Published
2 months agoon
By
Akkare Newsಭುವನೇಶ್ವರಿಯ ಭವ್ಯ ಮೆರವಣಿಗೆ ಸಾಧಕರಿಗೆ ರಾಜ್ಯೋತ್ಸವ ಸನ್ಮಾನ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ
ಪುತ್ತೂರು:ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ನ.1ರಂದು 69ನೇ ಕನ್ನಡ ರಾಜ್ಯೋತ್ಸವವು ಕನ್ನಡ ಭುವನೇಶ್ವರಿಯ ಭವ್ಯ ಮೆರವಣಿಗೆ, ಸಾಧಕರಿಗೆ ತಾಲೂಕು ಮಟ್ಟದ ಕನ್ನಡ ರಾಜ್ಯೋತ್ಸವ ಪುರಸ್ಕಾರ, ವಿವಿಧ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗೊಂದಿಗೆ ಸಂಭ್ರಮದಿಂದ ನಡೆಯಿತು.
ಪ್ರಾರಂಭದಲ್ಲಿ ದರ್ಬೆ ವೃತ್ತದ ಬಳಿಯಿಂದ ಕನ್ನಡ ಭುವನೇಶ್ವರಿಯ ಭವ್ಯ ಮೆರವಣಿಗೆಯು ನಡೆಯಿತು. ಮೆರವಣಿಗೆಗೆ ಶಾಸಕ ಅಶೋಕ್ ಕುಮಾರ್ ರೈಯವರು ಚಾಲನೆ ನೀಡಿದರು. ಬಳಿಕ ಕನ್ನಡ ಭುವನೇಶ್ವರಿಯ ರಥದ ಜೊತೆಗೆ ಶಾಸಕರು ಹಾಗೂ ಅಧಿಕಾರಿಗಳು, ವಿವಿಧ ಸಂಘ ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಮೆರವಣಿಗೆಯಲ್ಲಿ ಕಾಲ್ನಡಿಗೆಯಲ್ಲಿ ಸಾಗಿ ಬಂದರು. ದರ್ಬೆಯಿಂದ ಹೊರಟ ಮೆರವಣಿಗೆಯು ಮುಖ್ಯ ರಸ್ತೆಯ ಮೂಲಕ ಸಾಗಿ ಕಿಲ್ಲೆ ಮೈದಾನ ಬಳಿಯ ಮಂಗಲ್ ಪಾಂಡೆ ಚೌಕದ ಬಳಿ ಸಂಪನ್ನಗೊಂಡಿತು.
ನಂತರ ನಗರ ಠಾಣೆಯ ಎಸ್.ಐ ಆಂಜನೇಯ ರೆಡ್ಡಿ ನೇತೃತ್ವದಲ್ಲಿ ಪೊಲೀಸ್ ಇಲಾಖೆ, ಗೃಹರಕ್ಷಕದಳ, ಅಗ್ನಿಶಾಮಕ ದಳ, ಕೊಂಬೆಟ್ಟು ಪ್ರೌಢಶಾಲೆಯ ಎನ್‌ಸಿಸಿ ಮತ್ತು ಎಸ್‌ಪಿಸಿ, ಸಂತ ಫಿಲೋಮಿನಾ ಪ್ರೌಢಶಾಲೆಯ ಎನ್‌ಸಿಸಿ ಮತ್ತು ರಾಮಕೃಷ್ಣ ಪ್ರೌಢಶಾಲೆಯ ಸೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಿಂದ ಪಥಸಂಚಲನ ಹಾಗೂ ಗೌರವರಕ್ಷೆ ನೆರವೇರಿತು. ಸಹಾಯಕ ಆಯುಕ್ತ ಜುಬಿನ್ ಮೊಹಪಾತ್ರ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಸಂದೇಶ ನೀಡಿದರು. ಬಳಿಕ ಪುರಭವನದ ಮುಂಭಾಗದಲ್ಲಿ ಶಾಸಕ ಅಶೋಕ್ ಕುಮಾರ್ ರೈಯವರು ಕನ್ನಡ ಧ್ವಜಾರೋಹಣ ನೆರವೇರಿಸಿದರು.
