Published
1 week agoon
By
Akkare Newsಬೆಳಗಾವಿ : ಪಂಚಮಸಾಲಿ ಹೋರಾಟವನ್ನೇ ಸಿಎಂ ಸಿದ್ದರಾಮಯ್ಯ ಸಂವಿಧಾನ ವಿರೋಧ ಎಂದು ಹೇಳಿಕೆ ನೀಡಿದ್ದು ಖಂಡನೀಯ. ಒಂದುವೇಳೆ ಹೋರಾಟ ಸಂವಿಧಾನ ವಿರೋಧಿ ಆಗಿದ್ದರೆ ನಮಗೆ ಬೆಂಬಲಿಸಿದ ಶಾಸಕರನ್ನು ತಾಕತ್ತಿದ್ದರೆ ಅಮಾನತುಗೊಳಿಸಿ ಎಂದು ಪಂಚಮಸಾಲಿ ಪೀಠದ ಕೂಡಲಸಂಗಮ ಬಸವ ಜಯಮೃತ್ಯುಂಜಯ ಶ್ರೀಗಳು ಸರಕಾರಕ್ಕೆ ಸವಾಲ್ ಹಾಕಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿ ಉದ್ದೇಶಿಸಿ ಮಾತನಾಡಿದ ಇವರು. ಪಂಚಮಸಾಲಿ ಸಮುದಾಯದ 2 ಎ ಮೀಸಲಾತಿ ಹೋರಾಟವನ್ನು ಸಂವಿಧಾನ ವಿರೋಧಿ ಎಂದಿರುವ ಸಿಎಂ ಸಿದ್ದರಾಮಯ್ಯ ಲಿಂಗಾಯತರಿಗೆ ಅವಮಾನ ಮಾಡಿದ್ದಾರೆ.
ನಮ್ಮ ಹೋರಾಟಕ್ಕೆ ಕಾಂಗ್ರೆಸ್ ಪಕ್ಷದ ಶಾಸಕರು ಹಾಗೂ ಸಚಿವರು ಬೆಂಬಲಿಸಿದ್ದಾರೆ. ಸರಕಾರಕ್ಕೆ ತಾಕತ್ತು ಇದ್ದರೆ ಅವರನ್ನು ಶಾಸಕ ಸ್ಥಾನದಿಂದ ಅಮಾನತು ಮಾಡಲಿ ಎಂದು ಹೇಳಿದರು.
ಅಂಬೇಡ್ಕರ್ ಸಂವಿಧಾನ ಅಡಿಯಲ್ಲಿ ನಾವು ಬದುಕಿದ್ದೇವೆ. ಆದರೆ ನಮ್ಮ ಹೋರಾಟವನ್ನೇ ಸರಕಾರ ಹತ್ತಿಕ್ಕುವ ಪ್ರಯತ್ನ ಮಾಡುತ್ತಿದೆ. ನಿಮಗೆ ಮೀಸಲಾತಿ ನೀಡಲು ಸಾಧ್ಯವಿಲ್ಲ ಎಂದರೆ ಬಹಿರಂಗವಾಗಿ ಹೇಳಿಕೆ ನೀಡಿ. ನಾವು ಜನತಾ ನ್ಯಾಯಾಲಯಕ್ಕೆ ಹೋಗಿ ಮೀಸಲಾತಿ ಪಡೆಯುವ ಪ್ರಯತ್ನ ಮಾಡುತ್ತೇವೆ. ಕೂಡಲೇ ಸಿಎಂ ಸಿದ್ದರಾಮಯ್ಯ ಅವರು ಹೋರಾಟ ಸಂವಿಧಾನ ವಿರೋಧಿ ಹೇಳಿಕೆ ವಾಪಸ್ ಪಡೆದು ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.
ಕಳೆದ ನಾಲ್ಕು ವರ್ಷಗಳಿಂದ ನಾವು ಶಾಂತಿಯುತ ಹೋರಾಟ ಮಾಡುತ್ತಾ ಬಂದಿದ್ದೇವೆ. ಡಿಸೆಂಬರ್. 10 ರಂದು ಟ್ರ್ಯಾಕ್ಟರ್ ರ್ಯಾಲಿಯನ್ನು ಸರ್ಕಾರ ತಡೆಯಿತು. ಶಾಂತಿಯುತ ಪ್ರತಿಭಟನೆ ನಡೆಸಿದವರ ಮೇಲೆ ಅಮಾನವೀಯವಾಗಿ ಹಲ್ಲೆ ನಡೆಸಿದ್ದಾರೆ. ಇದರಿಂದ ನಮ್ಮ ಲಿಂಗಾಯತ ಸಮುದಾಯಕ್ಕೆ ನೋವಾಗಿದೆ. ಸರಕಾರದ ನಡೆ ಖಂಡಿಸಿ ಡಿ. 16 ರಿಂದ ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿ ನಡೆಸುತ್ತೇವೆ ಎಂದರು.
10 ಸಾವಿರ ಜನ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಬಂದರೆ ಮುತ್ತು ಕೊಡಲು ಆಗುತ್ತಾ ಎಂದು ಗೃಹ ಸಚಿವರು ಹೇಳುತ್ತಾರೆ.
ನೀವು ನಮ್ಮನ್ನು ಪ್ರೀತಿ ಮಾಡುವ ವ್ಯಕ್ತಿ. ನೀವು ಓದಿದ್ದು ತುಮಕೂರು ಸಿದ್ದಗಂಗಾ ಮಠದಲ್ಲಿ. ಆ ಮಠಕ್ಕೆ ನೀವು ಅಪಮಾನ ಮಾಡಿದಂತೆ ಆಗುತ್ತದೆ. ತುತ್ತು ಅನ್ನ ಕೊಟ್ಟ ಸಮಾಜಕ್ಕೆ ನೀವು ಅವೈಜ್ಞಾನಿಕ ಹೇಳಿಕೆ ಕೊಟ್ಟು ನೋವು ಮಾಡಿದ್ದು, ಕೊರಟಗೆರೆ ಕ್ಷೇತ್ರದ ಲಿಂಗಾಯತ ಸಮುದಾಯದವರು ಸಚಿವರ ವಿರುದ್ಧ ಹೋರಾಟ ಮಾಡುವಂತೆ ಆಗ್ರಹಿಸಿದರು.