Published
1 month agoon
By
Akkare Newsಬೆಂಗಳೂರು: ಅಬಕಾರಿ ಇಲಾಖೆಯಲ್ಲಿನ ಭ್ರಷ್ಟಾಚಾರಕ್ಕೆ ಕಡಿವಾಣ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಸಲು ಒತ್ತಾಯಿಸಿ ಬಾರ್ ಮಾಲೀಕರ ಸಂಘ ನ.20 ರಂದು ರಾಜ್ಯಾದ್ಯಂತ ಬಾರ್ ಬಂದ್‌ಗೆ ಕರೆ ನೀಡಿ ಪ್ರತಿಭಟನೆಗೆ ನಿರ್ಧರಿಸಿದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯ ಮದ್ಯ ಮಾರಾಟಗಾರರ ಒಕ್ಕೂಟ (ಫೆಡರೇಷನ್ ಆಫ್ ವೈನ್ ಮರ್ಚೆಂಟ್ಸ್ ಅಸೋಸಿಯೇಷನ್) ದೊಂದಿಗೆ ನಡೆಸಿದ ಸಂಧಾನ ಸಭೆ ಯಶಸ್ವಿಯಾದ್ದರಿಂದ ಬಾರ್ ಬಂದ್ ಕರೆಯ ವಾಪಸ್ ಪಡೆಯಲು ನಿರ್ಧರಿಸಿದೆ.
ಮಂಗಳವಾರ ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಸಿದ್ದರಾಮಯ್ಯ ಭೇಟಿಯಾದ ರಾಜ್ಯ ಮದ್ಯ ಮಾರಾಟಗಾರರ ಒಕ್ಕೂಟದ ವಿಭಾಗೀಯ ಅಧ್ಯಕ್ಷ ಕರುಣಾಕರ ಹೆಗ್ಡೆ ನೇತೃತ್ವದ ನಿಯೋಗವು ಮಾತುಕತೆ ನಡೆಸಿದ ಬಳಿಕ ಬೇಡಿಕೆಗಳಿಗೆ ಮುಖ್ಯಮಂತ್ರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ನ.20 ಬಾರ್ ಬಂದ್ ಕರೆ ವಾಪಸ್ ಪಡೆಯಲಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯ ಮದ್ಯ ಮಾರಾಟಗಾರರ ಒಕ್ಕೂಟದ ಬೇಡಿಕೆಗಳ ಆಲಿಸಿದ ಬಳಿಕ ಈ ಕುರಿತು ವರದಿ ನೀಡಲು ಅಬಕಾರಿ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.ಸಿಎಂ ಸಿದ್ದರಾಮಯ್ಯ ಭೇಟಿ ಬಳಿಕ ಮಾಧ್ಯಮಗಳಿಗೆ ರಾಜ್ಯ ಮದ್ಯ ಮಾರಾಟಗಾರರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಗೋವಿಂದ್ ರಾಜ್ ಪ್ರತಿಕ್ರಿಯಿಸಿ ನಮ್ಮ ಬೇಡಿಕೆ ಮತ್ತು ಸಮಸ್ಯೆಗಳ ಕುರಿತು ಸರ್ಕಾರ ಗಮನಹರಿಸಬೇಕೆಂದು ನಾಳೆ ರಾಜ್ಯವ್ಯಾಪಿ ಬಂದ್ ಗೆ ಕರೆ ಕೊಟ್ಟಿದ್ದೇವು. ಆದರೆ ಈಗ ನಮ್ಮ ಸಮಸ್ಯೆ ನಮ್ಮ ಕುಂದು ಕೊರತೆಗಳ ಸಿಎಂ ಸಿದ್ದರಾಮಯ್ಯ ಕೇಳಿದ್ದಾರೆ. ಹಾಗೆಯೇ ಎಸಿಎಸ್, ಕಮಿಷನರ್ ಗೆ ನಮ್ಮ ಬೇಡಿಕೆ ಕುರಿತು ವರದಿ ಕೊಡಲು ಹೇಳಿದ್ದು, ನಮ್ಮ ಬೇಡಿಕೆ ಈಡೇರಿಸುವುದಾಗಿ ಭರವಸೆ ನೀಡಿದ್ದಾರೆ. ಆದ್ದರಿಂದ ನ.20ರಂದು ಕರೆ ನೀಡಿದ್ದ ಬಾರ್ ಬಂದ್ ಕರೆ ವಾಪಸ್ ಪಡೆಯಲಾಗಿದೆ ಎಂದು ಸ್ಪಷ್ಟಪಡಿಸಿದರು.