.ಸಾಧಕರಿಗೆ ತಾಲೂಕು ಕನ್ನಡ ರಾಜ್ಯೋತ್ಸವ ಪುರಸ್ಕಾರ:
ಜಾನಪದ ಕ್ಷೇತ್ರದಲ್ಲಿ ಪಿಲಿರಾಧಾ ಖ್ಯಾತಿಯ ರಾಧಾಕೃಷ್ಣ ರೈ, ಕ್ರೀಡಾ ಕ್ಷೇತ್ರದಲ್ಲಿ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕಿ ವೇದಾವತಿ, ಸಮಾಜ ಸೇವಾ ಕ್ಷೇತ್ರದಲ್ಲಿ ಅಮೆಚೂರು ಕಬಡ್ಡಿ ಅಸೋಸಿಯೇಶನ್ ಕೋಶಾಧಿಕಾರಿ ಅಬ್ದುಲ್ ರಝಾಕ್ ಬಪ್ಪಳಿಗೆ, ರಂಗಭೂಮಿ ಕ್ಷೇತ್ರದಲ್ಲಿ ನಾಟಕ ಕಲಾವಿದ ತಿಮ್ಮಪ್ಪ ಪೂಜಾರಿ, ವೈದ್ಯಕೀಯ ಕ್ಷೇತ್ರದಲ್ಲಿ ಮಕ್ಕಳ ತಜ್ಞ ಡಾ.ಸತೀಶ್ ಶೆಣೈ, ದಂತ ವೈದ್ಯಕೀಯ ಕ್ಷೇತ್ರದಲ್ಲಿ ಉಪ್ಪಿನಂಗಡಿಯ ದಂತ ವೈದ್ಯ ಡಾ.ರಾಜಾರಾಮ್ ಕೆ.ಬಿ., ಹೈನುಗಾರಿಕೆ ಮತ್ತು ಕೃಷಿಯಲ್ಲಿ ಪ್ರಗತಿ ಪರ ಕೃಷಿಕ ಜಯಗುರು ಆಚಾರ್ ಹಿಂದಾರು, ಸಮಾಜ ಸೇವಾ ಕ್ಷೇತ್ರದಲ್ಲಿ ಪಾಕತಜ್ಞ ಹರೀಶ್ ರಾವ್, ಪತ್ರಿಕೋದ್ಯಮದಲ್ಲಿ ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಡಾ.ಯು.ಪಿ ಶಿವಾನಂದ, ಶಿಕ್ಷಣ ಕ್ಷೇತ್ರದಲ್ಲಿ ಮಕ್ಕಳ ಮಂಟಪದ ಡಾ.ಸುಕುಮಾರ ಗೌಡ ಹಾಗೂ ಸಂಘ ಸಂಸ್ಥೆ ವಿಭಾಗದಲ್ಲಿ ರೋಟರಿ ಕ್ಲಬ್ ಪುತ್ತೂರು ಇದರ ಅಧ್ಯಕ್ಷ ಡಾ.ಶ್ರೀಪತಿ ರಾವ್ ರವರಿಗೆ ಕನ್ನಡ ರಾಜ್ಯೋತ್ಸವ ತಾಲೂಕು ಪುರಸ್ಕಾರ ನೀಡಿ ಗೌರವಿಸಲಾಯಿತು.
ರಾಜಕೀಯದಲ್ಲೂ ನಿವೃತ್ತಿಯಿರಬೇಕು, ಯುವ ಜನತೆ ರಾಜಕೀಯಕ್ಕೆ ಬರಬೇಕು-ಅಶೋಕ್ ಕುಮಾರ್ ರೈ:
ಕನ್ನಡ ಧ್ವಜಾರೋಹಣ ನೆರವೇರಿಸಿ, ಪುರಭವನದಲ್ಲಿ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಅಶೋಕ್ ಕುಮಾರ್ ರೈಯವರು ಮಾತನಾಡಿ, ರಾಜಕೀಯವೆಂದರೆ ಸಾಯುವ ತನಕ ಒಬ್ಬರೇ ರಾಜ್ಯಭಾರ ಮಾಡುವಂತಾಗಿದೆ. 