Published
1 month agoon
By
Akkare Newsದೆಹಲಿ ಸಚಿವ ಮತ್ತು ಎಎಪಿ ಶಾಸಕ ಕೈಲಾಶ್ ಗಹ್ಲೋಟ್ ಅವರು ಪಕ್ಷಕ್ಕೆ ರಾಜೀನಾಮೆ ಘೋಷಿಸಿದ ಬೆನ್ನಲ್ಲೆ, ಬಿಜೆಪಿಯ ಮಾಜಿ ಶಾಸಕ ಅನಿಲ್ ಝಾ ಭಾನುವಾರ ಆಮ್ ಆದ್ಮಿ ಪಕ್ಷಕ್ಕೆ (ಎಎಪಿ) ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಸಮ್ಮುಖದಲ್ಲಿ ಸೇರ್ಪಡೆಯಾಗಿದ್ದಾರೆ.
ವಾಯವ್ಯ ದೆಹಲಿಯ ಕಿರಾರಿ ವಿಧಾನಸಭಾ ಕ್ಷೇತ್ರದಿಂದ ಎರಡು ಬಾರಿ ಬಿಜೆಪಿ ಶಾಸಕರಾಗಿರುವ ಝಾ ಅವರು ಬಿಜೆಪಿಯ ನಾಯಕತ್ವ ಮತ್ತು ನೀತಿಗಳಿಂದ ಭ್ರಮನಿರಸನಗೊಂಡು ಎಎಪಿಗೆ ಸೇರ್ಪಡೆಗೊಂಡಿದ್ದಾಗಿ ಹೇಳಿಕೊಂಡಿದ್ದಾರೆ. ತಳಮಟ್ಟದ ಕಾರ್ಯಕರ್ತರೊಂದಿಗೆ ಸಂಪರ್ಕದಲ್ಲಿದ್ದುಕೊಂಡು ಪಕ್ಷ ಕಟ್ಟಿದ ಝಾ ಅವರ ರಾಜೀನಾಮೆಯು ಬಿಜೆಪಿಯ ಭದ್ರಕೋಟೆಗೆ ಹಿನ್ನಡೆಯಾಗಲಿದೆ ಎಂದು ಪರಿಗಣಿಸಲಾಗಿದೆ.
ಅನಧಿಕೃತ ನೀರಿನ ಪೈಪ್‌ಗಳು ಮತ್ತು ದೋಷಪೂರಿತ ಒಳಚರಂಡಿ ಮಾರ್ಗಗಳು ಸೇರಿದಂತೆ ಅಸಮರ್ಪಕ ಮೂಲಸೌಕರ್ಯಗಳೊಂದಿಗೆ ದೆಹಲಿಯ ಪೂರ್ವಂಚಲಿ ಪ್ರದೇಶದ ನಿವಾಸಿಗಳು ವಾಸಿಸುತ್ತಿದ್ದಾರೆ, ಅದರೆ ಇಲ್ಲಿನ ಸಮುದಾಯಕ್ಕಾಗಿ ಅರವಿಂದ್ ಕೇಜ್ರಿವಾಲ್ ಅವರು ದುಡಿದಿದ್ದಾರೆ ಎಂದು ಝಾ ಅವರು ಅರವಿಂದ್ ಕೇಜ್ರಿವಾಲ್ ಅವರನ್ನು ಹೊಗಳಿದ್ದಾರೆ. “ಅರವಿಂದ್ ಕೇಜ್ರಿವಾಲ್ ಅವರ ಅಡಳಿತದ ಅಡಿಯಲ್ಲಿ ಕಳೆದ 10 ವರ್ಷಗಳಲ್ಲಿ, ಕುಡಿಯುವ ನೀರು ಪ್ರತಿ ಮನೆಯನ್ನು ತಲುಪಿತು” ಎಂದು ಝಾ ಹೇಳಿದ್ದಾರೆ.
