ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಗ್ರಾ.ಪಂ ಚುನಾವಣೆ

ಬಂಟ್ವಾಳ ಸ್ಥಳೀಯ ಸಂಸ್ಥೆಗಳ ಉಪಚುನಾವಣೆ : ಮಾಜಿ ಸಚಿವ ರೈ “ಕೈ” ಬಲಪಡಿಸಿದ ಫಲಿತಾಂಶ

Published

on

ರೈ, ಪಿಯುಸ್, ವಾಸು ಪೂಜಾರಿ ತಂತ್ರಗಾರಿಕೆಯಿಂದ ಆಪರೇಶನ್ ಕಮಲಕ್ಕೊಳಗಾಗಿದ್ದ ಪುರಸಭಾ ಸ್ಥಾನ ಉಳಿಸಿಕೊಂಡ ಕಾಂಗ್ರೆಸ್

11 ಪಂಚಾಯತ್ ಸ್ಥಾನಗಳ ಪೈಕಿ 9 ಸ್ಥಾನವನ್ನು ತೆಕ್ಕೆಗೆ ಪಡೆದುಕೊಂಡ ಕೈ ಪಾಳಯ

ಬಂಟ್ವಾಳ : ಇಲ್ಲಿನ ಪುರಸಭೆಯಲ್ಲಿ ತೆರವಾಗಿರುವ ಒಂದು ಸ್ಥಾನಕ್ಕೆ ಹಾಗೂ ತಾಲೂಕಿನ ವಿವಿಧ ಗ್ರಾಮ ಪಂಚಾಯತ್ ಗಳಲ್ಲಿ ವಿವಿಧ ಕಾರಣಗಳಿಂದ ತೆರವಾಗಿರುವ 11 ಸ್ಥಾನಗಳ ಸಹಿತ 12 ಸ್ಥಾನಗಳಿಗೆ ಶನಿವಾರ ನಡೆದ ಉಪಚುನಾವಣೆಯ ಫಲಿತಾಂಶ ಮಂಗಳವಾರ ಪ್ರಕಟಗೊಂಡಿದ್ದು, 12 ರಲ್ಲಿ 10 ಸ್ಥಾನಗಳನ್ನು ಕಾಂಗ್ರೆಸ್ ಬೆಂಬಲಿತರು ವಿಜೇತರಾಗಿದ್ದು, 2 ಸ್ಥಾನ ಬಿಜೆಪಿ ಪಾಲಾಗಿದೆ. 

ಬಂಟ್ವಾಳ ಪುರಸಭೆಯ 2ನೇ ಬಿ ಕಸ್ಬಾ ವಾರ್ಡಿನ ಕಾಂಗ್ರೆಸ್ ಸದಸ್ಯ ಗಂಗಾಧರ ಪೂಜಾರಿ ಅವರು ಕಳೆದ ಲೋಕಸಭಾ ಚುನಾವಣೆ ಸಂದರ್ಭ ಆಪರೇಶನ್ ಕಮಲಕ್ಕೆ ಒಳಗಾಗಿ ಕಾಂಗ್ರೆಸ್ ತೊರೆದು ಕಮಲ ಪಾಳಯ ಸೇರ್ಪಡೆಗೊಂಡು ಬಳಿಕ ತನ್ನ ಪುರಸಭಾ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದರು.

 

 

ಈ ಕಾರಣಕ್ಕೆ ಈ ಸ್ಥಾನಕ್ಕೆ ಉಪ ಚುನಾವಣೆ ನಡೆದಿದೆ. ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದ ಈ ವಾರ್ಡಿನಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಪುರುಷೋತ್ತಮ ಎಸ್ ಬಂಗೇರ ಹಾಗೂ ಬಿಜೆಪಿಯಿಂದ ಎಲ್ ಇಂದ್ರೇಶ್ ಪೂಜಾರಿ ಅವರು ಕಣಕ್ಕಿಳಿದಿದ್ದು, ಇಬ್ಬರ ನಡುವೆ ನೇರ ಸ್ಪರ್ಧೆ ಏರ್ಪಟ್ಟಿತ್ತು. ಎರಡೂ ಪಕ್ಷಗಳಿಂದ ಇಬ್ಬರು ಹೊಸ ಮುಖಗಳಿಗೆ ಟಿಕೆಟ್ ನೀಡಲಾಗಿತ್ತು. ಶನಿವಾರ ಇಲ್ಲಿನ ಮಂಡಾಡಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮತದಾನ ನಡೆದಿದ್ದು, 72 ಶೇಕಡಾ ಮತದಾನ ದಾಖಲಾಗಿತ್ತು. ವಾರ್ಡಿನಲ್ಲಿ ಒಟ್ಟು 961 ಮಂದಿ ಮತ ಚಲಾಯಿಸಿದ್ದು, ಈ ಪೈಕಿ ಕೈ ಅಭ್ಯರ್ಥಿ ಪುರುಷೋತ್ತಮ ಅವರು 496 ಮತಗಳನ್ನು ಪಡೆದರೆ, ಕಮಲ ಪಕ್ಷದ ಉಮೇದುವಾರ ಇಂದ್ರೇಶ್ ಅವರು 456 ಮತಗಳನ್ನು ಪಡೆದಿದ್ದಾರೆ. 9 ಮಂದಿ ನೋಟಾ ಚಲಾಯಿಸಿದ್ದಾರೆ. ಈ ಮೂಲಕ 40 ಮತಗಳ ಅಂತರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪಕ್ಷದ ಸ್ಥಾನವನ್ನು ಉಳಿಸಿಕೊಂಡಿದ್ದಾರೆ. 

