ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಇತರ

ಬೇರೆ ಮಾಧ್ಯಮಗಳಿಗೆ ಹೋಲಿಸಿದರೆ ಡಿಜಿಟಲ್ ಮಾಧ್ಯಮ ಸತ್ಯ ತಿಳಿಸುತ್ತದೆ – ಸಿಎಂ ಸಿದ್ದರಾಮಯ್ಯ

Published

on

ಟಿವಿ, ಸೇರಿದಂತೆ ಇತರ ಮಾಧ್ಯಮಗಳನ್ನು ಅವಲೋಕನ ಮಾಡಿದಾಗ ಡಿಜಿಟಲ್ ಮಾಧ್ಯಮ ಹೆಚ್ಚು ಜನರಿಗೆ ಸತ್ಯವನ್ನು ತಿಳಿಸುವ ಪ್ರಯತ್ನ ಮಾಡುತ್ತವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಶನಿವಾರ ಹೇಳಿದರು. ಬೆಂಗಳೂರಿನ ಟೌನ್‌ಹಾಲ್‌ನಲ್ಲಿ ನಡೆದ ಈದಿನ.ಕಾಮ್ ಎರಡನೇ ವರ್ಷದ ಓದುಗರ ಸಮಾವೇಶದಲ್ಲಿ ಮಾತನಾಡಿದ ಅವರು, ಮಾಧ್ಯಮ ಬಹಳ ಪ್ರಭಲವಾದ ಅಸ್ತ್ರವಾಗಿದ್ದು, ಅದು ಧ್ವನಿ ಇಲ್ಲದವರ ಪರವಾಗಿ, ಓದಿ ಬರುವವರಿಗೂ ಮತ್ತು ಓದು ಬರದವರಿಗೆ ಧ್ವನಿಯಾಗಬೇಕು ಎಂದು ಅವರು ತಿಳಿಸಿದರು. 

ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ನಮ್ಮ ಸಮಾಜದಲ್ಲಿ ಆರ್ಥಿಕ ಮತ್ತು ಸಾಮಾಜಿಕ ಅಸಮಾನತೆ ಇದೆ. ಈ ಅಸಮಾನತೆ ಯಾಕೆ ಬಂತು? ಸುಮ್ಮ ಸುಮ್ಮನೆ ಅಸಮಾನತೆ ಬಂದಿಲ್ಲ. ನನ್ನ ಪ್ರಕಾರ, ಜಾತಿ ವ್ಯವಸ್ಥೆಯೆ ಇದಕ್ಕೆ ಮೂಲಕ ಕಾರಣ. ಜಾತಿ ವ್ಯವಸ್ಥೆ ಇಲ್ಲದೆ ಹೋಗಿದ್ದರೆ, ಇಷ್ಟೊಂದು ಅಸಮಾನತೆ ಬರಲು ಸಾಧ್ಯವಿರಲಿಲ್ಲ. ಜಾತಿ ಕಾರಣಕ್ಕೆ ಅನೇಕ ಶತಮಾನಗಳ ಕಾಲ ಶೂದ್ರರು, ಮಹಿಳೆಯರು ಮತ್ತು ದಲಿತರು ಅಸಮಾನತೆಗೆ ಒಳಗಾದರು” ಎಂದು ಅವರು ಹೇಳಿದರು.

 

“ನಮ್ಮ ಸಮಾಜ ಮತ್ತು ದೇಶ ಹೇಗಿರಬೇಕು ಹಾಗೂ ದೇಶದ ಗುರಿ ಹೇಗಿರಬೇಕು ಎಂದು ನಾವು ಸಂವಿಧಾನದಲ್ಲಿ ಒಂದು ಚೌಕಟ್ಟು ರಚಿಸಿದ್ದೇವೆ. ಹೆಣ್ಮಕ್ಕಳಿಗೆ ಬಸವಣ್ಣ ಅವರ ಕಾಲದ ನಂತರ ಸಮಾನ ಅವಕಾಶ ಸಿಕ್ಕಲು ಪ್ರಾರಂಭವಾಯಿತು. ನಮ್ಮ ಜಾತಿ ವ್ಯವಸ್ಥೆಯಲ್ಲಿ ಒಬ್ಬ ವ್ಯಕ್ತಿಯ ಸಾಮಾಜಿಕ ಸ್ಥಾನಮಾನ ಅಳೆಯುತ್ತಾ ಇದ್ದಿದ್ದು ಜಾತಿ ಆಧಾರದಲ್ಲಿ. ಅವರ ಪ್ರತಿಭೆ ಮತ್ತು ವ್ಯಕ್ತಿತ್ವಕ್ಕೆ ಯಾವುದೆ ಬೆಲೆ ಇರಲಿಲ್ಲ. ಜಾತಿಯ ಆಧಾರದಲ್ಲಿ ಅವರ ಸ್ಥಾನಮಾನ ಅಳೆಯುತ್ತಿದ್ದರು” ಎಂದು ಹೇಳಿದರು.