85-90 ವಯಸ್ಸಾದರೂ ಚೆಯರ್ ಬಿಡಲು ಮನಸ್ಸಿಲ್ಲ. ರಾಜಕೀಯದಲ್ಲೂ 65 ವರ್ಷಕ್ಕೆ ನಿವೃತ್ತಿಯಿರಬೇಕು. ರಾಜಕೀಯಕ್ಕೂ ಯುವ ಜನತೆ ಬರಬೇಕು. ಆಗ ಹೊಸ ಯುಗಗಳು ಮುಂದೆ ಬರುವ ಕಲ್ಪಣೆಯಿರುತ್ತದೆ. ರಾಜಕೀಯವೆಂದರೆ ರಾಜ್ಯ, ದೇಶವನ್ನು ಆಳುವ ಕೆಲಸ. ಅದರಲ್ಲಿ ಕೊಳಕು ಏನಿಲ್ಲ. ಜನರ ಸೇವೆ ಮಾಡುವುದಾಗಿದೆ. ನಾವು ಉತ್ತಮವಾಗಿದ್ದರೆ ಜನರು ನಮ್ಮನ್ನು ಗೌರವಿಸುತ್ತಾರೆ. ಮಕ್ಕಳು ರಾಜಕೀಯಕ್ಕೆ ಹೊಗದಂತೆ ಪೋಷಕರು ತಡೆಯಬಾರದು. ಮಕ್ಕಳಿಗೆ ರಾಜ್ಯಶಾಸ್ತ್ರವನ್ನು ಓದಿಸಬೇಕು. ರಾಜಕೀಯವೆಂದರೆ ಕಾಳೆಲೆಯುವ ಕೆಲಸವಲ್ಲ. ದೇಶವನ್ನು ಆಳುವ ಕೆಲಸ. ದೇಶಕ್ಕೆ ರಾಜ್ಯಕ್ಕೆ ನ್ಯಾಯ ಕೊಡುವ ಕೆಲಸವಾಗಿದೆ ಎಂದರು.
ಕರ್ನಾಟಕ ಅತ್ಯಂತ ವೇಗದಲ್ಲಿ ಮುಂದುವರಿಯುತ್ತಿರುವ ರಾಜ್ಯ. ದೇಶದಲ್ಲಿ ಅತೀ ಹೆಚ್ಚು ತೆರಿಗೆ ಪಾವತಿಸುವ ರಾಜ್ಯಗಳಲ್ಲಿ ಕರ್ನಾಟಕ ದೇಶದಲ್ಲಿ ಎರಡನೇ ಸ್ಥಾನದಲ್ಲಿದೆ.
ಅತೀ ಹೆಚ್ಚು ಜ್ಞಾನಿಗಳು ಕರ್ನಾಟಕದಲ್ಲಿದ್ದಾರೆ. ಪುತ್ತೂರಿನ ಅಭಿವೃದ್ಧಿಗಾಗಿ ಶಾಸಕನಾಗಿ ಮೊದಲನೇ ವರ್ಷದಲ್ಲಿ ರೂ.1476 ಕೋಟಿ ಅನುದಾನ ತರಲಾಗಿದೆ ಎಂದು ಹೇಳಿದ
ಶಾಸಕರು ಭಾಷೆ ಕನ್ನಡ ಬೇರೆ ಬಾಷೆಗಳು ಬಂದು ರಾಜ್ಯಬಾಷೆಗಳನ್ನು ನುಂಗುವ ಪರಿಸ್ಥಿತಿಯಲ್ಲಿ ನಾವಿದ್ದೇವೆ. ಇಂಗ್ಲಿಷ್ ಫ್ಯಾನಿಯಾಗಿದೆ. ನಮ್ಮ ಭಾಷೆಗಳನ್ನು ಮುಂದಿಟ್ಟುಕೊಂಡು
ಇತರ ಭಾಷೆಗಳನ್ನು ಕಲಿಯಬೇಕು. ಆಂಗ್ಲ ಮಾಧ್ಯಮದ ಕೆಲ ವಿದ್ಯಾರ್ಥಿಗಳಿಗೆ ಕನ್ನಡ ಓದಲು ಗೊತ್ತಿಲ್ಲದ ಪರಿಸ್ಥಿತಿಯಲ್ಲಿದ್ದಾರೆ. ಕನ್ನಡದ ಜೊತೆಗೆ ಇತರ ಭಾಷೆಗಳನ್ನು
ಕಲಿಯಬೇಕು. ನಾಡ ಭಾಷೆಗೆ ಗೌರವ ಕೊಡಬೇಕು ಎಂದು ಶಾಸಕ ಅಶೋಕ್ ಕುಮಾರ್ ರೈಯವರು ತಿಳಿಸಿದರು.
