Published
1 month agoon
By
Akkare Newsಪುತ್ತೂರು: ರೈತರ ಪಾಲಿಗೆ ವರದಾನವಾಗಿರುವ ಹವಾಮಾನ ಆಧಾರಿತ ಪ್ರಧಾನಮಂತ್ರಿ ಫಸಲು ಭೀಮಾ ಯೋಜನೆಯ 2023-24ನೇ ಸಾಲಿನ ವಿಮಾ ಮೊತ್ತ ಫಲಾನುಭವಿ ಕೃಷಿಕರ ಖಾತೆಗಳಿಗೆ ಜಮೆಯಾಗುತ್ತಿದೆ. ಸಾಮಾನ್ಯವಾಗಿ ಡಿಸೆಂಬರ್ ತಿಂಗಳಿನಲ್ಲಿ ಜಮೆಯಾಗುತ್ತಿದ್ದ ಬೆಳೆ ವಿಮೆಯ ಮೊತ್ತ ಈ ಬಾರಿ ನವೆಂಬರ್ ಆರಂಭದಿಂದಲೇ ಖಾತೆಗಳಿಗೆ ಜಮೆಯಾಗಲು ಆರಂಭಗೊಂಡಿದ್ದು ಮುಂದಿನ 20 ದಿವಸಗಳ ಒಳಗಾಗಿ ಎಲ್ಲಾ ಫಲಾನುಭವಿ ರೈತರ ಖಾತೆಗಳಿಗೆ ಮೊತ್ತ ಜಮೆಯಾಗಬಹುದು ಎಂದು ಇಲಾಖಾಧಿಕಾರಿಗಳು ತಿಳಿಸಿದ್ದಾರೆ.
ರೈತರು ತಾವು ಬೆಳೆದ ವಿವಿಧ ರೀತಿಯ ಬೆಳೆಗಳಿಗೆ ವಿಮೆ ಮಾಡುವ ಅವಕಾಶ ಫಸಲು ಭೀಮಾ ಯೋಜನೆಯಲ್ಲಿದ್ದು ರೈತರು ತಾವು ಬೆಳೆಯುವ ಬೆಳೆಗಳಿಗೆ ಸೂಕ್ತ ರೀತಿಯಲ್ಲಿ ಪ್ರೀಮಿಯಂ ಪಾವತಿಸುವ ಮೂಲಕ ಬೆಳೆಯಿಂದಾಗಬಹುದಾದ ನಷ್ಟಕ್ಕೆ ಇನ್ಮುರೆನ್ಸ್ ಕಂಪೆನಿಯಿಂದ ವಿಮಾ ಮೊತ್ತ ಪಡೆಯಬಹುದು. ಈ ಯೋಜನೆಯಡಿ ರೈತರಿಗೆ ಪ್ರತೀ ಹೆಕ್ಟೇರ್ ಅನುಗುಣವಾಗಿ ವಿಮಾ ಕಂತು ಪಾವತಿಗೆ ಅವಕಾಶ ನೀಡಲಾಗಿತ್ತು. ಅಡಿಕೆ ಬೆಳೆಗೆ ಪ್ರತೀ ಹೆಕ್ಟೇರ್‌ಗೆ ಪ್ರೀಮಿಯಂ ಮೊತ್ತ ರೂ.6400 ಹಾಗೂ ಕಾಳುಮೆಣಸು ಬೆಳೆಗೆ ಪ್ರತೀ ಹೆಕ್ಟೇರ್‌ಗೆ ರೂ.2350ಪ್ರೀಮಿಯಂ ಮೊತ್ತವನ್ನು ರೈತರು ಪಾವತಿ ಮಾಡಿದ್ದರು. ಅಡಿಕೆಗೆ ಒಂದು ಹೆಕ್ಟೇರ್‌ಗೆ ಗರಿಷ್ಟ ರೂ. 1.28 ಲಕ್ಷ ಹಾಗೂ ಕಾಳುಮೆಣಸಿಗೆ ಗರಿಷ್ಟ ರೂ.46 ಸಾವಿರ ವಿಮಾ ಮೊತ್ತವನ್ನು ರೈತರು ಪಡೆಯಬಹುದು.
