ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಇತರ

ಪುತ್ತೂರು : ಸಂಚಾರ ದಟ್ಟಣೆ ತಡೆಗೆ ಮಾಸ್ಟರ್‌ ಪ್ಲ್ಯಾನ್‌

Published

on

ನಗರದ ಸಂಚಾರ ದಟ್ಟಣೆಯ ನಿಯಂತ್ರಣದ ನಿಟ್ಟಿನಲ್ಲಿ ಮಾಸ್ಟರ್‌ ಪ್ಲ್ಯಾನ್‌ ಒಂದನ್ನು ರಚಿಸಿ ಆ ಪ್ರಕಾರವೇ ನಗರದೊಳಗೆ ಮುಂದಿನ ಯೋಜನೆಗಳ ಅನುಷ್ಠಾನಕ್ಕೆ ಅವಕಾಶ ಕಲ್ಪಿಸುವುದು ಸೂಕ್ತ. ಇದಕ್ಕೆ ಎಂಜಿನಿಯರ್‌ ಅಸೋಸಿಯೇಶನ್‌ ಸಹಿತ ತಜ್ಞರ ಸಲಹೆ ಪಡೆಯಬೇಕು ಎಂದು ನಗರಸಭೆಯಲ್ಲಿ ಟ್ರಾಫಿಕ್‌ ಸಹಿತ ವಿವಿಧ ವಿಚಾರಗಳಿಗೆ ಸಂಬಂಧಿಸಿ ನಡೆದ ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಯಿತು.
ಟ್ರಾಫಿಕ್‌, ಬಸ್‌ ನಿಲುಗಡೆ, ಪಾರ್ಕಿಂಗ್‌ ಬಗ್ಗೆ ನಗರಸಭೆ ಅಧ್ಯಕ್ಷೆ ಲೀಲಾವತಿ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.

 

ಖಾಸಗಿ ಬಸ್‌ ನಿಲ್ದಾಣದಿಂದಲೇ ಬಸ್‌
ನಗರದ ಖಾಸಗಿ ಬಸ್‌ ನಿಲ್ದಾಣ ನಿರ್ಜೀವ ಸ್ಥಿತಿಯಲ್ಲಿದ್ದು ಇದಕ್ಕೆ ಜೀವ ಕಳೆ ಬರಬೇಕಿದೆ ಎಂದು ಸಭೆಯಲ್ಲಿ ಹಲವರು ಅಭಿಪ್ರಾಯಿಸಿದರು. ಸಂಚಾರ ಪೊಲೀಸರು ಉತ್ತರಿಸಿ ಅಲ್ಲಿ ಸಂಪರ್ಕ ರಸ್ತೆಯು ಸಮರ್ಪಕವಾಗಿಲ್ಲ. ಮೂಲ ಸೌಕರ್ಯಗಳ ಕೊರತೆ ಇದೆ ಎಂದಾಗ ಪೌರಾಯುಕ್ತ ಮಧು ಎಸ್‌. ಮನೋಹರ್‌ ಉತ್ತರಿಸಿ, ಸಂಪರ್ಕ ರಸ್ತೆ ಸಮಸ್ಯೆ ಹೊರತುಪಡಿಸಿ ಮೂಲ ಸೌಕರ್ಯ ಇದೆ ಎಂದರು.

 

ಆರ್‌ಟಿಒ ವಿಶ್ವನಾಥ ಅಜಿಲ ಮಾತನಾಡಿ, ಮುಂದಿನ 15 ದಿನದೊಳಗೆ ಖಾಸಗಿ ಬಸ್‌ಗಳು ನಿಲ್ದಾಣಕ್ಕೆ ಹೋಗಿ ಅಲ್ಲಿಂದಲೇ ಪ್ರಯಾಣಿಕರನ್ನು ಕರೆದುಕೊಂಡು ಬರುವ ಹಾಗೆ ವ್ಯವಸ್ಥೆ ಮಾಡುವ ಚಿಂತನೆ ನಡೆದಿದೆ ಎಂದರು. ವರ್ತಕರ ಸಂಘದ ವಾಮನ್‌ ಪೈ ಮಾತನಾಡಿ, ಮಡಿವಾಳಕಟ್ಟೆಯಿಂದ ಹಾರಾಡಿ -ಬೊಳುವಾರು ಮೂಲಕ ಖಾಸಗಿ ಬಸ್‌ ನಿಲ್ದಾಣಕ್ಕೆ ಬಸ್‌ ಓಡಾಟಕ್ಕೆ ಪೂರಕ ವಾತಾವರಣ ನಿರ್ಮಾಣವಾದಲ್ಲಿ ಉತ್ತಮ ಎಂದರು. ವರ್ತಕರ ಸಂಘದ ಉಲ್ಲಾಸ್‌ ಪೈ, ನಗರಸಭೆ ಮಾಜಿ ಅಧ್ಯಕ್ಷ ಜೀವಂಧರ್‌ ಜೈನ್‌ ಕೆಲವೊಂದು ಸಲಹೆ ಸೂಚನೆ ನೀಡದರು. ಸಭೆಯ ಒಟ್ಟು ಅಭಿಪ್ರಾಯ ಸಂಗ್ರಹಿಸಿದ ಅನಂತರ ಖಾಸಗಿ ಬಸ್‌ ಮಾಲಕರ ಸಭೆ ಕರೆದು ಅವರ ಅಭಿಪ್ರಾಯವನ್ನು ತಿಳಿದು ಅಂತಿಮ ನಿರ್ಣಯ ಕೈಗೊಳ್ಳಲು ಸಭೆ ನಿರ್ಧರಿಸಿತು.