 

 

“ನಮಗೆ ರಾಜಕೀಯ ಪ್ರಜಾಪ್ರತಭುತ್ವ ಸಿಕ್ಕಿದೆ. ಆದರೆ ಸಾಮಾಜಿಕ ಮತ್ತು ಆರ್ಥಿಕ ಪ್ರಜಾಪ್ರಬುತ್ವ ಸಿಕ್ಕಿಲ್ಲ. ರಾಜಕೀಯ ಪ್ರಜಾಪ್ರಭುತ್ವ ಯಶಸ್ವಿಯಾಗಬೇಕಾದರೆ, ಸಾಮಾಜಿಕ ಮತ್ತು ಆರ್ಥಿಕ ಪ್ರಜಾಪ್ರಬುತ್ವ ಸಿಗಬೇಕು ನಾವು ಸಮಾನತೆಯ, ಜಾತಿ ರಹಿತವಾದ, ಕಂದಾಚಾರ ಮತ್ತು ಮೌಢ್ಯ ರಹಿತ ಸಮಾಜ ನಿರ್ಮಿಸಬೇಕು. ಅವಕಾಶ ವಂಚಿತ ಸಮುದಾಯಕ್ಕೆ ಆರ್ಥಿಕ, ಸಾಮಾಜಿಕ ಶಕ್ತಿಯನ್ನು ತುಂಬುವವರೆಗೆ ಸಮಸಮಾಜ ನಿರ್ಮಿಸಲು ಅಸಾಧ್ಯ” ಎಂದು ಅವರು ತಿಳಿಸಿದರು.

“ಬಸವಣ್ನ ಶತಮಾನಗಳ ಹಿಂದೆಯೆ ಇವ ನಮ್ಮವ ಎಂದು ಹೇಳಿದ್ದ. ಆದರೆ ಜನರು ಮೌಢ್ಯವನ್ನು, ಕಂದಾಚಾರವನ್ನು ಇನ್ನೂ ಬಿಟ್ಟಿಲ್ಲ. ಯಾಕೆಂದರೆ ನಮಗೆ ಸಿಕ್ಕ ಜ್ಞಾನವು ಗುಣಮಟ್ಟದ ಶಿಕ್ಷಣ ಮತ್ತು ವೈಜ್ಞಾನಿಕತೆಯದ್ದಲ್ಲ. ಹಾಗಾಗಿ ಅದು ಇನ್ನೂ ಹಾಗೆ ಇದೆ. ಗುಣಮಟ್ಟದ ಶಿಕ್ಷಣ ಮತ್ತು ವೈಜ್ಞಾನಿಕತೆಯ ಶಿಕ್ಷಣ ಸಿಕ್ಕರೆ ನಾವು ವಿಚಾರವಂತರು ಆಗುತ್ತೇವೆ ಮತ್ತು ಸಮಸಮಾಜ ನಿರ್ಮಾಣ ಸಾಧ್ಯ. ಇಷ್ಟೆಲ್ಲ ಶಿಕ್ಷಣ ಆದರೂ ಕೂಡಾ ಜನರು ಕರ್ಮ ಸಿದ್ದಾಂತವನ್ನು ತಿರಸ್ಕರಿಸುತ್ತಿಲ್ಲ. ಬಡತನ, ಸಂಕಷ್ಟಗಳಿಗೆ ನಮ್ಮ ಜನರು ಹಿಂದಿನ ಜನ್ಮದ ಕತೆ ಹೇಳುತ್ತಾರೆ. ಇದನ್ನು ಅಸ್ತ್ರವಾಗಿಟ್ಟು ಕೊಂಡು ಅವರನ್ನು ಶೋಷಣೆ ಮಾಡಲಾಗುತ್ತದೆ” ಎಂದು ಸಿದ್ದರಾಮಯ್ಯ ಹೇಳಿದರು.

“ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ನಾನು ನಂಬಿಕೆ ಇಟ್ಟಿದ್ದೇನೆ. ಹಾಗಾಗಿಯೆ ನನಗೆ ಬಯ್ಯುವ ಯಾವುದೇ ಮಾಧ್ಯಮಗಳಿಗೆ ಯಾಕೆ ಹೀಗೆ ಮಾಡುತ್ತೀರಿ ಎಂದು ಕೇಳುತ್ತಿಲ್ಲ. ಈ ಮಾಧ್ಯಮಗಳು ನನ್ನ ಬಗ್ಗೆ ದುರುದ್ದೇಶದಿಂದ ಬರೆದಿದ್ದರೆ, ಸುಳ್ಳು ಬರೆದರೆ ಅದನ್ನು ಓದುಗರು ಖಂಡಿಸಬೇಕು. ಫೇಕ್ ನ್ಯೂಸ್ ವಿರುದ್ಧ ಕೇಸ್ ಹಾಕಿ ಎಂದು ಹೇಳಿದ್ದೇನೆ. ಒಬ್ಬ ವ್ಯಕ್ತಿಯನ್ನು ತೇಜೋವಧೆ ಮಾಡುವುದು ತುಂಬಾ ಕೆಟ್ಟದು. ಈಗ ತನಿಖಾ ಜರ್ನಲಿಸಂ ಹೋಗಿಯೆ ಬಿಟ್ಟಿದೆ. ಯಾವುದೆ ವಿಚಾರವನ್ನು ನೋಡದರೆ ವರದಿ ಮಾಡಲಾಗುತ್ತಿದೆ” ಎಂದು ಅವರು ಹೇಳಿದರು.

“ಕೊನೆಯಲ್ಲಿ ನಾವು ಸಂವಿಧಾನದ ಧ್ಯೇಯ ಮತ್ತು ಗುರಿಗಳನ್ನು ತಲುಪಬೇಕಿದೆ. ಈ ಗುರಿಗಳನ್ನು ತಲುಪದೆ ಹೋದರೆ ಹೇಗೆ? ಸಂವಿಧಾನವನ್ನು ವಿರೋಧ ಮಾಡುವರು ಇದ್ದಾರೆ ಮತ್ತು ಪರವಾಗಿ ಇರುವವರೂ ಇದ್ದಾರೆ. ನಮ್ಮ ಹಕ್ಕುಗಳನ್ನು ಮಾತ್ರ ನಾವು ಕೇಳುತ್ತೇವೆ ಆದರೆ, ನಮ್ಮ ಕರ್ತವ್ಯಗಳನ್ನು ಮರೆತು ಬಿಟ್ಟಿದ್ದೇವೆ. ನಾವು ಬರಿಯ ಹಕ್ಕುಗಳನ್ನು ಮಾತ್ರ ಕೇಳುವುದಲ್ಲ, ಕರ್ತವ್ಯಗಳನ್ನು ಕೂಡಾ ಪಾಲಿಸಬೇಕು” ಎಂದು ಅವರು ಹೇಳಿದರು.

 

“ನಾನು ಮುಖ್ಯಮಂತ್ರಿ ಆಗಿದ್ದು ದೊಡ್ಡ ವಿಚಾರವಲ್ಲ. ಸಂವಿಧಾನದ ಆಶಯದಂತೆ ನಡೆದುಕೊಂಡಿದ್ದೇವೆಯೆ ಅಥವಾ ಜನರಿಗೆ ನೀಡಿದ್ದ ಭರವಸೆಗಳನ್ನು ಈಡೇರಿಸಿದ್ದೇವೆ ಎಂಬುವುದು ಬಹಳ ಮುಖ್ಯ ವಿಚಾರವಾಗಿದೆ. 2013-18ರ ವೇಳೆ ನಾವು ನೀಡಿದ್ದ ಹೆಚ್ಚಿನ ಎಲ್ಲಾ ಭರವಸೆಗಳನ್ನು ಈಡೇರಿಸಿದ್ದೇವೆ. ಇದೇ ವೇಳೆ ಬಿಜೆಪಿ 600 ಭರವಸೆ ನೀಡಿತ್ತು, ಆದರೆ ಅವರು 10% ಭರವಸೆ ಕೂಡಾ ಈಡೇರಿಸಿಲ್ಲ” ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

