Published
1 month agoon
By
Akkare Newsತಾನು ಏಕಸ್ವಾಮ್ಯ ವಿರೋಧಿಯೆ ಹೊರತು ವ್ಯಾಪಾರ ವಿರೋಧಿ ಅಲ್ಲ ಎಂದು ವಿಪಕ್ಷ ನಾಯಕ ರಾಹುಲ್ ಗಾಂಧಿ ಗುರುವಾರ ಹೇಳಿದ್ದಾರೆ. ದಿನದ ಹಿಂದೆ ಇಂಡಿಯನ್ ಎಕ್ಸ್‌ಪ್ರೆಸ್‌ನಲ್ಲಿ ಪ್ರಕಟವಾದ ಅವರ ‘ಎ ನ್ಯೂ ಡೀಲ್ ಫಾರ್ ಇಂಡಿಯನ್ ಬ್ಯುಸಿನೆಸ್’ ಎಂಬ ಶೀರ್ಷಿಕೆಯ ಸಂಪಾದಕೀಯ ಲೇಖನಕ್ಕೆ ವ್ಯಕ್ತವಾದ ಟೀಕೆಗೆ ಅವರು ಪ್ರತಿಕ್ರಿಯಿಸಿದ್ದಾರೆ.
“ಬಿಜೆಪಿಯಲ್ಲಿನ ನನ್ನ ವಿರೋಧಿಗಳು ನನ್ನನ್ನು ವ್ಯಾಪಾರ ವಿರೋಧಿ ಎಂದು ಬಿಂಬಿಸಿದ್ದಾರೆ. ಆದರೆ ನಾನು ಕೆಲವೆ ಕೆಲವರು ಮಾರುಕಟ್ಟೆಯನ್ನು ನಿಯಂತ್ರಿಸುವುದರ ವಿರೋಧಿ. ಒಬ್ಬ ಅಥವಾ ಎರಡು ಅಥವಾ ಮೂರು ಅಥವಾ ಐದು ಜನರ ವ್ಯವಹಾರದ ಪ್ರಾಬಲ್ಯವನ್ನು ನಾನು ವಿರೋಧಿಸುತ್ತೇನೆ” ಎಂದು ಅವರು ಹೇಳಿದ್ದಾರೆ.
ಎಲ್ಲಾ ವ್ಯವಹಾರಗಳಿಗೆ ಮುಕ್ತ ಮತ್ತು ನ್ಯಾಯಯುತ ಸ್ಥಳವಿದ್ದರೆ ಆರ್ಥಿಕತೆಯು ಅಭಿವೃದ್ಧಿ ಹೊಂದುತ್ತದೆ ಎಂದು ರಾಹುಲ್ ಹೇಳಿದ್ದು, ತಾನು ”ಉದ್ಯೋಗಗಳ ಪರ, ವ್ಯಾಪಾರದ ಪರ, ನಾವೀನ್ಯತೆ ಪರ, ಸ್ಪರ್ಧೆಯ ಪರ” ಎಂದು ಹೇಳಿದ್ದಾರೆ.
ದಿಇಂಡಿಯನ್ ಎಕ್ಸ್‌ಪ್ರೆಸ್‌ನಲ್ಲಿ ಬುಧವಾರ ಪ್ರಕಟವಾದ ಸಂಪಾದಕೀಯ ಬರಹದಲ್ಲಿ ರಾಹುಲ್ ಗಾಂಧಿ ಅವರು, “ಎಲ್ಲಾ ವ್ಯವಹಾರಗಳ ಖರ್ಚಿನಲ್ಲಿ ಒಂದೇ ವ್ಯಾಪಾರವನ್ನು ಬೆಂಬಲಿಸಲು ಸರ್ಕಾರ ಅನುಮತಿ ನೀಡಬಾರದು. ನಮ್ಮ ಸಂಸ್ಥೆಗಳು ಇನ್ನು ಮುಂದೆ ನಮ್ಮ ಜನರದ್ದಾಗಿ ಇರಲ್ಲ. ಅವರು ಏಕಸ್ವಾಮ್ಯ ವ್ಯಾಪಾರಿಗಳಿಗೆ ಹರಾಜು ಮಾಡುತ್ತಾರೆ” ಎಂದು ಅವರು ಹೇಳಿದ್ದಾರೆ.
