Published
1 week agoon
By
Akkare Newsರಾಮಮಂದಿರದಲ್ಲಿ ಪ್ರಧಾನಿ ಮೋದಿ ಮೂರ್ತಿ ಪ್ರತಿಷ್ಠಾಪನೆ ಮಾಡುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿ, ಕಾರ್ಯಕ್ರಮದಿಂದ ದೂರ ಉಳಿದಿದ್ದ ಪುರಿ ಶಂಕರಾಚಾರ್ಯ ನಿಶ್ಚಲಾನಂದ ಸರಸ್ವತಿ ಈಗ ಮತ್ತೊಮ್ಮೆ ಪ್ರಧಾನಿ ಮೋದಿ ವಿರುದ್ಧ ಹರಿಹಾಯ್ದಿದ್ದಾರೆ.
ಮಂಗಳವಾರ ಉಜ್ಜಯಿನಿಯ ಶ್ರೀ ಮಹಾಕಾಳೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಧರ್ಮಸಭೆಯಲ್ಲಿ ಭಾಗವಹಿಸಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಶಂಕರಾಚಾರ್ಯ ನಿಶ್ಚಲಾನಂದ ಸರಸ್ವತಿ, ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶ ಸಿಎಂ ಆದಿತ್ಯನಾಥ್ ವಿರುದ್ಧ ವಾಗ್ದಾಳಿ ನಡೆಸಿದ್ದು ʼಭಾರತದಲ್ಲಿ ಸದೃಢ ನ್ಯಾಯಾಂಗ ವ್ಯವಸ್ಥೆ ಇದ್ದಿದ್ದರೆ ಮೋದಿ ಮತ್ತು ಯೋಗಿ ಜೈಲು ಪಾಲಾಗುತ್ತಿದ್ದರುʼ ಎಂದು ಅಚ್ಚರಿ ಹೇಳಿಕೆ ನೀಡಿದ್ದಾರೆ.
ಅಲ್ಲದೆ ಇದೇ ವೇಳೆ 2014 ರಲ್ಲಿ ನರೇಂದ್ರ ಮೋದಿ ಅವರನ್ನು ಬೆಂಬಲಿಸಿದ್ದು ತಾವು ಮಾಡಿದ ತಪ್ಪು ಎಂದು ಪುರಿ ಶಂಕರಾಚಾರ್ಯ ಹೇಳಿದ್ದಾರೆ. 2014 ರಲ್ಲಿ ಮೋದಿ ಪ್ರಧಾನಿಯಾಗುವುದಕ್ಕೂ ಮೊದಲು ಪುರಿಗೆ ತೆರಳಿ ಶಂಕರಾಚಾರ್ಯ ನಿಶ್ಚಲಾನಂದ ಸರಸ್ವತಿ ಅವರ ಆಶೀರ್ವಾದ ಪಡೆದಿದ್ದರು.
ಇನ್ನು ಈ ಕುರಿತು ಹರೀಶ್ ತಿವಾರಿ ಎಂಬವರು ಎಕ್ಸ್ ನಲ್ಲಿ ಮಾಡಿದ್ದ ಪೋಸ್ಟ್ ನ್ನು ಹಂಚಿಕೊಂಡ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ, ‘ನಿರ್ಭೀತ ಜಗದ್ಗುರು ‘ಎಂದು ಕರೆದಿದ್ದಾರೆ.