Published
1 week agoon
By
Akkare Newsಕಲ್ಯಾಣ ಕರ್ನಾಟಕದ 97 ಪಿಡಿಒ ಹುದ್ದೆಗಳ ನೇಮಕಾತಿಗಾಗಿ ನಡೆದ ಪರೀಕ್ಷೆ ವೇಳೆ ನಡೆದ ಗೊಂದಲದ ಕುರಿತಂತೆ ಸಮಗ್ರ ತನಿಖೆ ನಡೆಸಲು ಕರ್ನಾಟಕ ಲೋಕಸೇವಾ ಆಯೋಗವು ಮೂವರು ಸದಸ್ಯರ ಉಪ ಸಮಿತಿಯನ್ನು ರಚಿಸಿದ್ದು, ಸಮಿತಿ ಸಲ್ಲಿಸುವ ಅಂತಿಮ ವರದಿಯನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಗುರುವಾರ ತಿಳಿಸಿದ್ದಾರೆ.
ಕಲ್ಯಾಣ ಕರ್ನಾಟಕದ 97 ಪಿಡಿಒ ಹುದ್ದೆಗಳ ನೇಮಕಾತಿಗಾಗಿ ಸಿಂಧನೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಪರೀಕ್ಷೆಯ ವೇಳೆ ಪ್ರಶ್ನೆಪತ್ರಿಕೆ ವಿತರಿಸಲು ಅರ್ಧಗಂಟೆ ತಡವಾಗಿತ್ತು. ಈ ಗೊಂದಲದ ವಿರುದ್ಧ ಅಭ್ಯರ್ಥಿಗಳು ಪ್ರತಿಭಟನೆ ನಡೆಸಿದ್ದರು.
ವಿಧಾನ ಪರಿಷತ್‌ನಲ್ಲಿ ಸದಸ್ಯ ಶಶಿಲ್ ನಮೋಶಿ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಅವರು ಉತ್ತರಿಸಿದ ಮುಖ್ಯಮಂತ್ರಿ, “ಕಲ್ಯಾಣ ಕರ್ನಾಟಕ ಭಾಗದ 97 ಪಿಡಿಒ ಹುದ್ದೆಗಳ ಪರೀಕ್ಷೆಯನ್ನು ಕರ್ನಾಟಕ ಲೋಕಸೇವಾ ಆಯೋಗ ನಡೆಸಿದೆ. ಈ ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆ ಲೀಕ್ ಆಗಿಲ್ಲ ಮತ್ತು ಪ್ರಶ್ನೆಪತ್ರಿಕೆ ವಿತರಿಸಲು ವಿಳಂಬವಾಗಿಲ್ಲ. ಈ ಪ್ರಕರಣದ ಸತ್ಯಾಸತ್ಯತೆ ತಿಳಿಯಲು ಈಗಾಗಲೇ ಆಯೋಗದಲ್ಲಿ ಉಪ ಸಮಿತಿಯನ್ನು ರಚಿಸಲಾಗಿದ್ದು, ವರದಿ ಸ್ವೀಕೃತವಾದ ನಂತರ ಪರಶೀಲಿಸಿ ಕ್ರಮ ಕೈಗೊಳ್ಳಲಾಗುವುದು” ಎಂದು ಹೇಳಿದ್ದಾರೆ.
ನಕಲಿ ಇನ್ವಾಯ್ಸ್ ಸೃಷ್ಟಿ – ತಡೆಗೆ ಕ್ರಮ ಪಿಡಿಒ ಹುದ್ದೆ ನೇಮಕಾತಿ
ರಾಜ್ಯದಲ್ಲಿ ನಕಲಿ ಇನ್ವಾಯ್ಸ್ ಸೃಷ್ಟಿಸಿ ಜಿ.ಎಸ್.ಟಿ ವಂಚನೆ ಮಾಡದಂತೆ ತಡೆಯಲು ವಾಣಿಜ್ಯ ತೆರಿಗೆ ಇಲಾಖೆಯ ಜಾರಿ ವಿಭಾಗದ ಮೂಲಕ ಕ್ರಮ ಕೈಗೊಳ್ಳಲಾಗುವುದು ಎಂದು ವಿಧಾನ ಪರಿಷತ್ತಿನಲ್ಲಿ ಸದಸ್ಯ ಎಂ. ನಾಗರಾಜು ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಸಿದ್ದರಾಮಯ್ಯ ಉತ್ತರಿಸಿದ್ದಾರೆ.
“ರಾಜ್ಯದಲ್ಲಿ ಜಿ.ಎಸ್.ಟಿ ವಂಚನೆಗಾಗಿಯೇ ನಕಲಿ ದಾಖಲಾತಿ ಸೃಷ್ಟಿಸಿ ಯಾವುದೇ ಸರಕುಗಳನ್ನು ಪೂರೈಸದೆ ನಕಲಿ ಇನ್ವಾಯ್ಸ್ ಸೃಷ್ಟಿಸಿ ಇನ್ ಪುಟ್ ಟ್ಯಾಕ್ಸ್ ಕ್ರೆಡಿಟ್ ಪಡೆಯಲು ಪ್ರಯತ್ನಿಸಿ 2437 ಕಂಪೆನಿಗಳು ಸಿಕ್ಕಿಬಿದ್ದಿವೆ” ಎಂದು ಅವರು ಹೇಳಿದ್ದಾರೆ.
“ಈ ರೀತಿಯ ತೆರಿಗೆ ವಂಚನೆ ಅಕ್ರಮವನ್ನು ತಡೆಗಟ್ಟಲು ಸರ್ಕಾರದಿಂದ ನೇಮಕಗೊಂಡ ರಾಜ್ಯ ವಾಣಿಜ್ಯ ತೆರಿಗೆಗಳ ಇಲಾಖೆಯ ಜಾರಿ ವಿಭಾಗದ ಅಧಿಕಾರಿಗಳು 752 ಪ್ರಕರಣಗಳಲ್ಲಿ ತಪಾಸಣೆ ಭಾಗದ ಕೈಗೊಂಡಿದ್ದಾರೆ. ಸದರಿ ಪ್ರಕರಣಗಳಲ್ಲಿ 429 ವಂಚನೆ ಪ್ರಕರಣಗಳಿಗೆ ನ್ಯಾಯನಿರ್ಣಯ ಪ್ರಕ್ರಿಯೆಗೆ ಕ್ರಮ ಕೈಗೊಳ್ಳಲಾಗಿದೆ. ಉಳಿದ ಪ್ರಕರಣ ಗಳು ಲೆಕ್ಕಪರಿಶೋಧನೆ ಮತ್ತು ಪರಿಶೀಲನೆ ಹಂತದಲ್ಲಿವೆ” ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
“ನಕಲಿ ಇನ್ವಾಯ್ಸ್ ಗಳ ಮೂಲಕ ರಾಜ್ಯದ ತೆರಿಗೆ ಸೋರಿಕೆಯಾಗದಂತೆ ರಾಜ್ಯದ ಜಿ.ಎಸ್.ಟಿ. ಜಾರಿ ವಿಭಾಗದ ಮೂಲಕ ಕಠಿಣ ಕ್ರಮ ಕೈಗೊಳ್ಳಲಾಗುವುದು” ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.