Published
7 days agoon
By
Akkare Newsರಾಜ್ಯದಲ್ಲಿ ಮಳೆ ತುಸು ಬಿಡುವು ನೀಡಿದೆ. ಮತ್ತೊಂದೆಡೆ ರಾಜ್ಯಾದ್ಯಂತ ಮುಂದಿನ ಮೂರು ದಿನಗಳಲ್ಲಿ ಸಾಮಾನ್ಯ ತಾಪಮಾನದಿಂದ ಕನಿಷ್ಠ ತಾಪಮಾನ 2ರಿಂದ 4 ಡಿಗ್ರಿ ಸೆಲ್ಸಿಯಸ್ ಕುಸಿತ ಕಾಣಲಿದೆ. ಈ ವೇಳೆ ಚಳಿಯ ಪ್ರಮಾಣ ಹೆಚ್ಚಾಗಿರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಈ ಮೂರು ದಿನಗಳು ಕನಿಷ್ಠ ತಾಪಮಾನದಲ್ಲೂ ಕುಸಿತ ಕಾಣುವುದರಿಂದ ಚಳಿ ಜನರನ್ನು ಕಾಡಲಿದೆ. ನಂತರ ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡು ಭಾಗದಲ್ಲಿ ಕನಿಷ್ಠ ತಾಪಮಾನದಲ್ಲಿ ಕ್ರಮೇಣ ಹೆಚ್ಚಳವಾಗಲಿದೆ. ಆದರೆ ಕರಾವಳಿ ಕರ್ನಾಟಕದ ಭಾಗದಲ್ಲಿ ಕನಿಷ್ಠ ತಾಪಮಾನದಲ್ಲಿ ಯಾವುದೇ ದೊಡ್ಡ ಬದಲಾವಣೆ ಇಲ್ಲ ಎಂದು ಹೇಳಿದೆ.
ಲಕ್ಷದ್ವೀಪ ಮತ್ತು ಪಕ್ಕದ ಆಗ್ನೇಯ ಅರೇಬಿಯನ್ ಸಮುದ್ರದ ಮೇಲಿನ ವಾಯು ಚಂಡಮಾರುತದ ಪರಿಚಲನೆಯು ಸರಾಸರಿ ಸಮುದ್ರ ಮಟ್ಟದಿಂದ 3.1 ಕಿ.ಮೀವರೆಗೆ ವಿಸ್ತರಿಸಿದೆ. ದಕ್ಷಿಣ ಅಂಡಮಾನ್ ಸಮುದ್ರ ಮತ್ತು ಪಕ್ಕದ ಆಗ್ನೇಯ ಬಂಗಾಳ ಕೊಲ್ಲಿಯ ಮೇಲಿನ ಗಾಳಿಯ ಚಂಡಮಾರುತದ ಪರಿಚಲನೆಯು ಕೂಡ ಸರಾಸರಿ ಸಮುದ್ರ ಮಟ್ಟದಿಂದ 3.1 ಕಿ.ಮೀ ವರೆಗೆ ವಿಸ್ತರಿಸಿದೆ ಎಂದು ಮುನ್ಸೂಚನೆ ನೀಡಿದೆ.
ಮುಂದಿನ 24 ಗಂಟೆಗಳಲ್ಲಿ ಆಗ್ನೇಯ ಬಂಗಾಳ ಕೊಲ್ಲಿಯಲ್ಲಿ ಕಡಿಮೆ ಒತ್ತಡದ ಪ್ರದೇಶವು ರಚನೆಯಾಗುವ ಸಾಧ್ಯತೆಯಿದೆ. ಅದರ ನಂತರ ಮುಂದಿನ ಎರಡು ದಿನಗಳಲ್ಲಿ ಪಶ್ಚಿಮ-ವಾಯುವ್ಯವಾಗಿ ತಮಿಳುನಾಡು ಕರಾವಳಿಯ ಕಡೆಗೆ ಚಲಿಸುವ ಸಾಧ್ಯತೆಯಿದೆ.
ಇಂದು ರಾಜ್ಯದಾದ್ಯಂತ ಒಣ ಹವೆ ಇರುವ ಸಾಧ್ಯತೆಯಿದೆ. ಒಳನಾಡಿನ ಒಂದೆರಡು ಕಡೆಗಳಲ್ಲಿ ಹಗುರ ಮಂಜು ಅಥವಾ ಇಬ್ಬನಿ ಬೀಳುವ ಸಾಧ್ಯತೆಯೂ ಇದೆ. ಡಿಸೆಂಬರ್ 17ರಂದು ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ರಾಮನಗರ, ಚಾಮರಾಜನಗರ, ತುಮಕೂರು, ಮೈಸೂರು ಮತ್ತು ಮಂಡ್ಯ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗಬಹುದು ಎಂದು ಹೇಳಿದೆ.
