Published
1 month agoon
By
Akkare Newsಕಳೆದ ಒಂದು ವಾರದಿಂದ ಪ್ರತಿಭಟನೆ ನಡೆಸುತ್ತಿರುವ ವೈನ್ ಮರ್ಚೆಂಟ್ ಅಸೋಸಿಯೇಷನ್‌ಗಳ ಒಕ್ಕೂಟವು ನವೆಂಬರ್ 20 ರಂದು ರಾಜ್ಯದಾದ್ಯಂತ ಮದ್ಯ ಮಾರಾಟ ಬಂದ್ ಮಾಡುವುದಾಗಿ ಗುರುವಾರ ಹೇಳಿದೆ. ಭ್ರಷ್ಟಾಚಾರದ ಆರೋಪ ಮಾಡಿರುವ ಒಕ್ಕೂಟವು ತಮ್ಮ ಬೇಡಿಕೆಗಳ ಬಗ್ಗೆ ಸರ್ಕಾರ ನಿರ್ಲಕ್ಷ್ಯ ತೋರುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸರ್ಕಾರ ನಮ್ಮ ಬೇಡಿಕೆಗಳಿಗೆ ಕಿವಿಗೊಡದ ಕಾರಣ ನವೆಂಬರ್ 20 ರಂದು ಅಂಗಡಿ ಮುಂಗಟ್ಟು ಬಂದ್ ಮಾಡಲು ನಿರ್ಧರಿಸಿದೆ. ಈ ಬಂದ್‌ನಿಂದಾಗಿ ರಾಜ್ಯದ ಬೊಕ್ಕಸಕ್ಕೆ ಸುಮಾರು 120 ಕೋಟಿ ರೂಪಾಯಿ ನಷ್ಟವಾಗಲಿದೆ ಎಂದು ಪ್ರಧಾನ ಕಾರ್ಯದರ್ಶಿ ಬಿ.ಗೋವಿಂದರಾಜ ಹೆಗಡೆ ತಿಳಿಸಿದ್ದಾರೆ.
ಗುರುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅಬಕಾರಿ ಇಲಾಖೆಯಲ್ಲಿನ ಮಿತಿಮೀರಿದ ಭ್ರಷ್ಟಾಚಾರವನ್ನು ಪ್ರತಿಭಟಿಸಿ ನವೆಂಬರ್ 20 ರಂದು ರಾಜ್ಯದಾದ್ಯಂತ ಮದ್ಯ ಮಾರಾಟವನ್ನು ಬಂದ್ ಮಾಡಲು ನಿರ್ಧರಿಸಿದ್ದೇವೆ. ಅದೇ ದಿನ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಹೇಳಿದ್ದಾರೆ.
“ಅಬಕಾರಿ ಅಧಿಕಾರಿಗಳು ಲಂಚ ನೀಡುವಂತೆ ಮಾಡುತ್ತಿರುವ ಕಿರುಕುಳದಿಂದ ಮದ್ಯ ಮಾರಾಟಗಾರರು ಬೇಸತ್ತಿದ್ದು, ಅಧಿಕಾರಿಗಳ ಲಂಚದ ವ್ಯಾಮೋಹದಿಂದ ರಾಜ್ಯದಲ್ಲಿ ನಕಲಿ ಮದ್ಯ ಮಾರಾಟವೂ ಹೆಚ್ಚಾಗಿದೆ. ಅಬಕಾರಿ ಇಲಾಖೆ ವ್ಯಾಪ್ತಿಯಲ್ಲಿರುವ ಸಮಸ್ಯೆಗಳನ್ನು ಬಗೆಹರಿಸಿ ನಮ್ಮ ಬೇಡಿಕೆಗಳನ್ನು ಈಡೇರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಬಕಾರಿ ಮತ್ತು ಪೊಲೀಸ್ ಇಲಾಖೆಗಳ ಜತೆಗೂಡಿ ಸಭೆ ನಡೆಸಬೇಕು,’’ ಎಂದು ಹೆಗಡೆ ಹೇಳಿದ್ದಾರೆ. ಅಬಕಾರಿ ಇಲಾಖೆಯನ್ನು ಹಣಕಾಸು ಇಲಾಖೆಯೊಂದಿಗೆ ವಿಲೀನಗೊಳಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಪೊಲೀಸರ ಹಸ್ತಕ್ಷೇಪ ಮತ್ತು ಅನಗತ್ಯ ಪರವಾನಗಿ ಅಮಾನತು, ಚಿಲ್ಲರೆ ಮದ್ಯ ಮಾರಾಟದ ಬಗ್ಗೆ ಸರ್ಕಾರ ಅಬಕಾರಿ ಇಲಾಖೆಗೆ ಸೂಕ್ತ ನಿರ್ದೇಶನ ನೀಡಬೇಕು ಮತ್ತು ಮದ್ಯ ಮಾರಾಟದಿಂದ ಕನಿಷ್ಠ 20% ಲಾಭವನ್ನು ನೀಡಬೇಕು ಎಂಬ ಮೂರು ಪ್ರಮುಖ ಬೇಡಿಕೆಗಳನ್ನು ಹೊಂದಿದ್ದೇವೆ ಎಂದು ಹೆಗ್ಡೆ ಹೇಳಿದ್ದಾರೆ.