ರಾಹುಲ್ ಗಾಂಧಿ ಅವರ ಲೇಖನಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ವಿರುದ್ಧ “ಮತ್ತೊಂದು ಆಧಾರರಹಿತ ಆರೋಪ” ಎಂದು ಕರೆದಿದೆ. “ಮ್ಯಾಚ್-ಫಿಕ್ಸಿಂಗ್ ಏಕಸ್ವಾಮ್ಯ ಗುಂಪುಗಳು ವರ್ಸಸ್ ಫೇರ್-ಪ್ಲೇ ವ್ಯವಹಾರಗಳು” ಸರಳವಾಗಿ ದಾರಿತಪ್ಪಿಸುವಂತಿದೆ ಎಂದು ಸಾಮಾಜಿಕ ಮಾಧ್ಯಮದ ಮೂಲಕ ಪಕ್ಷವು ಹೇಳಿದೆ.
ಬುಧವಾರದ ಸಂಪಾದಕೀಯ ಬರಹದಲ್ಲಿ, ಏಕಸ್ವಾಮ್ಯ ಸಂಸ್ಥೆಗಳು “ಬೃಹತ್ ಸಂಪತ್ತನ್ನು” ಸಂಗ್ರಹಿಸಿದ್ದಾರೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ದೇಶದ ಉಳಿದ ಜನಸಂಖ್ಯೆ ಹೆಚ್ಚು ಅಸಮಾನತೆ ಹೊಂದಿದ್ದು, ಅವರ ವಿರುದ್ಧದ ಅನ್ಯಾಯ ಹೆಚ್ಚಾಗಿದೆ ಎಂದು ಅವರು ಉಲ್ಲೇಖಿಸಿದ್ದಾರೆ. ಈ ಏಕಸ್ವಾಮ್ಯದ ಕಂಪೆನಿಗಳ ವಿರುದ್ಧ ಸ್ಪರ್ಧಿಸಲು ಬೇರೆ ಸಂಸ್ಥೆಗಳು ಕೇವಲ ಅವರ ಜೊತೆಗೆ ಮಾತ್ರವಲ್ಲ, ‘ಭಾರತದ ಆಡಳಿತ ಯಂತ್ರದ’ ಜೊತೆಗೆ ಕೂಡಾ ಸ್ಪರ್ಧಿಸಬೇಕು ಎಂದು ಅವರು ಹೇಳಿದ್ದಾರೆ.
ಲೇಖನದಲ್ಲಿ ರಾಹುಲ್ ಗಾಂಧಿ ಯಾವ ಉದ್ಯಮಿಯನ್ನು ಉಲ್ಲೇಖಿಸಿ ಹೇಳಿದ್ದಾರೆ ಎಂಬುದು ಸ್ಪಷ್ಟವಾಗಿಲ್ಲ. ಆದರೆ ಆಡಳಿತಾರೂಢ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಕೈಗಾರಿಕೋದ್ಯಮಿಗಳಾದ ಮುಖೇಶ್ ಅಂಬಾನಿ ಮತ್ತು ಗೌತಮ್ ಅದಾನಿ ಒಡೆತನದ ಕಂಪೆನಿಗಳಿಗೆ ಒಲವು ತೋರುತ್ತಿದೆ ಎಂದು ಕಾಂಗ್ರೆಸ್ ಆಗಾಗ್ಗೆ ಆರೋಪಿಸುತ್ತಲೆ ಇದೆ.
ಅದಾನಿ ಗ್ರೂಪ್ ಭಾರತದ ನಾಗರಿಕ ವಿಮಾನಯಾನ, ಹಡಗು, ಸಿಮೆಂಟ್, ವಿದ್ಯುತ್ ಮತ್ತು ರಕ್ಷಣಾ ಉದ್ಯಮಗಳಲ್ಲಿ ಏಕಸ್ವಾಮ್ಯವನ್ನು ಪಡೆಯಲು ಪ್ರಯತ್ನಿಸುತ್ತಿರುವ “ಸಿಂಡಿಕೇಟ್” ನಿಂದ ಲಾಭ ಪಡೆಯುತ್ತಿದೆ ಎಂದು ರಾಹುಲ್ ಗಾಂಧಿ ಅಕ್ಟೋಬರ್ 29 ರಂದು ಆರೋಪಿಸಿದ್ದರು.