ಕರಾವಳಿ ಕರ್ನಾಟಕ ಮತ್ತು ದಕ್ಷಿಣ ಒಳನಾಡು ಭಾಗಗಳಲ್ಲಿ ಒಣ ಹವಾಮಾನವು ಮೇಲುಗೈ ಸಾಧಿಸುವ ಸಾಧ್ಯತೆಯಿದೆ. ಉತ್ತರ ಒಳನಾಡಿನ ಒಂದೆರಡು ಕಡೆಗಳಲ್ಲಿ ಹಗುರ ಮಂಜು, ಇಬ್ಬನಿ ಇರುವ ಸಾಧ್ಯತೆಯಿದೆ. ಡಿಸೆಂಬರ್ 18ರಂದು ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ರಾಮನಗರ, ಚಾಮರಾಜನಗರ, ತುಮಕೂರು, ಮೈಸೂರು ಮತ್ತು ಮಂಡ್ಯ ಜಿಲ್ಲೆಗಳಲ್ಲಿ ಕೆಲವೆಡೆ ಹಗುರದಿಂದ ಸಾಧಾರಣ ಮಳೆಯಾಗಲಿದೆ. ಕರಾವಳಿ ಕರ್ನಾಟಕ, ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡು ಉಳಿದ ಜಿಲ್ಲೆಗಳಲ್ಲಿ ಶುಷ್ಕ ಹವಾಮಾನ ಕಂಡುಬರಲಿದೆ.
ಬೆಂಗಳೂರು ವೀಥಿರ್ : ಬೆಂಗಳೂರಿಗೆ ವ್ಯಾಪಕ ಮಳೆ: ಡಿಸೆಂಬರ್ 19ರ ವರೆಗಿನ ಹವಾಮಾನ ಮುನ್ಸೂಚನೆ
ಡಿಸೆಂಬರ್ 19ರಂದು ಕರಾವಳಿ ಕರ್ನಾಟಕದ ಜಿಲ್ಲೆಗಳ ಮೇಲೆ ಒಂದೆರಡು ಕಡೆಗಳಲ್ಲಿ ಮತ್ತು ದಕ್ಷಿಣ ಒಳನಾಡು ಜಿಲ್ಲೆಯ ಕೆಲವು ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ರಾಯಚೂರು, ಕೊಪ್ಪಳ, ಗದಗ ಮತ್ತು ಹಾವೇರಿ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆಯಿದೆ.
ಡಿಸೆಂಬರ್ 20ರಂದು ಕರಾವಳಿ ಕರ್ನಾಟಕ ಮತ್ತು ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಕೆಲವು ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ರಾಯಚೂರು, ಕೊಪ್ಪಳ, ಗದಗ ಮತ್ತು ಹಾವೇರಿ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆಯಿದೆ. ಒಣ ಹವಾಮಾನವು ಉತ್ತರ ಒಳನಾಡು ಉಳಿದ ಜಿಲ್ಲೆಗಳ ಮೇಲೆ ಚಾಲ್ತಿಯಲ್ಲಿರಲಿದೆ.
ಬೀದರ್, ಕಲಬುರ್ಗಿ, ಯಾದಗಿರಿ, ರಾಯಚೂರು, ಕೊಪ್ಪಳ, ಚಿತ್ರದುರ್ಗ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ಬಳ್ಳಾರಿ, ದಾವಣಗೆರೆ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ರಾಮನಗರ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಹಗುರ ಮಳೆಯಾಗಲಿದೆ.
ಬೆಂಗಳೂರು ನಗರ ಮತ್ತು ನೆರೆಹೊರೆಯ ಪ್ರದೇಶಗಳಲ್ಲಿ ಮುಂದಿನ ಎರಡು ದಿನಗಳಲ್ಲಿ ಆಕಾಶವು ಶುಭ್ರವಾಗಿರಲಿದೆ. ಕೆಲವು ಕಡೆಗಳಲ್ಲಿ ಬೆಳಗಿನ ಜಾವದಲ್ಲಿ ದಟ್ಟವಾದ ಮಂಜು ಅಥವಾ ಇಬ್ಬನಿ ಇರುವ ಸಾಧ್ಯತೆ ಇದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 27 ಡಿಗ್ರಿ ಸೆಲ್ಸಿಯಸ್ ಹಾಗೂ 17 ಡಿಗ್ರಿ ಸೆಲ್ಸಿಯಸ್ ಇರಲಿದೆ.