Published
2 months agoon
By
Akkare Newsಪುತ್ತೂರು: ಕುರಿಯ ಗ್ರಾಮದ ನಿವಾಸಿಯಾಗಿರುವ ಉದ್ಯಮಿ ಜಯರಾಮ್ ರೈ ಹಾಗೂ ಸುದ್ದಿ ಚಾನೆಲ್ ನ ನಿರೂಪಕಿ ಹೇಮಾ ಜಯರಾಮ್ ದಂಪತಿ ಪುತ್ರಿ ಬಹುಮುಖ ಪ್ರತಿಭೆ, ನರಿಮೊಗರುವಿನಲ್ಲಿರುವ ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆಯ ಪ್ರತಿಭಾನ್ವಿತ ವಿದ್ಯಾರ್ಥಿನಿಯಾಗಿರುವ ಜ್ಞಾನ ರೈ ಅವರಿಗೆ ಕನ್ನಡ ರಾಜ್ಯೋತ್ಸವದ ಅಂಗವಾಗಿ 2024-25ನೇ ಸಾಲಿನ ದ.ಕ. ಜಿಲ್ಲಾ ಪ್ರಶಸ್ತಿಯನ್ನು ನ 1ರಂದು ಮಂಗಳೂರಿನಲ್ಲಿ ಪ್ರದಾನ ಮಾಡಲಾಯಿತು.
ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ದಿನೇಶ್ ಗುಂಡೂರಾವ್ ಅವರು ಸಂಸದ ಕ್ಯಾ| ಬೃಜೇಶ್ ಚೌಟ, ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್, ವಿಧಾನ ಪರಿಷತ್ ಸದಸ್ಯ ಐವನ್ ಡಿ’ಸೋಜಾ ಸಮ್ಮುಖದಲ್ಲಿ ಈ ಪ್ರಶಸ್ತಿಯನ್ನು ಜ್ಞಾನ ರೈ ಅವರಿಗೆ ಪ್ರದಾನಿಸಲಾಯಿತು.
ಬಹುಮುಖ ಪ್ರತಿಭೆ ಜ್ಞಾನ ರೈ ಬಗ್ಗೆ..:
ಬಾಲ್ಯದಿಂದಲೇ ನೃತ್ಯ ಹಾಗೂ ಅಭಿನಯದಲ್ಲಿ ಆಸಕ್ತಿ ಹೊಂದಿ ಈ ವಿಭಾಗದಲ್ಲಿ ಈಗಾಗಲೇ ಜ್ಞಾನ ಅವರು ಹಲವು ಬಹುಮಾನ ಹಾಗೂ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಪಠ್ಯೇತರ ಮಾತ್ರವಲ್ಲದೇ ಪಠ್ಯ ಚಟುವಟಿಕೆಗಳಲ್ಲೂ ಜ್ಞಾನ ರೈ ಮುಂದಿದ್ದಾರೆ ಹಾಗೂ ನಿರೂಪಣೆಯಲ್ಲೂ ಇವರದ್ದು ಎತ್ತಿದ ಕೈ.
ನಟನೆಯಲ್ಲೂ ಸೈ ಎನ್ನಿಸಿಕೊಂಡಿರುವ ಜ್ಞಾನ ರೈ ಅವರು ಸಾಮಾಜಿಕ ಕಳಕಳಿ ಸಾರುವ ಕಿರುಚಿತ್ರ ‘ನಿರಾಕರಣ’ ಹಾಗೂ ‘ಗೆನದಾಂತಿ ಉಡಲ್’ ಎನ್ನುವ ಸಾಮಾಜಿಕ ಸಂದೇಶ ಸಾರುವ ಕಿರುಚಿತ್ರಗಳಲ್ಲಿ ಮುಖ್ಯಪಾತ್ರಗಳಲ್ಲಿ ನಟಿಸಿ ಉತ್ತಮ ಬಾಲನಟಿ ಎಂಬ ಮೆಚ್ಚುಗೆ ಗಳಿಸಿದ್ದಾರೆ.
ಖ್ಯಾತ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ‘ಬಿರ್ದ್ ದ ಕಂಬಳ’ ಹಾಗೂ ತೆಲುಗಿನ ಒಕ್ಕಟೆ ಆಶಾ ಹಾಗೂ ಹಲವಾರು ತುಳು ಚಿತ್ರಗಳಲ್ಲಿ ಬಾಲ ನಟಿಯಾಗಿ ಮಿಂಚಿರುವ ಇವರು ಭವಿಷ್ಯದಲ್ಲಿ ತಾನೊಬ್ಬ ಉತ್ತಮ ನಟಿಯಾಗುವ ಭರವಸೆಯನ್ನು ಮೂಡಿಸಿದ್ದಾರೆ. ಮಾತ್ರವಲ್ಲದೇ ಜಾಹೀರಾತು ರೂಪದರ್ಶಿಯಾಗಿಯೂ ಮಿಂಚಿರುವ ಮತ್ತು ಹಲವಾರು ಆಲ್ಬಂ ಸಾಂಗ್ ಗಳಲ್ಲಿ ನಟಿಸಿರುವ ಜ್ಞಾನ ರೈ ಅವರು ನಿಜಾರ್ಥದಲ್ಲಿ ಬಹುಮುಖ ಪ್ರತಿಭೆಯಾಗಿದ್ದಾರೆ.
