Published
4 weeks agoon
By
Akkare Newsಮುಂಬಯಿ: ಚುನಾವಣೋತ್ತರ ಸಮೀಕ್ಷೆಗಳು ಮತ್ತೆ ಸುಳ್ಳಾಗಿವೆ. ಮಹಾರಾಷ್ಟ್ರದಲ್ಲಿ 215ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸುವುದರೊಂದಿಗೆ ಬಿಜೆಪಿ ನೇತೃತ್ವದ ಮಹಾಯುತಿ ನಿಚ್ಚಳ ಬಹುಮತದತ್ತ ದಾಪುಗಾಲು ಹಾಕಿದೆ. ಕಾಂಗ್ರೆಸ್ ನೇತೃತ್ವದ ಮಹಾ ವಿಕಾಸ್ ಅಘಾಡಿ ಬರೀ 56 ಕ್ಷೇತ್ರಗಳಲ್ಲಿ ಮುಂದಿದ್ದು, ಹೀನಾಯ ಸೋಲಿನತ್ತ ಮುಖಮಾಡಿದೆ. ಕಳೆದ ಮೇ ತಿಂಗಳಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಹಿನ್ನಡೆ ಅನುಭವಿಸಿದ್ದ ಬಿಜೆಪಿ ಮಹಾರಾಷ್ಟ್ರ ಚುನಾವಣೆಯಲ್ಲಿ ನಿರೀಕ್ಷೆಗೂ ಮೀರಿ ಪುಟಿದೆದ್ದಿರುವುದು ಅಚ್ಚರಿ ಮೂಡಿಸಿದೆ. ಯಾವ ಸಮೀಕ್ಷೆಯೂ ಬಿಜೆಪಿ ನೇತೃತ್ವದ ಎನ್‌ಡಿಎ ಕೂಟಕ್ಕೆ ಇಷ್ಟು ಸೀಟುಗಳ ಭವಿಷ್ಯ ನುಡಿದಿರಲಿಲ್ಲ.
ಅತ್ತ ಜಾರ್ಖಂಡ್‌ನಲ್ಲೂ ಸಮೀಕ್ಷೆಗಳು ಹುಸಿಯಾಗುವ ಲಕ್ಷಣ ಕಾಣಿಸಿದೆ. ಅಲ್ಲಿ ಕಾಂಗ್ರೆಸ್ ಸರಳ ಬಹುಮತದತ್ತ ಮುನ್ನಡೆದಿದೆ. ಕಾಂಗ್ರೆಸ್ 50 ಸ್ಥಾನಗಳಲ್ಲಿ ಮುಂದಿದ್ದರೆ ಬಿಜೆಪಿ 30 ಸ್ಥಾನಗಳಷ್ಟೇ ಮುನ್ನಡೆ ಕಾಯ್ದುಕೊಂಡಿದೆ. ಎರಡೂ ರಾಜ್ಯಗಳು ಅಚ್ಚರಿಯ ಫಲಿತಾಂಶ ನೀಡುವುದು ಬಹುತೇಕ ಖಾತರಿಯಾಗಿದೆ. ಮತದಾರ ಪ್ರಭುವಿನ ನಡೆ ಎಂದಿಗೂ ನಿಗೂಢ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ.
ಮಹಾರಾಷ್ಟ್ರದಲ್ಲಿ ಇದೇ ಟ್ರೆಂಡ್ ಕೊನೆವರೆಗೂ ಉಳಿದರೆ ಎನ್‌ಡಿಎ ಮೂರನೇ ಎರಡು ಬಹುಮತ ಪಡೆದುಕೊಳ್ಳಲಿದೆ. ಇದು ಮಹಾರಾಷ್ಟ್ರದ ಇತ್ತೀಚೆಗಿನ ರಾಜಕೀಯ ಇತಿಹಾಸದಲ್ಲೇ ಭಾರಿ ದೊಡ್ಡ ಅಂತರದ ಗೆಲುವಾಗಲಿದೆ. ಇಲ್ಲಿ ಬಿಜೆಪಿಯೊಂದೇ ಮಹಾ ವಿಕಾಸ್ ಅಘಾಡಿ ಗಳಿಸಿದ್ದಕ್ಕಿಂತ ಇಮ್ಮಡಿ ಸೀಟುಗಳಲ್ಲಿ ಮುಂದಿದೆ. ಬಿಜೆಪಿ 149 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, 125ರಲ್ಲಿ ಮುನ್ನಡೆ ಕಾಯ್ದುಕೊಂಡಿದೆ.