Published
2 months agoon
By
Akkare Newsಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಸಿ.ಎಲ್.ಆನಂದ್ ಅವರ ಮನೆ ಮತ್ತು ಕಚೇರಿ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ 2.77 ಕೋಟಿ ಮೌಲ್ಯದ ಆಸ್ತಿಯನ್ನು ಪತ್ತೆ ಹಚ್ಚಿದ್ದಾರೆ.
ಶುಕ್ರವಾರ ಬೆಳಿಗ್ಗಿನ ಜಾವ ಮಣ್ಣಗುಡ್ಡದಲ್ಲಿರುವ ಆಯುಕ್ತರ ಸರ್ಕಾರಿ ಬಂಗಲೆಗೆ ದಾಳಿ ನಡೆಸಿದ ಲೋಕಾಯುಕ್ತ ತಂಡ ನಾಲ್ಕು ಗಂಟೆಗಳ ಕಾಲ ಪರಿಶೀಲನೆ ನಡೆಸಿ, ಅವರ ಕಚೇರಿಯಲ್ಲಿ ಶೋಧಕಾರ್ಯ ಮುಂದುವರೆಸಿದರು.
ಆನಂದ್ ಅವರು ಜೂನ್ 28, 2023 ರಂದು ಮಂಗಳೂರು ಮಹಾನಗರ ಪಾಲಿಕೆ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡರು. ಜುಲೈ 4, 2024 ರಂದು, ಸರ್ಕಾರವು ಅವರಿಗೆ ನಿರ್ದಿಷ್ಟ ಸ್ಥಾನವನ್ನು ನೀಡದೆ ವರ್ಗಾವಣೆ ಆದೇಶವನ್ನು ಹೊರಡಿಸಿತು. ವರ್ಗಾವಣೆ ಆದೇಶ ಅಕಾಲಿಕವಾಗಿದೆ ಎಂದು ವಾದಿಸಿ ಆನಂದ್ ರವರು ಕೆಎಟಿಗೆ ಮೇಲ್ಮನವಿ ಸಲ್ಲಿಸಿದ್ದರು. ನಂತರ ಕೆಎಟಿ ವರ್ಗಾವಣೆ ಆದೇಶವನ್ನು ರದ್ದುಗೊಳಿಸಿ, ಅಲ್ಲೇ ಮುಂದುವರಿಯಲು ಅವಕಾಶ ನೀಡಿತ್ತು.
ಆರು ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿ, ವಿವಿಧ ಸ್ಥಳಗಳಲ್ಲಿನ ಅಕ್ರಮ ಆಸ್ತಿಗಳನ್ನು ಬಹಿರಂಗಪಡಿಸಿದೆ. ಮೂರು ಮನೆಗಳು, ನಾಲ್ಕು ಎಕರೆ ಕೃಷಿ ಭೂಮಿ, ಎರಡು ಕೋಟಿಗೂ ಮಿಕ್ಕಿದ ಸ್ಥಿರಾಸ್ತಿ, 19.4 ಲಕ್ಷ ಮೌಲ್ಯದ ಚಿನ್ನಾಭರಣ, 20.5 ಲಕ್ಷ ಮೌಲ್ಯದ ವಾಹನ, ಆಸ್ತಿ ಖರೀದಿಗೆ 10 ಲಕ್ಷ ಮುಂಗಡ, ಪತ್ನಿ ಮತ್ತು ಮಕ್ಕಳ ಹೆಸರಿನಲ್ಲಿ 16 ಲಕ್ಷ ಮೌಲ್ಯದ ಆಸ್ತಿಯೂ ಇದೆ ಎನ್ನಲಾಗಿದೆ. ಆನಂದ್ ವಿರುದ್ದ ಮಹಾನಗರ ಪಾಲಿಕೆಯಲ್ಲಿ ಹಲವಾರು ಭ್ರಷ್ಟಾಚಾರದ ದೂರುಗಳು ಬಂದ ಹಿನ್ನಲೆಯಲ್ಲಿ ಈ ದಾಳಿ ನಡೆದಿದೆ ಎನ್ನಲಾಗಿದೆ.