Published
2 weeks agoon
By
Akkare Newsಮುಂಬರುವ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಪಕ್ಷ ಏಕಾಂಗಿಯಾಗಿ ಸ್ಪರ್ಧಿಸಲಿದೆ ಎಂದು ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಬುಧವಾರ ಪುನರುಚ್ಚರಿಸಿದ್ದಾರೆ. ಅಲ್ಲದೆ, ಕಾಂಗ್ರೆಸ್ ಜೊತೆಗಿನ ಮೈತ್ರಿಯನ್ನು ತಳ್ಳಿಹಾಕಿದ್ದಾರೆ.
ರಾಷ್ಟ್ರ ರಾಜಧಾನಿಯ ಆಡಳಿತರೂಢ ಪಕ್ಷವಾದ ಎಎಪಿ “ಸ್ವಂತ ಬಲದ ಮೇಲೆ” ಚುನಾವಣೆಯಲ್ಲಿ ಹೋರಾಡಲಿದೆ ಎಂದು ಕೇಜ್ರಿವಾಲ್ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಹೇಳಿದ್ದಾರೆ. ದೆಹಲಿ ಚುನಾವಣೆಗೆ ಆಮ್ ಆದ್ಮಿ ಪಕ್ಷ ಮತ್ತು ಕಾಂಗ್ರೆಸ್ “ಮೈತ್ರಿ ಒಪ್ಪಂದದ ಅಂತಿಮ ಹಂತದಲ್ಲಿದೆ” ಎಂಬ ವರದಿಗೆ ಪ್ರತಿಕ್ರಿಯೆಯಾಗಿ ಅವರ ಹೇಳಿಕೆ ಬಂದಿದೆ.
ಕಾಂಗ್ರೆಸ್ ಜೊತೆ ಯಾವುದೇ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆ ಇಲ್ಲ ಎಂದು ಕೇಜ್ರಿವಾಲ್ ಹೇಳಿದ್ದಾರೆ. ಎರಡೂ ಪಕ್ಷಗಳು ರಾಷ್ಟ್ರೀಯ ಮಟ್ಟದಲ್ಲಿ ವಿಪಕ್ಷಗಳ ಒಕ್ಕೂಟವಾದ ಇಂಡಿಯಾ ಮೈತ್ರಿಯಲ್ಲಿ ಇವೆ. ದೆಹಲಿಯಲ್ಲಿ ವಿಧಾನಸಭೆ ಚುನಾವಣೆ ಫೆಬ್ರವರಿ ಅಥವಾ ಅದಕ್ಕಿಂತ ಮೊದಲು ನಡೆಯುವ ನಿರೀಕ್ಷೆಯಿದ್ದು, ಚುನಾವಣಾ ಆಯೋಗ ಇನ್ನೂ ವೇಳಾಪಟ್ಟಿ ಪ್ರಕಟಿಸಿಲ್ಲ.
ದೆಹಲಿ ಚುನಾವಣೆಗೆ ತಮ್ಮ ಪಕ್ಷ ಯಾವುದೇ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಕೇಜ್ರಿವಾಲ್ ಡಿಸೆಂಬರ್ 1 ರಂದು ಹೇಳಿದ್ದರು. ಆಮ್ ಆದ್ಮಿ ಪಕ್ಷವು 2024 ರ ಲೋಕಸಭಾ ಚುನಾವಣೆಯಲ್ಲಿ ದೆಹಲಿಯಲ್ಲಿ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡು ಸ್ಪರ್ಧಿಸಿತ್ತು. ಆದಾಗ್ಯೂ, ರಾಷ್ಟ್ರ ರಾಜಧಾನಿಯಲ್ಲಿ ಬಿಜೆಪಿ ವಿರುದ್ಧ ಈ ಮೈತ್ರಿಕೂಟವು ಎಲ್ಲಾ ಏಳು ಸ್ಥಾನಗಳನ್ನು ಕಳೆದುಕೊಂಡಿತ್ತು.
ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳುವುದು ಸಾರ್ವತ್ರಿಕ ಚುನಾವಣೆಗೆ ಮಾತ್ರ ಎಂದು ಆಮ್ ಆದ್ಮಿ ಪಕ್ಷ ಹೇಳಿತ್ತು. ಕೇಜ್ರಿವಾಲ್ ನೇತೃತ್ವದ ಪಕ್ಷವು ವಿಧಾನಸಭೆ ಚುನಾವಣೆಗೆ ಇದುವರೆಗೆ 31 ಅಭ್ಯರ್ಥಿಗಳನ್ನು ಘೋಷಿಸಿದೆ. 2020 ರ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷವು 70 ಸ್ಥಾನಗಳಲ್ಲಿ 62 ಸ್ಥಾನಗಳನ್ನು ಗೆದ್ದಿದೆ. ಉಳಿದ ಎಂಟು ಸ್ಥಾನಗಳನ್ನು ಬಿಜೆಪಿ ಗೆದ್ದುಕೊಂಡಿದೆ.