Published
1 week agoon
By
Akkare Newsಪುತ್ತೂರು :ಸಂಬಳದಲ್ಲಿ ಅರ್ಧಕ್ಕಿಂತಲೂ ಅಧಿಕ ಕಡಿತ ಮಾಡುತ್ತಿರುವ ಗುತ್ತಿಗೆ ಸಂಸ್ಥೆಗಳ ಕ್ರಮವನ್ನು ವಿರೋಧಿಸಿ ಪುತ್ತೂರು ಕೆಎಸ್ಸಾರ್ಟಿಸಿ ಡಿಪೋ ವ್ಯಾಪ್ತಿಯ ಹೊರಗುತ್ತಿಗೆ ಚಾಲಕರು ದಿಢೀರ್ ಕೆಲಸ ಸ್ಥಗಿತಗೊಳಿಸಿರುವ ಘಟನೆ ವರದಿಯಾಗಿದೆ. ಹೊರಗುತ್ತಿಗೆಯಡಿ ಕಾರ್ಯನಿರ್ವಹಿಸುತ್ತಿರುವ 60 ಬಸ್ ಚಾಲಕರ ಪೈಕಿ 40 ಮಂದಿ ಶುಕ್ರವಾರ ರಾತ್ರಿಯಿಂದ ಕೆಲಸ ಸ್ಥಗಿತಗೊಳಿಸಿದ್ದಾರೆ.
ಇದರಿಂದ ಪುತ್ತೂರು ಕೆಎಸ್ಸಾರ್ಟಿಸಿ ಡಿಪೋದ ಬಸ್ ಸೇವೆ ಅಸ್ತವ್ಯಸ್ತಗೊಂಡಿದೆ ಎಂದು ತಿಳಿದುಬಂದಿದೆ.
ಪುತ್ತೂರು ಕೆಎಸ್ಸಾರ್ಟಿಸಿ ಡಿಪೋದ ಬಸ್ ಗಳಲ್ಲಿ ಸುಮಾರು 60ರಷ್ಟು ಚಾಲಕರು ಹೊರಗುತ್ತಿಗೆ ಆಧಾರದಲ್ಲಿ ದುಡಿಯುತ್ತಿದ್ದಾರೆ. ಇವರು ಪನ್ನಗ ಮತ್ತು ಪೂಜಾ ಸೆಕ್ಯೂರಿಟೀಸ್ ಎಂಬ ಸಂಸ್ಥೆಯ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರಿಗೆ ಕೆಎಸ್ಸಾರ್ಟಿಸಿ ನೀಡುವ ಸಂಬಳದಲ್ಲಿ 50 ಶೇಕಡಕ್ಕಿಂತಲೂ ಮೊತ್ತವನ್ನು ಗುತ್ತಿಗೆ ಸಂಸ್ಥೆ ಅಧಿಕ ಕಡಿತ ಮಾಡುತ್ತಿದೆ ಎಂಬುದು ಹೊರಗುತ್ತಿಗೆ ಚಾಲಕರ ಆರೋಪವಾಗಿದೆ.
ಈ ಬಗ್ಗೆ ಹಲವು ಭಾರೀ ಮನವಿ ಸಲ್ಲಿಸಿದರೂ ಪ್ರಯೋಜವಾಗದ ಕಾರಣ 40 ಬಸ್ ಚಾಲಕರು ಶುಕ್ರವಾರ ರಾತ್ರಿಯಿಂದ ಹಠಾತ್ ಆಗಿ ಬಸ್ ಚಾಲನೆ ಕೆಲಸ ಸ್ಥಗಿತಗೊಳಿಸಿದ್ದಾರೆ. ಇದರಿಂದ ಪುತ್ತೂರು ಡಿಪೋದಿಂದ ಹೊರಡುವ ಸರಕಾರಿ ಬಸ್ ಸೇವೆ ಅಸ್ತವ್ಯಸ್ತಗೊಂಡಿದೆ ಎಂದು ತಿಳಿದುಬಂದಿದೆ.
ಪುತ್ತೂರು ಕೆಎಸ್ಸಾರ್ಟಿಸಿ ಬಸ್ ಡಿಪೋದಿಂದ ಪ್ರಮುಖವಾಗಿ ಮಂಗಳೂರು, ಉಪ್ಪಿನಂಗಡಿ, ಸುಳ್ಯ, ವಿಟ್ಲಕ್ಕೆ ಬಸ್ ಗಳು ಓಡಾಡುತ್ತವೆ. ಉಳಿದಂತೆ ಗ್ರಾಮಾಂತರ ಪ್ರದೇಶಗಳಿಗೆ ಬಸ್ ಗಳು ಸಂಚರಿಸುತ್ತವೆ. ಗುತ್ತಿಗೆ ನೌಕರರ ಹಠಾತ್ ಪ್ರತಿಭಟನೆ ಕಾರಣ ಇಂದು ಬೆಳಗ್ಗೆ ಕೆಎಸ್ಸಾರ್ಟಿಸಿ ಬಸ್ ಗಳನ್ನೇ ಆಶ್ರಯಿಸಿರುವ ಪ್ರಯಾಣಕರು ಸಂಕಷ್ಟಕ್ಕೆ ಸಿಲುಕಿದರು.