 

 

ಆಪರೇಶನ್ ಕಮಲಕ್ಕೊಳಗಾಗಿ ಉಪ ಚುನಾವಣೆ ನಡೆಯಲು ಕಾರಣವಾಗಿದ್ದ ಬಂಟ್ವಾಳ ಪುರಸಭೆಯ ಸ್ಥಾನವನ್ನು ಪಡೆದುಕೊಳ್ಳಲು ಉಭಯ ಪಕ್ಷಗಳ ನಾಯಕರು ಇನ್ನಿಲ್ಲದ ಕಸರತ್ತು-ತಂತ್ರಗಾರಿಕೆ ನಡೆಸಿದ್ದರು. ಅದರಲ್ಲೂ ಕಾಂಗ್ರೆಸ್ ಪಕ್ಷದಿಂದ ಮಾಜಿ ಸಚಿವ ಬಿ ರಮಾನಾಥ ರೈ, ಕೆಪಿಸಿಸಿ ಸದಸ್ಯ ಪಿಯೂಸ್ ಎಲ್ ರೋಡ್ರಿಗಸ್, ಪುರಸಭಾಧ್ಯಕ್ಷ ಬಿ ವಾಸು ಪೂಜಾರಿ ಸಹಿತ ಪಕ್ಷದ ನಾಯಕರು, ಪುರಸಭಾ ಸದಸ್ಯರುಗಳು ಇನ್ನಿಲ್ಲದ ಕಸರತ್ತು-ತಂತ್ರಗಾರಿಕೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಬಿಜೆಪಿಯಿಂದಲೂ ಶಾಸಕ ಯು ರಾಜೇಶ್ ನಾಯಕ್, ಪುರಸಭಾ ಮಾಜಿ ಅಧ್ಯಕ್ಷ ದಿನೇಶ್ ಭಂಡಾರಿ, ಹಿರಿಯ ಸದಸ್ಯ ಗೋವಿಂದ ಪೂಜಾರಿ ಸಹಿತ ಪಕ್ಷದ ಘಟಾನುಘಟಿ ನಾಯಕರು ಆಪರೇಶನ್ ಸಾಬೀತು ಪಡಿಸಲು ತಂತ್ರಗಾರಿಕೆ ಹೆಣೆದಿದ್ದರು. ಆದರೆ ಕೈ ನಾಯಕರ ತಂತ್ರಗಾರಿಕೆ ಕೊನೆಗೂ ಫಲಿಸಿದ್ದು, ಸ್ಥಾನ ಉಳಿಸಿಕೊಳ್ಳುವಲ್ಲಿ ಸಫಲರಾಗಿದ್ದಾರೆ. 

ಉಳಿದಂತೆ ಪಂಚಾಯತ್ ವ್ಯಾಪ್ತಿಯ ಸಜಿಪಮುನ್ನೂರು ಗ್ರಾಮ ಪಂಚಾಯತಿನ 3 ಸ್ಥಾನಗಳು, ಪಂಜಿಕಲ್ಲು 2 ಸ್ಥಾನಗಳು, ಬಿಳಿಯೂರು, ಸಜಿಪಮೂಡ, ಅಮ್ಟಾಡಿ, ಚೆನ್ನೈತ್ತೋಡಿ ಪಂಚಾಯತಿನ ತಲಾ 1 ಸ್ಥಾನಗಳನ್ನು ಕಾಂಗ್ರೆಸ್ ಬೆಂಬಲಿತರು ವಶಕ್ಕೆ ಪಡೆದುಕೊಂಡರೆ, ಮಂಚಿ ಹಾಗೂ ಬಡಗಬೆಳ್ಳೂರು ಪಂಚಾಯತಿನ ತಲಾ ಒಂದು ಸ್ಥಾನಗಳನ್ನು ಬಿಜೆಪಿ ಬೆಂಬಲಿತರು ಗೆದ್ದುಕೊಂಡಿದ್ದಾರೆ.

