Published
1 month agoon
By
Akkare Newsಬಂಟ್ವಾಳ ಬಿ .ಸಿ.ರೋಡು-ಅಡ್ಡಹೊಳೆ ಚತುಷ್ಪಥ ಹೆದ್ದಾರಿ ಅಭಿವೃದ್ಧಿ ಕಾಮಗಾರಿ ಮಹತ್ವದ ಹೆಜ್ಜೆಯೊಂದನ್ನು ದಾಟಿದೆ. ಇದರ ಬಹುಮುಖ್ಯ ಭಾಗವಾದ ಪಾಣೆಮಂಗಳೂರಿನಲ್ಲಿ ನೇತ್ರಾವತಿ ನದಿಗೆ ನಿರ್ಮಿಸಿದ ನೂತನ ಸೇತುವೆಯನ್ನು ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ. ನ. 15ರಿಂದ ವಾಹನಗಳು ಹೊಸ ಸೇತುವೆಯ ಮೇಲೆ ಸಂಚರಿಸುತ್ತಿದೆ.
ಹೆದ್ದಾರಿ ಕಾಮಗಾರಿ ನಿರ್ವಹಿಸುತ್ತಿರುವ ಗುತ್ತಿಗೆ ಸಂಸ್ಥೆ ಕೆಎನ್‌ಆರ್ ಕನ್‌ಸ್ಟ್ರಕ್ಷನ್‌ನ ಪ್ರೊಜೆಕ್ಟ್ ಮ್ಯಾನೇಜರ್ ಮಹೇಂದ್ರ ಸಿಂಗ್ ನೇತೃತ್ವದಲ್ಲಿ ಸಾಂಕೇತಿಕ ಪೂಜೆ ನೆರವೇರಿಸಿ ವಾಹನಗಳನ್ನು ಹೊಸ ಸೇತುವೆಯಲ್ಲಿ ಬಿಡಲಾಯಿತು. ಹೆದ್ದಾರಿ ಅಭಿವೃದ್ಧಿ ಕಾಮಗಾರಿಯು ಕಳೆದ ಕೆಲವು ದಿನದಿಂದ ವೇಗವನ್ನು ಪಡೆದುಕೊಂಡಿದ್ದು, ಒಂದೊಂದೇ ವಿಭಾಗಗಳು ಸಂಚಾರಕ್ಕೆ ಮುಕ್ತಗೊಳ್ಳುವ ಹಂತಕ್ಕೆ ತಲುಪುತ್ತಿವೆ.
ಹಲವು ಸಮಯಗಳಿಂದ ಬಾಕಿ ಇದ್ದ ಕಲ್ಲಡ್ಕ ಸರ್ವೀಸ್ ರಸ್ತೆಯ ಡಾಮರು ಕಾಮಗಾರಿಯನ್ನು ಗುತ್ತಿಗೆ ಸಂಸ್ಥೆ ಕೈಗೆತ್ತಿಕೊಂಡಿದ್ದು, ಇದೀಗ ಹೊಸ ಸೇತುವೆ ಸಂಚಾರಕ್ಕೆ ತೆರೆದುಕೊಂಡಿದೆ. ಮುಂದಿನ ದಿನಗಳಲ್ಲಿ ಮೆಲ್ಕಾರ್, ಮಾಣಿ ಎಲೆವೇಟೆಡ್ ರೋಡ್ ಸಂಚಾರಕ್ಕೆ ತೆರೆದುಕೊಳ್ಳುವ ನಿರೀಕ್ಷೆ ಇದೆ.
ಮೊದಲಿನ ಸೇತುವೆಗಿಂತ ಅಗಲದ ಸೇತುವೆ ಗುತ್ತಿಗೆ ಸಂಸ್ಥೆಯು 2022ರ ಪ್ರಾರಂಭದಲ್ಲೇ ಸೇತುವೆ ನಿರ್ಮಾಣ ಆರಂಭಿಸಿದ್ದು, 2 ವರ್ಷಗಳಲ್ಲಿ ಪೂರ್ತಿಗೊಳಿಸುವುದಾಗಿ ಹೇಳಿತ್ತು. ಇದೀಗ 2 ವರ್ಷ 10 ತಿಂಗಳಲ್ಲಿ ಮುಕ್ತಗೊಂಡಿದೆ. ಹೊಸ ಸೇತುವೆಯು 386 ಮೀ. ಉದ್ದವಿದ್ದು, 13.5 ಮೀ. ಅಗಲವಿದೆ. ಹಿಂದಿನ ಸೇತುವೆ 10.4 ಮೀ. ಅಗಲವಾಗಿದೆ. ಸೇತುವೆಯ ಎರಡೂ ಬದಿಗಳಲ್ಲಿ ಅಬಾರ್ಡ್ ಮೆಂಟ್‌ಗಳಿದ್ದು, ಸರಾಸರಿ 38 ಮೀ. ಅಂತರದಲ್ಲಿ 11 ಪಿಲ್ಲರ್‌ಗಳು ನಿರ್ಮಿಸಲಾಗಿದೆ.
ಪಾಣೆಮಂಗಳೂರಿನ ರೀತಿಯಲ್ಲೇ ಉಪ್ಪಿನಂಗಡಿಯಲ್ಲೂ ಕುಮಾರಧಾರಾ ನದಿಗೆ ಹೊಸ ಸೇತುವೆ ನಿರ್ಮಾಣವಾಗುತ್ತಿದೆ. ಗುಂಡ್ಯದಲ್ಲೂ ಹೊಸ ಸೇತುವೆಯೊಂದನ್ನು ನಿರ್ಮಿಸಲಾಗಿದೆ.
ಪಾಣೆಮಂಗಳೂರಿನ ಹಳೆ ಸೇತುವೆಯನ್ನು ಪರಿಗಣಿಸಿದರೆ ಒಂದೇ ಪರಿಸರದಲ್ಲಿ ಮೂರು ಸೇತುವೆಗಳು ಇವೆ. ಜತೆಗೆ ಒಂದು ರೈಲ್ವೇ ಹಳಿಯ ಸೇತುವೆಯೂ ಇದೆ.
ಬೆಳಕು ಚೆಲ್ಲಿತ್ತು
ಬಿ.ಸಿ.ರೋಡು-ಅಡ್ಡಹೊಳೆ ಚತುಷ್ಪಥ ಹೆದ್ದಾರಿ ಅಭಿವೃದ್ಧಿ ಕಾಮಗಾರಿ ನಿಧಾನ ಗತಿಯಿಂದ ಜನತೆಗೆ ಆಗಿರುವ ತೊಂದರೆಗಳ ಕುರಿತು ಅ. 19ರಿಂದ 30ರ ವರೆಗೆ “ರಾ.ಹೆದ್ದಾರಿ ಕಾಮಗಾರಿ; ಯಾವಾಗ ಮುಗಿಸ್ತೀರಿ’ ಅಭಿಯಾನವನ್ನು ನಡೆಸಿ ಗಮನ ಸೆಳೆದಿತ್ತು. ಆಗ ಕೆಎನ್‌ಆರ್ ಕನ್‌ಸ್ಟ್ರಕ್ಷನ್ಸ್‌ನವರು ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸುವ ನಿಟ್ಟಿನಲ್ಲಿ ಎಲ್ಲ ರೀತಿಯ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದರು. ಸರಣಿ ವರದಿಗಳಿಗೆ ಸ್ಪಂದನೆ ಎಂಬಂತೆ ಹೆದ್ದಾರಿ ಕಾಮಗಾರಿ ವೇಗ ಪಡೆಯುತ್ತಿದೆ.