ದೇಶದ ಆರ್ಥಿಕತೆಯಲ್ಲಿ ಶೇ.10ರಷ್ಟು ಕೊಡುಗೆ ಕರ್ನಾಟಕದ್ದು-ಜುಬಿನ್ ಮೊಹಪಾತ್ರ:
ಕಿಲ್ಲೆ ಮೈದಾನದ ಬಳಿಯಿರುವ ಮಂಗಲ್ ಪಾಂಡೇ ಚೌಕದಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಿದ ಸಹಾಯಕ ಆಯುಕ್ತ ಜುಬಿನ್ ಮೊಹಪಾತ್ರ ಮಾತನಾಡಿ, ಪ್ರಪಂಚದ ಆರ್ಥಿಕ ಸ್ಥಿತಿಯಲ್ಲಿ ಭಾರತ 5ನೇ ಸ್ಥಾನದಲ್ಲಿದೆ. ದೇಶದಲ್ಲಿ ಕರ್ನಾಟಕ ರಾಜ್ಯ 3ನೇ ಸ್ಥಾನದಲ್ಲಿದೆ. ದೇಶದ ಆರ್ಥಿಕತೆಯಲ್ಲಿ ಸುಮಾರು ಶೇ.10ರಷ್ಟು ಕೊಡುಗೆ ಕರ್ನಾಟಕದ್ದಾಗಿದೆ. ಬೆಂಗಳೂರು ಸಿಲಿಕಾನ್ ಸಿಟಿಯಾಗಿ ವೇಗವಾಗಿ ಅಭಿವೃದ್ಧಿ ಹೊಂದುತ್ತಿದ್ದು ಬೆಂಗಳೂರು ಸಿಟಿ ಸ್ಟಾರ್ಟ್ ಅಪ್ ಕ್ಯಾಪಿಟಲ್ ಆಪ್ ಆಗಿದೆ. ಮುಂದಿನ 10 ವರ್ಷದಲ್ಲಿ ಬೆಂಗಳೂರು ಕ್ಯಾಲಿಫೋರ್ನಿಯಾ ಆಫ್ ಇಂಡಿಯಾವಾಗಲಿದೆ. ಕರ್ನಾಟಕದಿಂದ ದೇಶಕ್ಕೆ ಕೇವಲ ಆರ್ಥಿಕ ಕೊಡುಗೆ ಮಾತ್ರವಲ್ಲ. ಶ್ರೀಮಂತ ಸಂಪ್ರದಾಯ ಹೊಂದಿರುವ ರಾಜ್ಯಗಳಲ್ಲಿ ಕರ್ನಾಟಕವೇ ಪ್ರಥಮವಾಗಿದೆ. ಅದರಲ್ಲಿಯೂ ದ.ಕ ಜಿಲ್ಲೆ ಸಾಂಸ್ಕೃತಿಕ ನಗರವಾಗಿದೆ. ಸಂವಿಧಾನ ರಚನೆಯಲ್ಲಿಯೂ ಕರ್ನಾಟಕದ ಕೊಡುಗೆಯಿದ್ದು ದ.ಕ ಜಿಲ್ಲೆಯ ಮಂಗಳೂರಿನ ಡಾ. ಬಿ.ಎನ್ ರಾವ್‌ರವರು ಪ್ರಮುಖರಾಗಿದ್ದರು ಎಂದರು.
ಮುಖ್ಯ ಅತಿಥಿ ನಗರ ಸಭಾ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ ಮಾತನಾಡಿ, 69ನೇ ಕನ್ನಡ ರಾಜ್ಯೋತ್ಸವವನ್ನು ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದೆ ಎಂದರು. ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ಇದರ ಅಧ್ಯಕ್ಷ ಉಮೇಶ್ ನಾಯಕ್ ಮಾತನಾಡಿ, ತಾಲೂಕು ಆಡಳಿತ ಸಹಕಾರದೊಂದಿಗೆ ಎಲ್ಲರನ್ನು ಸೇರಿಸಿಕೊಂಡು ಕನ್ನಡ ರಾಜ್ಯೋತ್ಸವವನ್ನು ವಿಜೃಂಭನೆಯಿಂದ ಆಚರಿಸಲಾಗಿದೆ. ಬಹಳಷ್ಟು ಸಂಘ ಸಂಸ್ಥೆಗಳ ಭಾಗಿಯಾಗಿದೆ. ನಾವು ಮನೆಯಲ್ಲಿ ಮಾತನಾಡುವ ಭಾಷೆ ಯಾವುದೇ ಇರಬಹುದು ಆದರೆ ಸಾರ್ವಜನಿಕವಾಗಿ ಮಾತನಾಡುವಾಗ ಕನ್ನಡ ಭಾಷೆಯಲ್ಲಿಯೇ ಮಾತನಾಡುವ ಮೂಲಕ ಕನ್ನಡವನ್ನು ಉಳಿಸಬೇಕು ಎಂದರು.