ಝಾ ಅವರನ್ನು ಪಕ್ಷಕ್ಕೆ ಸ್ವಾಗತಿಸಿದ ಅರವಿಂದ್ ಕೇಜ್ರಿವಾಲ್, “ಅನಿಲ್ ಝಾ ಅವರನ್ನು ದೆಹಲಿಯ ಪೂರ್ವಾಂಚಲಿ ಸಮುದಾಯದ ದೊಡ್ಡ ನಾಯಕರಲ್ಲಿ ಒಬ್ಬರು ಎಂದು ಪರಿಗಣಿಸಲಾಗಿದೆ. ಯುಪಿ ಮತ್ತು ಬಿಹಾರದಿಂದ ಜನರು ಶಿಕ್ಷಣ ಮತ್ತು ಉದ್ಯೋಗಕ್ಕಾಗಿ ದೆಹಲಿಗೆ ಬರುತ್ತಾರೆ. ವರ್ಷಗಳ ಕಾಲ ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಅವರನ್ನು ನಿರ್ಲಕ್ಷಿಸಿವೆ. ನಾನು ಮುಖ್ಯಮಂತ್ರಿಯಾದಾಗ ಅವರ ಜೀವನ ಪರಿಸ್ಥಿತಿಯನ್ನು ಸುಧಾರಿಸಲು ನಾವು ಈ ಕಾಲೋನಿಗಳಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಪ್ರಾರಂಭಿಸಿದ್ದೇವೆ” ಎಂದು ಹೇಳಿದ್ದಾರೆ.
ಎಎಪಿಗೆ ಸೇರಿದಂತೆ, ಬಿಜೆಪಿಯ ದೆಹಲಿ ಘಟಕದಲ್ಲಿರುವ ಕೆಲವು ನಾಯಕರು “ದಾರಿ ತಪ್ಪಿದ ಮಕ್ಕಳಂತೆ” ಇದ್ದು, ಬಿಜೆಪಿಯ ಕೇಂದ್ರ ನಾಯಕತ್ವವು ಅವರನ್ನು ನಿರ್ವಹಿಸಲು ಸಾಧ್ಯವಾಗದ “ವೃದ್ಧ ತಂದೆ”ಯಂತಿದೆ ಎಂದು ಅನಿಲ್ ಝಾ ತಮ್ಮ ಹಿಂದಿನ ಪಕ್ಷವನ್ನು ಟೀಕಿಸಿದ್ದಾರೆ.
ಈ ಹಿಂದೆ ಕಾಂಗ್ರೆಸ್ ಮತಬ್ಯಾಂಕ್ ಎಂದೆ ಪರಿಗಣಿಸಲ್ಪಟ್ಟ ಪೂರ್ವಾಂಚಲಿ ಮತದಾರರು, 2015 ರ ವಿಧಾನಸಭಾ ಚುನಾವಣೆಯಲ್ಲಿ AAP ಕಡೆಗೆ ಒಲವು ತೋರಿದ್ದರು. ಹಾಗಾಗಿ ಇಲ್ಲಿ 13 AAP ನಾಯಕರು ತಮ್ಮ ಕ್ಷೇತ್ರಗಳಲ್ಲಿ ಗೆದ್ದಿದ್ದರು. ಇದೀಗ ಅನಿಲ್ ಝಾ ಅವರು ಎಎಪಿಗೆ ಸೇರ್ಪಡೆಗೊಳ್ಳುವುದರೊಂದಿಗೆ, ರಾಷ್ಟ್ರ ರಾಜಧಾನಿಯಲ್ಲಿ ಮುಂದಿನ ವರ್ಷದ ಚುನಾವಣೆಗೆ ಮುಂಚಿತವಾಗಿ ಪೂರ್ವಾಂಚಲಿ ಸಮುದಾಯದ ಮೇಲೆ ತನ್ನ ಹಿಡಿತವನ್ನು ಬಲಪಡಿಸುವಲ್ಲಿ AAP ಒಂದು ಹೆಜ್ಜೆ ಮುಂದೆ ಸಾಗಿದೆ.