ಪಾರ್ಕಿಂಗ್‌ ಇಕ್ಕಟ್ಟು
ನಗರದಲ್ಲಿ ಹಳೆ ಕಟ್ಟಡಗಳೆ ಹೆಚ್ಚಿರುವ ಕಾರಣ ಪಾರ್ಕಿಂಗ್‌ ಸಮಸ್ಯೆ ಉಲ್ಬಣಿಸಿದೆ. ಹೊಸ ಕಟ್ಟಡ ನಿರ್ಮಾಣದ ವೇಳೆ ಪಾರ್ಕಿಂಗ್‌ಗೆ ಸ್ಥಳ ಕಾದಿರಿಸುತ್ತಿದ್ದು ಹಳೆ ಕಟ್ಟಡ ಮುಂಭಾಗದ ಸ್ಥಳಾವಕಾಶದ ಕೊರತೆ ಇದೆ. ಹೊಸ ಕಟ್ಟಡವಾದ ಬಳಿಕವಷ್ಟೇ ಈ ಸಮಸ್ಯೆಗೆ ಮುಕ್ತಿ ಎನ್ನುವ ಬಗ್ಗೆ ಸಭೆಯಲ್ಲಿ ವಿವರಿಸಲಾಯಿತು. ವಾಮನ ಪೈ ಮಾತನಾಡಿ, ದೇವಣ್ಣ ಕಿಣಿ ಬಿಲ್ಡಿಂಗ್‌ ಸಮೀಪದ ಪುರಸಭೆಯ ವಾಣಿಜ್ಯ ಕಟ್ಟಡ ಇದೆ. ಅಲ್ಲಿ ಮಲ್ಟಿ ಪಾರ್ಕಿಂಗ್‌ ವ್ಯವಸ್ಥೆ ಮಾಡಿದರೆ ಉತ್ತಮ ಎಂದರು.