ಸಜಿಪಮುನ್ನೂರು ಗ್ರಾಮದ ಈ ಹಿಂದಿನ ಸಾರ್ವತ್ರಿಕ ಚುನಾವಣೆಯ ಸಂದರ್ಭ ಕಾಂಗ್ರೆಸ್ ಬೆಂಬಲಿಗರು ಶೂನ್ಯ ಸಂಪಾದನೆ ಮಾಡಿದ್ದು, ಈ ಬಾರಿಯ ಉಪಚುನಾವಣೆಯಲ್ಲಿ ಮೂರೂ ಸ್ಥಾನಗಳನ್ನು ಬಗಲಿಗೆ ಹಾಕಿಕೊಂಡು ಕ್ಲೀನ್ ಸ್ವೀಪ್ ಸಾಧನೆ ಮಾಡಿದ್ದಾರೆ. ಈ ಮೂಲಕ ಸಜಿಪಮುನ್ನೂರು ಪಂಚಾಯತಿನಲ್ಲಿ ಕಾಂಗ್ರೆಸ್ ಬೆಂಬಲಿತರ ಸಂಖ್ಯೆ 4ಕ್ಕೇರಿದೆ. ಇಲ್ಲಿನ ಎಸ್ ಡಿ ಪಿ ಐ ಬೆಂಬಲಿತನಾಗಿ ಈ ಹಿಂದೆ ಜಯಗಳಿಸಿದ್ದ ಶಮೀರ್ ಅವರು ಬಳಿಕ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು. 

 

ಬಿಜೆಪಿಯ ಭದ್ರ ಕೋಟೆಯಂತಿದ್ದ ಪಂಜಿಕಲ್ಲು ಪಂಚಾಯತಿನ ತೆರವಾಗಿರುವ ಎರಡೂ ಸ್ಥಾನಗಳನ್ನು ಈ ಬಾರಿ ಕಾಂಗ್ರೆಸ್ ಬೆಂಬಲಿಗರು ಗೆದ್ದುಕೊಂಡಿರುವುದು ಪಂಚಾಯತ್ ವ್ಯಾಪ್ತಿಯಲ್ಲಿ ಕೈ ಬಲವರ್ದನೆಯಾದಂತಾಗಿದೆ. ಅಮ್ಮಾಡಿ ಪಂಚಾಯತಿನ ಸ್ಥಾನ ಕೂಡಾ ಕಾಂಗ್ರೆಸ್ಸಿಗೆ ಹೆಚ್ಚುವರಿಯಾಗಿ ಲಭಿಸಿದೆ. ಈ ಹಿಂದೆ ಇಲ್ಲಿನ ಸದಸ್ಯ ಕಮ್ಯನಿಸ್ಟ್ ಪಕ್ಷದ ಬೆಂಬಲಿತನಾಗಿ ಗೆದ್ದು ಬಳಿಕ ಬಿಜೆಪಿ ಸೇರ್ಪಡೆಗೊಂಡಿದ್ದರು. ಇದೀಗ ಈ ವಾರ್ಡ್ ಕೈ ಪಾಲಾಗಿದೆ.

ಮಂಚಿ ಗ್ರಾಮದ 1 ಸ್ಥಾನಕ್ಕೆ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ಸ್ಥಾನವನ್ನು ಉಳಿಸಿಕೊಂಡರೆ, ಬಡಗಬೆಳ್ಳೂರು ಪಂಚಾಯತಿನ 1 ಸ್ಥಾನವನ್ನು ಬಿಜೆಪಿ ಹೆಚ್ಚುವರಿಯಾಗಿ ಪಡೆದುಕೊಂಡಿದೆ.

ಬಂಟ್ವಾಳದಲ್ಲಿ ನಡೆದ ಸ್ಥಳೀಯ ಸಂಸ್ಥೆಗಳ ಉಪಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಮೇಲುಗೈ ಸಾಧಿಸಿದ್ದು, ಇದು ಸಿದ್ದರಾಮಯ್ಯ ಸರಕಾರ ಬಡ ಜನರ ಪರ ಜಾರಿಗೆ ತಂದ ಗ್ಯಾರಂಟಿ ಯೋಜನೆಗಳ ಸಹಿತ ಹಲವು ಜನಪರ ಕಾರ್ಯಕ್ರಗಳು ನೇರವಾಗಿ ಜನರ ಮನೆ-ಮನಗಳಿಗೆ ತಲುಪಿರುವುದರ ಪರಿಣಾಮವಾಗಿದೆ. ಗ್ರಾಮೀಣ ಮಟ್ಟದಲ್ಲಿ ಕಾಂಗ್ರೆಸ್ ಪಕ್ಷ ಬಲವರ್ದನೆಯಾಗಿದ್ದು, ಜನ ಕಾಂಗ್ರೆಸ್ ಪರ ಒಲವು ತೋರುತ್ತಿದ್ದಾರೆ ಎಂಬುದಕ್ಕೆ ಸಾಕ್ಷಿಯಾಗಿದೆ. ಮುಂದಿನ ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಚುನಾವಣೆಗೂ ಇದು ದಿಕ್ಸೂಚಿಯಾಗಿದೆ ಎಂದು ವಿಜಯೀ ಅಭ್ಯರ್ಥಿಗಳನ್ನು ಅಭಿನಂದಿಸಿದ ಮಾಜಿ ಸಚಿವ ಬಿ ರಮಾನಾಥ ರೈ ಹೇಳಿದ್ದಾರೆ.

Continue Reading
Click to comment

Leave a Reply

Your email address will not be published. Required fields are marked *

Advertisement