ದಕ್ಷಿಣ ಕನ್ನಡ ಜಿಲ್ಲೆಗೆ ಅಡಿಕೆ ಹಾಗೂ ಕಾಳುಮೆಣಸು ಬೆಳೆಗಳನ್ನು ಅsಸೂಚಿಸಲಾಗಿದ್ದು ಅಡಿಕೆ ಮತ್ತು ಕಾಳುಮೆಣಸು ಬೆಳೆಗೆ ಮಾತ್ರ ವಿಮಾಕಂತು ಪಾವತಿಸಲು ಇಲ್ಲಿ ಅವಕಾಶ ಇತ್ತು. ಸದರಿ ಯೋಜನೆಯಡಿ ಬೆಳೆ ಸಾಲ ಪಡೆದಿರುವ ಹಾಗೂ ಬೆಳೆ ಸಾಲ ಹೊಂದಿಲ್ಲದ ರೈತರು ನೋಂದಾವಣೆಗೊಳ್ಳಬಹುದಾಗಿದ್ದು ರೈತರು ತಮ್ಮ ಗ್ರಾಮದಲ್ಲಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಹಾಗೂ ರಾಷ್ಟ್ರೀಕೃತ ಬ್ಯಾಂಕ್ ಮೂಲಕ ನೋಂದಾವಣೆ ಮಾಡಿದ್ದರು.
ಜುಲೈ 1ರಿಂದ ಜೂನ್ 30ವರೆಗೆ ಆಯಾ ಪ್ರದೇಶದಲ್ಲಿ ಬಿದ್ದ ಮಳೆಯ ಆಧಾರದಲ್ಲಿ ಇದೀಗ ರೈತರ ಖಾತೆಗಳಿಗೆ ವಿಮಾ ಕಂತು ಜಮೆಯಾಗುತ್ತಿದೆ. ದ.ಕ. ಜಿಲ್ಲೆಯ ವಿವಿಧ ತಾಲೂಕುಗಳ ಬೇರೆ ಬೇರೆ ಗ್ರಾಮಗಳಲ್ಲಿ ಸುರಿದಿರುವ ಮಳೆಯ ಆಧಾರದಲ್ಲಿ ವಿಮಾ ಮೊತ್ತ ಲೆಕ್ಕಾಚಾರ ಹಾಕಿ ಬಿಡುಗಡೆ ಮಾಡಲಾಗುತ್ತದೆ. ಆದುದರಿಂದ ಎಲ್ಲಾ ಗ್ರಾಮದ ಫಲಾನುಭವಿಗಳಿಗೆ ಒಂದೇ ರೀತಿಯ ಮೊತ್ತ ಜಮೆಯಾಗುವುದಿಲ್ಲ.
ಕಳೆದ 10 ದಿನಗಳಿಂದ ಕೃಷಿಕರ ಖಾತೆಗಳಿಗೆ ಬೆಳೆ ವಿಮಾ ಮೊತ್ತ ಜಮೆಯಾಗಲು ಆರಂಭಗೊಂಡಿದೆ. ಇನ್ನು 20 ರಿಂದ 25 ದಿನಗಳಲ್ಲಿ ಎಲ್ಲಾ ಕೃಷಿಕರಿಗೆ ಪಾವತಿಯಾಗಲಿದೆ. ಮಳೆಯ ಆಧಾರದಲ್ಲಿ ವಿಮಾ ಮೊತ್ತದಲ್ಲಿ ಬದಲಾವಣೆ ಇರುತ್ತದೆ.
ಮಂಜುನಾಥ್ ತೋಟಗಾರಿಕಾ ಉಪನಿರ್ದೇಶಕರು, ಮಂಗಳೂರು