“ಇತಿಹಾಸದಲ್ಲೆ ಕರ್ನಾಟಕದಲ್ಲಿ ಬಿಜೆಪಿ ಜನರ ಆಶಿರ್ವಾದ ಪಡೆದು ಅಧಿಕಾರಕ್ಕೆ ಬಂದಿಲ್ಲ. ಭ್ರಷ್ಟಾಚಾರ ಮತ್ತು ಆಪರೇಷನ್ ಕಮಲ ಮಾಡಿ ಅಧಿಕಾರಕ್ಕೆ ಬಂದಿದ್ದಾರೆ. ಮಹಾರಾಷ್ಟ್ರ ಚುನಾವಣೆ ವೇಳೆ ನಾನು ಕೋಟ್ಯಾಂತರ ರೂ. ಹಣ ಎಕ್ಸೇಂಜ್ ಮಾಡಿದ್ದೇನೆ ಎಂದು ಪ್ರಧಾನಿ ಆರೋಪಿಸಿದ್ದರು. ನಾನು ಹಾಗೆ ಮಾಡಿದ್ದು ಸಾಬೀತಾದರೆ ರಾಜಕೀಯದಿಂದ ನಿವೃತ್ತಿ ಪಡೆಯುತ್ತೇನೆ ಎಂದು ಹೇಳಿದ್ದೇನೆ. ಇದನ್ನೆಲ್ಲಾ ಮಾಧ್ಯಮ ತೋರಿಸಬವೇಕು ಅಲ್ಲವೆ” ಎಂದು ಕೇಳಿದರು.

“ಗಂಡ – ಹೆಂಡತಿ ಜಗಳ ಆಡಿದರೆ ಅದಕ್ಕೂ ರಾಜ್ಯಕ್ಕೂ, ರಾಜ್ಯದ ಜನರಿಗೂ ಏನಾದರೂ ಸಂಬಂಧ ಇದೆಯೆ? ಆದರೆ, ಮಾಧ್ಯಮಗಳು ಅದನ್ನೆ ತೋರಿಸುತ್ತಿವೆ. ಮಾಧ್ಯಮಗಳು ಜನರ ನಾಡಿ ಮಿಡಿತ ಗೊತ್ತಿಲ್ಲದೆ ಮಾತನಾಡುತ್ತವೆ. ಇತ್ತಿಚೆಗೆ ನಡೆದ ಉಪ ಚುನಾವಣೆಯಲ್ಲಿ ಮತ್ತು ಈ ಹಿಂದಿನ ವಿಧಾನಸಭೆ ಚುನಾವಣೆ ಸಮಯದಲ್ಲಿ ಕೂಡಾ ಮಾಧ್ಯಮಗಳು ತಪ್ಪಾಗಿ ಹೇಳಿತ್ತು. ಸರ್ಕಾರದ ವಿರುದ್ಧ ಬರಿ ಅಪಪ್ರಚಾರ ಮಾಡಲಾಗುತ್ತಿತ್ತು. ಆದರೆ ಜನರಿಗೆ ಸತ್ಯ ಏನೆಂದು ಗೊತ್ತಾಯಿತು. ಹಾಗಾಗಿಯೆ ಕುಟಿಲ ಮತ್ತು ದುಷ್ಟ ಪ್ರಯತ್ನಗಳು ಈಡೇರಿಲ್ಲ” ಎಂದು ಅವರು ಹೇಳಿದರು.

“ಮಾಧ್ಯಮಗಳು ಜನರಿಗೆ ಸತ್ಯವನ್ನು ಮುಟ್ಟಿಸುವ ಪ್ರಯತ್ನ ಮಾಡಬೇಕು. ನಮ್ಮ ಐದು ಗ್ಯಾರೆಂಟಿಗಳಿಂದ ಜನರಿಗೆ ಉಪಯೋಗ ಆಗುತ್ತಿದೆ ಅಲ್ಲವೆ? ಕೆಲವೊಂದು ಮಾಧ್ಯಮಗಳು ಜನರಿಗೆ ಅದು ಉಪಯೋಗ ಆಗುತ್ತಿವೆ ಎಂದು ಹೇಳುತ್ತಿವೆ, ಆದರೆ ಕೆಲವೊಂದು ಮಾಧ್ಯಮಗಳು ಸುಳ್ಳು ಹೇಳುತ್ತಿವೆ. ಬಡವರಿಗೆ ಆರ್ಥಿಕ ಮತ್ತು ಸಾಮಾಜಿಕ ಶಕ್ತಿ ತುಂಬದೆ ಹೋದರೆ ಅವರರಿಗೆ ರಾಜಕೀಯ ಶಕ್ತಿ ಬರಲು ಸಾಧ್ಯವಿಲ್ಲ.” ಎಂದು ಸಿದ್ದರಾಮಯ್ಯ ಹೇಳಿದರು.

Continue Reading
Click to comment

Leave a Reply

Your email address will not be published. Required fields are marked *

Advertisement