಿಂದೂ ಪತ್ರಿಕೆಯ ಮಾಜಿ ಪ್ರಧಾನ ಸಂಪಾದಕ ಎನ್ ರಾಮ್ ಅವರು ಮಹೇಶ್ ಲಾಂಗಾ ವಿರುದ್ದದ ಪೊಲೀಸ್ ಕ್ರಮವನ್ನು ಖಂಡಿಸಿದ್ದರು. ಗೌಪ್ಯ ದಾಖಲೆಗಳನ್ನು ಪಡೆಯುವ ‘ಪತ್ರಕರ್ತರ ಹಕ್ಕನ್ನು’ ಬೆಂಬಲಿಸುವಂತೆ ಕೋರಿದ್ದರು. ಗೌಪ್ಯ ದಾಖಲೆಗಳನ್ನು ಪಡೆದು ವಿಶ್ಲೇಷಿಸುವ ಪತ್ರಕರ್ತರನ್ನು ಜೈಲಿಗೆ ಹಾಕಿದರೆ ಅಥವಾ ದಂಡ ವಿಧಿಸಿದರೆ, ಹೆಚ್ಚಿನ ತನಿಖಾ ವರದಿಗಳು ಮುಚ್ಚಿ ಹೋಗುತ್ತವೆ” ಎಂದು ಹೇಳಿದ್ದರು.
ಜಿಎಸ್‌ಟಿ ವಂಚನೆ ಆರೋಪದಡಿ ಅಕ್ಟೋಬರ್ 8 ರಿಂದ ನ್ಯಾಯಾಂಗ ಬಂಧನದಲ್ಲಿರುವ ದಿ ಹಿಂದೂ ಪತ್ರಿಕೆಯ ಗುಜರಾತ್ ಆವೃತ್ತಿಯ ಸಹಾಯಕ ಸಂಪಾದಕ ಮಹೇಶ್ ಲಾಂಗಾ ಅವರ ವಿರುದ್ಧ ಅಕ್ಟೋಬರ್ 22 ರಂದು ಮತ್ತೊಂದು ಎಫ್‌ಐಅರ್ ದಾಖಲಿಸಲಾಗಿದೆ.
ಗುಜರಾತ್ ಮಾರಿಟೈಮ್ ಬೋರ್ಡ್‌ಗೆ ಸಂಬಂಧಿಸಿದ ಗೌಪ್ಯ ದಾಖಲೆಗಳನ್ನು ಹೊಂದಿರುವ ಆರೋಪದ ಮೇಲೆ ಗಾಂಧಿನಗರದ ಸೆಕ್ಟರ್ 7 ಪೊಲೀಸ್ ಠಾಣೆಯಲ್ಲಿ ಎರಡನೇ ಎಫ್‌ಐಆರ್ ದಾಖಲಾಗಿದೆ.