ಹಲವಾರು ಧಾರ್ಮಿಕ ಮತ್ತು ಸಾಂಸ್ಕೃತಿಕ ಮಾತ್ರವಲ್ಲದೇ ವಿವಿಧ ಸಂಘಸಂಸ್ಥೆಗಳು ಆಯೋಜಿಸಿದ್ದ ಕಾರ್ಯಕ್ರಮಗಳ ವೇದಿಕೆಯಲ್ಲಿ ನೃತ್ಯಪ್ರದರ್ಶನ ನೀಡುವ ಮೂಲಕ ತಾವು ಉತ್ತಮ ನೃತ್ಯಪಟು ಎಂಬುದನ್ನು ಸಾಬೀತುಪಡಿಸಿದ್ದಾರೆ. ಕರಾಟೆಯಲ್ಲಿ ಬ್ಲೂಬೆಲ್ಟ್ ಅನ್ನು ಹೊಂದಿರುವ ಇವರು ತಾಲೂಕು ಹಾಗೂ ಜಿಲ್ಲೆಯನ್ನು ಪ್ರತಿನಿಧಿಸಿರುತ್ತಾರೆ. ರಾಜ್ಯಮಟ್ಟದ ಭಾಷಣ ಸ್ಪರ್ಧೆಯಲ್ಲೂ ವಿಜೇತೆಯಾಗಿರುತ್ತಾರೆ.
ರಾಜ್ಯ ಹಾಗೂ ಅಂತರ್ ರಾಜ್ಯ ಮಟ್ಟದ ಹಲವಾರು ಧಾರ್ಮಿಕ, ಸಾಂಸ್ಕೃತಿಕ, ಸಾಹಿತ್ಯ ವೇದಿಕೆಗಳಲ್ಲಿ ಯಾವುದೇ ಫಲಾಪೇಕ್ಷೆ ಇಲ್ಲದೆ 500ಕ್ಕೂ ಹೆಚ್ಚು ಕಲಾ ಸೇವೆಯನ್ನ ನೀಡಿರುತ್ತಾರೆ. ದೈಜಿ ವರ್ಲ್ಡ್ ವಾಹಿನಿಯ ಜೂನಿಯರ್ ಸೆಲೆಬ್ರಿಟಿ ರಿಯಾಲಿಟಿ ಶೋ ನಲ್ಲಿ ಭಾಗವಹಿಸಿ ಸೆಮಿ ಫೈನಲ್ ಹಂತವನ್ನು ತಲುಪಿರುತ್ತಾರೆ. ಇವರ ಪ್ರತಿಭೆಯನ್ನ ಗುರುತಿಸಿ ಹಲವಾರು ಸಂಘ ಸಂಸ್ಥೆಗಳು ಈಗಾಗಲೇ ಹಲವಾರು ಪ್ರಶಸ್ತಿ ಪುರಸ್ಕಾರಗಳನ್ನು ನೀಡಿ ಗೌರವಿಸಿ ವೆ. ಸುದ್ದಿ ಬಿಡುಗಡೆಯ ಪ್ರತಿಭಾ ದೀಪ ಪುರಸ್ಕಾರ, ಆರ್ಯಭಟ ರಾಷ್ಟ್ರೀಯ ಪ್ರಶಸ್ತಿ, ಕರುನಾಡ ಸಿರಿ ಪ್ರಶಸ್ತಿ, ಕರುನಾಡ ತಾರೆ ಪ್ರಶಸ್ತಿ, ಗಡಿನಾಡ ರತ್ನ ಪ್ರಶಸ್ತಿ, ರಾಜ್ಯ ವಿಭೂಷಣ ಪ್ರಶಸ್ತಿ, ಕಲಾ ಚೈತನ್ಯ ಪ್ರಶಸ್ತಿ, ವಿಶ್ವ ಮಾನ್ಯ ಕನ್ನಡಿಗ ಪ್ರಶಸ್ತಿ, ಸಿದ್ದಗಂಗಾ ಶ್ರೀ ಸದ್ಭಾವನ ರಾಷ್ಟ್ರೀಯ ಪ್ರಶಸ್ತಿ, ಪ್ರತಿಭಾ ರತ್ನ ಪ್ರಶಸ್ತಿ, ವಿಶ್ವಧರ್ಮಿ ಬಸವಣ್ಣ ಸದ್ಭಾವನ ಪ್ರಶಸ್ತಿ, ಸುವರ್ಣ ಸಂಭ್ರಮ ಕರ್ನಾಟಕ ಪ್ರಶಸ್ತಿ, ವಿಜಯ ಸಂಕಲ್ಪ ಪ್ರಶಸ್ತಿ, ಸ್ವಾಮಿ ವಿವೇಕಾನಂದ ಸದ್ಭಾವನ ರಾಷ್ಟ್ರೀಯ ಪ್ರಶಸ್ತಿ, ರಾಣಿ ಕಿತ್ತೂರ ಚೆನ್ನಮ್ಮ ಪ್ರಶಸ್ತಿ, ಕರ್ನಾಟಕ ನೃತ್ಯ ಶ್ರೀ ಪ್ರಶಸ್ತಿ, ಇನ್ನು ಹತ್ತಾರು ಪ್ರಶಸ್ತಿಗಳು ಈಗಾಗಲೇ ಇವರ ಮುಡಿಗೇರಿವೆ.