ಪೇ ಪಾರ್ಕಿಂಗ್‌ಗೆ ಅರಣ್ಯ ಇಲಾಖೆ ಕಚೇರಿ ಸ್ಥಳ ಸೂಕ್ತ
ಮಾಜಿ ಅಧ್ಯಕ್ಷ ಜೀವಂಧರ್‌ ಜೈನ್‌ ಮಾತನಾಡಿ, ನಗರದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಸಮೀಪ ಅರಣ್ಯ ಇಲಾಖೆಗೆ ಸೇರಿದ ಕಚೇರಿ ಇದ್ದು ಸುಮಾರು 1.5 ಎಕ್ರೆ ಜಾಗ ಇಲ್ಲಿದೆ. ಈ ಜಾಗವನ್ನು ನಗರಸಭೆ ಪಡೆದು ಅಲ್ಲಿ ಪೇ ಪಾರ್ಕಿಂಗ್‌ ನಿರ್ಮಿಸುವುದು, ಅರಣ್ಯ ಇಲಾಖೆಗೆ ನಗರದ ಬೇರೆಡೆ 3 ಎಕ್ರೆ ಜಾಗ ನೀಡುವ ಬಗ್ಗೆ ಕೆಲ ವರ್ಷದ ಹಿಂದೆ ನಾವು ಪ್ರಯತ್ನ ಮಾಡಿದೆವು. ಅಂದಿನ ಡಿಸಿ ಸಹಮತ ವ್ಯಕ್ತಪಡಿಸಿ ಈ ಪ್ರಸ್ತಾವನೆಯನ್ನು ಸರಕಾರಕ್ಕೆ ಕಳುಹಿಸಿದ್ದರು. ಆದರೆ ವಿವಿಧ ಕಾರಣಗಳಿಂದಾಗಿ ಅದು ಆಗಿಲ್ಲ. ಆದರೆ ಅರಣ್ಯ ಇಲಾಖೆಯ ಕಚೇರಿ ಜಾಗದಲ್ಲಿ ಇರುವ ಎಲ್ಲ ಮರಗಳನ್ನು ಉಳಿಸಿಕೊಂಡು ಬೆಂಗಳೂರು ಮಾದರಿಯಲ್ಲಿ ಪಾರ್ಕಿಂಗ್‌ ನಿರ್ಮಿಸಬಹುದು. ಇಲಾಖೆಯ ಮನವೊಲಿಸುವ ಪ್ರಯತ್ನ ನಡೆಯಲಿ ಎಂದರು. ಪಾರ್ಕಿಂಗ್‌ಗೆ ಸಂಬಂಧಿಸಿ ಭೂ ಸ್ವಾಧೀನಕ್ಕೆ ನಗರಸಭೆಯ ಮುಂದಿನ ಬಜೆಟಿನಲ್ಲಿ ಹಣ ಮೀಸಲಿಡೋಣ ಎಂದರು. ಶಾಸಕ ಅಶೋಕ್‌ ಕುಮಾರ್‌ ರೈ ಅವರ ನೇತೃತ್ವದಲ್ಲಿ ನಗರಸಭೆಯಲ್ಲಿ ಸಭೆ ನಡೆಸಿ ತೀರ್ಮಾನ ಕೈಗೊಳ್ಳೋಣ ಎಂದು ನಿರ್ಧರಿಸಲಾಯಿತು.
ವಾಹನ ದಟ್ಟಣೆ ನಿಯಂತ್ರಣಕ್ಕೆ ಹೊಸ ರಸ್ತೆಗಳ ಬಳಕೆ ಸೂಕ್ತ

 

ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಪ್ರಮೋದ್‌ ಮಾತನಾಡಿ, ಹಾರಾಡಿಯಿಂದ ರೈಲ್ವೇ ನಿಲ್ದಾಣದ ಮೂಲಕ ಮಡಿವಾಳಕಟ್ಟೆ ಸಂಪರ್ಕ ರಸ್ತೆಯನ್ನು ಉಪ್ಪಿನಂಗಡಿ ಸಂಪರ್ಕ ರಸ್ತೆಯನ್ನಾಗಿ ಪರಿಗಣಿಸಿದರೆ ಉಪ್ಪಿನಂಗಡಿ ಭಾಗದಿಂದ ಬರುವ ಕೆಎಸ್‌ಆರ್‌ಟಿಸಿ ಬಸ್‌ಗಳು ನಗರಕ್ಕೆ ಸುಲಭವಾಗಿ ಪ್ರವೇಶ ಪಡೆಯಬಹುದು. ಇದರಿಂದ ಸಂಚಾರ ದಟ್ಟಣೆಗೂ ಪರಿಹಾರ ಸಿಗುತ್ತದೆ. ನಗರದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಬಳಿ ಲೋಕೋಪಯೋಗಿ ಇಲಾಖೆಗೆ ಸೇರಿದ 30 ಸೆಂಟ್ಸ್‌ ಜಾಗ ಇದ್ದು ಅಲ್ಲಿ ಮಲ್ಟಿ ಕಾರು ಪಾರ್ಕಿಂಗ್‌ ನಿರ್ಮಿಸುವ ಬಗ್ಗೆ ನಗರಾಡಳಿತ ಯೋಚನೆ ಮಾಡಬಹುದು ಎಂದು ಸಲಹೆ ನೀಡಿದರು. ವಿವೇಕಾನಂದ ಕಾಲೇಜು ಬಳಿಯಿಂದ ಹಾರಾಡಿ ಶಾಲಾ ಬಳಿ ಸಂಪರ್ಕ ಪಡೆಯುವ ರಸ್ತೆಯನ್ನು ವರ್ತುಲ ರಸ್ತೆಯನ್ನಾಗಿ ಅಭಿವೃದ್ಧಿ ಪಡಿಸಲು ಪ್ರಸ್ತಾವನೆ ಕಳಿಸಿದ್ದು ಇದರಿಂದ ಮಂಗಳೂರು ಭಾಗದಿಂದ ಉಪ್ಪಿನಂಗಡಿ ಭಾಗಕ್ಕೆ ತೆರಳುವ ವಾಹನಗಳು ಬೊಳುವಾರಿಗೆ ಹೋಗದೆ ನೇರವಾಗಿ ಸಂಚರಿಸಲು ಅನುಕೂಲವಾಗಲಿದೆ ಎಂದರು.
ನಗರದಲ್ಲಿ ರಿಕ್ಷಾ ನಿಲ್ದಾಣಕ್ಕೆ ಬೇಡಿಕೆ ಇರುವ ಬಗ್ಗೆ ಪೌರಯುಕ್ತರು ಪ್ರಸ್ತಾವಿಸಿದರು. ಕಾನೂನು ಬದ್ಧ ವಾಗಿದ್ದರೆ ಮಾತ್ರ ಅವಕಾಶ ನೀಡ ಬೇಕು ಎಂದು ಜೀವಂಧರ್‌ ಜೈನ್‌ ಹೇಳಿದರು. ಬೊಳುವಾರು ಹಾರಾಡಿ ನಡುವೆ ಚತುಷ್ಪಥ ರಸ್ತೆ ಕಾಮಗಾರಿ ನಡೆಯುತ್ತಿದ್ದು ಬೊಳುವಾರಿನ ರಿಕ್ಷಾ ನಿಲ್ದಾಣ ಸ್ಥಳವೂ ರಸ್ತೆ ವ್ಯಾಪ್ತಿಗೆ ಬರುತ್ತದೆ. ನಿಲ್ದಾಣಕ್ಕೆ ಹೊಸ ಜಾಗ ಗುರುತಿಸಬೇಕಿದೆ ಎಂದು ಲೋಕೋಪಯೋಗಿ ಇಲಾಖೆಯ ಪ್ರಮೋದ್‌ ಹೇಳಿದರು. ಎಂಟು ಕಡೆ ರಸ್ತೆಗಳಲ್ಲಿ ಹಂಪ್ಸ್‌ ನಿರ್ಮಾಣಕ್ಕೆ ಬೇಡಿಕೆ ಇರುವ ಬಗ್ಗೆ ಪ್ರಸ್ತಾವಿಸಲಾಯಿತು.
ನಗರಸಭೆ ಉಪಾದ್ಯಕ್ಷ ಬಾಲಚಂದ್ರ ಮಾತನಾಡಿ, ನಗರದ ರಸ್ತೆಗಳು ವಿಸ್ತರಣೆ ಆಗಿಲ್ಲ. ಕೆಲ ರಸ್ತೆಗಳ ವಿಸ್ತರಣೆಗೆ 2011 ರಲ್ಲೇ ನೋಟಿಫಿಕೇಶನ್‌ ಆಗಿದ್ದರೂ ಅದು ಕಾರ್ಯಗತ ಆಗಿಲ್ಲ. ಪಟ್ಟಣ ಬೆಳವಣಿಗೆಗೆ ಪೂರಕವಾಗಿ ನಗರದ ರಸ್ತೆ, ಪಾರ್ಕಿಂಗ್‌ ವ್ಯವಸ್ಥೆಗಳು ಇಲ್ಲ. ಎಲ್ಲವನ್ನೂ ಒಂದೆಡೆ ರಾಶಿ ಹಾಕಿದರೆ ನಗರದ ವಿಸ್ತರಣೆ ಅಸಾಧ್ಯ. ಉದಾಹರಣೆಗೆ ನಗರದಲ್ಲಿ ರಿಕ್ಷಾಗಳ ಸಂಖ್ಯೆ 5 ಸಾವಿರ ದಾಟಿದೆ. ಇವುಗಳ ನಿಲುಗಡೆಗೆ ಹೊಸ ನಿಲ್ದಾಣಗಳು ಇಲ್ಲ. ನೆಲ್ಲಿಕಟ್ಟೆ ಖಾಸಗಿ ಬಸ್‌ ನಿಲ್ದಾಣ ಸನಿಹಕ್ಕೆ ರಿಕ್ಷಾ ನಿಲ್ದಾಣಗಳ ಸ್ಥಳಾಂತರದಂತಹ ಪರ್ಯಾಯ ಕ್ರಮ ಅಗತ್ಯ ಎಂದರು.

 

 

Continue Reading
Click to comment

Leave a Reply

Your email address will not be published. Required fields are marked *

Advertisement