Published
2 weeks agoon
By
Akkare Newsಬೆಂಗಳೂರು: ಮಂಗಳವಾರ ನಿಧನರಾಗಿರುವ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಅಂತ್ಯ ಸಂಸ್ಕಾರ ಹುಟ್ಟೂರಾದ ಮದ್ದೂರು ತಾಲೂಕಿನ ಸೋಮನಹಳ್ಳಿಯಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಬುಧವಾರ(ಡಿ.11) ನಡೆಸಲಾಯಿತು.
ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಮುಂದಾಳತ್ವದಲ್ಲಿ ಹುಟ್ಟೂರು ಸೋಮನಹಳ್ಳಿಯಲ್ಲಿ ಎಲ್ಲ ಸಿದ್ಧತೆಗಳನ್ನು ನಡೆಸಲಾಯಿತು.
ವೇದಬ್ರಹ್ಮ ಭಾನುಪ್ರಕಾಶ್ ಶರ್ಮಾ ಅವರ ನೇತೃತ್ವದಲ್ಲಿ 15 ವೈದಿಕರ ತಂಡದಿಂದ ವಿಧಿ-ವಿಧಾನ ಕಾರ್ಯಗಳು ನಡೆದವು, ಕಾಫಿ ಡೇ ಮಾಲೀಕ ಸಿದ್ಧಾರ್ಥ್ ಅವರ ಪುತ್ರ ಹಾಗೂ ಎಸ್.ಎಂ.ಕೃಷ್ಣ ಅವರ ಮೊಮ್ಮಗ ಅಮರ್ಥ್ಯ ಹೆಗ್ಡೆ ಚಿತೆಗೆ ಅಗ್ನಿಸ್ಪರ್ಶ ಮಾಡುವ ಮೂಲಕ ಒಕ್ಕಲಿಗ ಸಂಪ್ರದಾಯದಂತೆ ಅಂತ್ಯ ಸಂಸ್ಕಾರ ನಡೆಸಲಾಯಿತು ಈ ವೇಳೆ 1000 ಕೇಜಿಯಷ್ಟು ಗಂಧದ ಮರದ ತುಂಡುಗಳನ್ನು ಬಳಸಲಾಗಿದೆ..
ಮಂಗಳವಾರ ನಿಧನರಾಗಿರುವ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಪಾರ್ಥಿವ ಶರೀರವನ್ನು ಬುಧವಾರ ಬೆಳಗ್ಗೆ 8 ಗಂಟೆವರೆಗೂ ಸದಾಶಿವನಗರದಲ್ಲಿರುವ ನಿವಾಸದಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು ಈ ವೇಳೆ ಸಾವಿರಾರು ಮಂದಿ ಅಂತಿಮ ದರ್ಶನ ಪಡೆದರು.
ಇದಾದ ಬಳಿಕ 8 ಗಂಟೆಗೆ ಮೃತದೇಹವನ್ನು ವಾಹನದ ಮೂಲಕ ಹುಟ್ಟೂರಾದ ಸೋಮನಹಳ್ಳಿಗೆ ತರಲಾಯಿತು. ಈ ವೇಳೆ ಮಾರ್ಗಮಧ್ಯೆ ಕೆಂಗೇರಿ, ಬಿಡದಿ, ರಾಮನಗರ ಮತ್ತು ಚನ್ನಪಟ್ಟಣದಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಯಿತು.
ಸಂಜೆ ನಾಲ್ಕು ಗಂಟೆಗೆ ಸೋಮನಹಳ್ಳಿಯಲ್ಲಿ ಸರಕಾರೀ ಗೌರವಗಳೊಂದಿಗೆ ಅಂತ್ಯ ಸಂಸ್ಕಾರದ ವಿಧಿ ವಿಧಾನಗಳನ್ನು ನಡೆಸಲಾಯಿತು.