Published
4 weeks agoon
By
Akkare Newsಮಂಗಳೂರು::ಬಿಪಿಎಲ್ ಕಾರ್ಡ್ ರದ್ದತಿ ಸಂಬಂಧ ಬಿಜೆಪಿ ವಿನಾಕಾರಣ ಗೊಂದಲ ಸೃಷ್ಟಿಸುತ್ತಿದ್ದು, ಅರ್ಹರ ಬಿಪಿಎಲ್ ಕಾರ್ಡ್ ಯಾವುದೇ ಕಾರಣಕ್ಕೂ ರದ್ದಾಗುವುದಿಲ್ಲ. ಅಧಿಕಾರಿಗಳ ತಪ್ಪಿನಿಂದ ಕಾರ್ಡ್ ರದ್ದಾಗಿದ್ದರೆ, ಅದನ್ನು ಸರಿಪಡಿಸಿಕೊಡಲು ಸರ್ಕಾರ ಬದ್ಧ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಆರ್.
ಪೂಜಾರಿ ಹೇಳಿದರು.
ಶನಿವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕೇಂದ್ರ ಸರ್ಕಾರವೇ 5.8 ಕೋಟಿ ನಕಲಿ ಪಡಿತರ ಚೀಟಿ ರದ್ದು ಮಾಡಿದೆ. ಕೇಂದ್ರದ ಆದೇಶವನ್ನು ರಾಜ್ಯ ಸರ್ಕಾರ ಪಾಲಿಸಿದೆ. ಈ ಬಗ್ಗೆ ಬಿಜೆಪಿ ಮುಖಂಡರು ಚಕಾರವೆತ್ತುತ್ತಿಲ್ಲ’ ಎಂದರು.
ರಾಜ್ಯದ ಮೂರು ಕ್ಷೇತ್ರಗಳ ಉಪ ಚುನಾವಣೆಯ ಫಲಿತಾಂಶವು ಜನರು ಕಾಂಗ್ರೆಸ್ ಮೇಲೆ ಇಟ್ಟಿರುವ ವಿಶ್ವಾಸ ಮತ್ತು ಬಿಜೆಪಿ ಮೈತ್ರಿಕೂಟದ ಬಗೆಗಿರುವ ಅಪನಂಬಿಕೆಗೆ ಸಾಕ್ಷಿಯಾಗಿದೆ. ಇನ್ನಾದರೂ ಬಿಜೆಪಿ ಜಾತಿ, ಧರ್ಮಗಳ ನಡುವೆ ದ್ವೇಷ ಬಿತ್ತುವ ಕೆಲಸ ಬಿಟ್ಟು, ಅಭಿವೃದ್ಧಿ ಬಗ್ಗೆ ಯೋಚಿಸಲಿ ಎಂದು ಹೇಳಿದರು.
ಜಲಸಿರಿ, ಗೇಲ್ ಗ್ಯಾಸ್, ಸ್ಮಾರ್ಟ್ ಸಿಟಿ ಮತ್ತಿತರ ಕಾಮಗಾರಿಗಳಿಂದ ಜನರು ಸಂಚಾರ ಸಮಸ್ಯೆ ಎದುರಿಸುವಂತಾಗಿದೆ. ಎಂಜಿನಿಯರ್‌ಗಳ ನಡುವಿನ ಸಮನ್ವಯದ ಕೊರತೆ ಇದ್ದು, ಈ ಬಗ್ಗೆ ಎಚ್ಚರಿಸಬೇಕಾಗಿದ್ದ ಮಹಾನಗರ ಪಾಲಿಕೆಯ ಆಡಳಿತ ನಿರಾಸಕ್ತಿ ತೋರುತ್ತಿದೆ. ರಸ್ತೆಗಳು ಹೊಂಡಮಯವಾಗಿವೆ. ಡಿ.15ರೊಳಗೆ ಎಲ್ಲ ರಸ್ತೆಗಳ ಹೊಂಡ ತುಂಬುವ ಕಾರ್ಯ ಮಾಡಬೇಕು ಎಂದು ಪಾಲಿಕೆ ಸದಸ್ಯ ಶಶಿಧರ್ ಹೆಗ್ಡೆ ಹೇಳಿದರು.
ಮುಖಂಡರಾದ ಶಬ್ಬೀರ್, ಹೇಮಂತ್ ಗರೋಡಿ, ಸಲೀಂ, ದುರ್ಗಾ ಪ್ರಸಾದ್, ಇಮ್ರಾನ್, ಹಬೀಬ್ ಕಣ್ಣೂರು ಇದ್ದರು.