ತಾ.ಪಂ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ, ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್., ನಗರ ಠಾಣಾ ನಿರೀಕ್ಷಕ ಜಾನ್ಸನ್ ಡಿ ಸೋಜ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕ್ರೀಡಾ ಸಮವಸ್ತ್ರ ವಿತರಣೆ;
ಜಿಲ್ಲಾ ಮಟ್ಟದ ಕ್ರೀಡಾ ಕೂಟಕ್ಕೆ ಆಯ್ಕೆಯಾದ ಕ್ರೀಡಾಪಟುಗಳಿಗೆ ತಾ.ಪಂನಿಂದ ನೀಡಲಾಗುವ ಸಮವಸ್ತ್ರವನ್ನು ಜಿ.ಎಂ ಕೀರ್ತಿ, ದಯಾ ಕೆ., ನಿಖಿತಾ, ಋತಿಕ್,ನಳಿನಾ, ವಿಜೇತ, ಸಾನ್ವಿ ಎಸ್., ಧನ್ವಿ, ಚಂದನ್ ಕೆ.ವಿ. ಹಾಗೂ ಭರತ್ ಕುಮಾರ್ ಕುಮಾರ್‌ರವರಿಗೆ ಶಾಸಕರು ವಿತರಿಸಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಹಾಯಕ ಆಯುಕ್ತರ ತಂದೆ, ನಿವೃತ್ತ ಯೋಧ, ಕನ್ನಡ ಭುವನೇಶ್ವರಿ ಮೆರವಣಿಗೆಯಲ್ಲಿ ಸಹಕರಿಸಿದ 45 ಸಂಘ ಸಂಸ್ಥೆಗಳು ಹಾಗೂ ಕಾರ್ಯಕ್ರಮದಲ್ಲಿ ಸಹಕರಿಸಿದ ಎಲ್ಲಾ ಸಂಘ ಸಂಸ್ಥೆಗಳು, ಶಾಲೆಗಳನ್ನು ಕಾರ್ಯಕ್ರಮದಲ್ಲಿ ಗೌರವಿಸಲಾಯಿತು.
ಸಭಾ ಕಾರ್ಯಕ್ರಮವು ರೈತಗೀತೆಯೊಂದಿಗೆ ಪ್ರಾರಂಭಗೊಂಡಿತು. ತೆಂಕಿಲ ವಿವೇಕಾನಂದ ಶಾಲಾ ವಿದ್ಯಾರ್ಥಿಗಳು ರೈತಗೀತೆ ಹಾಡಿದರು. ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಅಧ್ಯಕ್ಷರಾಗಿರುವ ತಹಶಿಲ್ದಾರ್ ಪುರಂದರ ಸ್ವಾಗತಿಸಿದರು. ಪೌರಾಯುಕ್ತ ಮಧು ಎಸ್ ಮನೋಹರ್ ವಂದಿಸಿದರು. ಶಿಕ್ಷಕ ಬಾಲಕೃಷ್ಣ ರೈ ಪೊರ್ದಾಲ್ ಕಾರ್ಯಕ್ರಮ ನಿರೂಪಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮ:
ಸಭಾ ಕಾರ್ಯಕ್ರಮದ ಬಳಿಕ ಹಾರಾಡಿ ಹಿ.ಪ್ರಾ ಶಾಲೆ, ದರ್ಬೆ ಲಿಟ್ಸ್ ಫ್ಲವರ್ ಹಿ.ಪ್ರಾ ಶಾಲೆ, ಪಾಂಗಳಾಯಿ ಬೆಥನಿ ಆಂಗ್ಲ ಮಾಧ್ಯಮ ಶಾಲೆ, ಮಂಜಲ್ಪಡು ಸುದಾನ ವಸತಿಯುತ ಶಾಲೆ ಹಾಗೂ ಮುಂಡೂರು ಹಿ.ಪ್ರಾ ಶಾಲಾ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಕನ್ನಡ ರಾಜ್ಯೋತ್ಸವದಲ್ಲಿ ಮೇಲೈಸಿದ್ದವು.