Published
13 hours agoon
By
Akkare Newsಇಪಿಎಫ್‌ಒ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತದ ಮಾಜಿ ಕ್ರಿಕೆಟಿಗ ರಾಬಿನ್ ಉತ್ತಪ್ಪ ವಿರುದ್ಧ ಬಂಧನ ವಾರಂಟ್ ಹೊರಡಿಸಲಾಗಿದೆ ಎಂದು ವರದಿಯಾಗಿದೆ.
ರಾಬಿನ್ ಉತ್ತಪ್ಪ ಅವರು ಸೆಂಚುರಿ ಲೈಫ್‌ಸ್ಟೈಲ್ ಬ್ರಾಂಡ್ ಪ್ರೈವೇಟ್ ಲಿಮಿಟೆಡ್ ಅನ್ನು ನಿರ್ವಹಿಸುವಾಗ ನೌಕರರ ಸಂಬಳದಿಂದ ₹23 ಲಕ್ಷ ಕಡಿತಗೊಳಿಸಿದ್ದಾರೆ. ಆದರೆ, ಅವರ ಭವಿಷ್ಯ ನಿಧಿ ಕೊಡುಗೆಗಳನ್ನು ಠೇವಣಿ ಮಾಡಲು ವಿಫಲರಾಗಿದ್ದಾರೆ ಎಂದು ಹಲವು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ಪಿಎಫ್ ಪ್ರಾದೇಶಿಕ ಆಯುಕ್ತ ಷಡಕ್ಷರಿ ಗೋಪಾಲ್ ರೆಡ್ಡಿ ಅವರು ವಾರಂಟ್ ಹೊರಡಿಸಿದ್ದು, ಅವರು ಕರ್ನಾಟಕದ ನ್ಯಾಯವ್ಯಾಪ್ತಿಯ ಪುಲಕೇಶಿನಗರ ಪೊಲೀಸರಿಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಕೇಳಿಕೊಂಡಿದ್ದಾರೆ ಎಂದು ದಿ ಹಿಂದೂ ವರದಿ ಮಾಡಿದೆ.
“ಡಿಸೆಂಬರ್ 4 ರಂದು ಕಾರ್ಯಗತಗೊಳಿಸಲಾದ ವಾರಂಟ್ ಅನ್ನು ಉತ್ತಪ್ಪ ಅವರು ಪುಲಕೇಶಿನಗರ ನಿವಾಸದಲ್ಲಿ ಇಲ್ಲದಿರುವುದು ಕಂಡುಬಂದ ನಂತರ ಹಿಂತಿರುಗಿಸಲಾಗಿದೆ” ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭಾರತದ ಮಾಜಿ ಆರಂಭಿಕ ಬ್ಯಾಟ್ಸ್‌ಮನ್ ಮತ್ತು ಅವರ ಕುಟುಂಬ ದುಬೈನಲ್ಲಿ ವಾಸಿಸುತ್ತಿದ್ದಾರೆ ಎಂದು ವರದಿಯಾಗಿದೆ.
ಬಾಕಿಯನ್ನು ಪಾವತಿಸಲು ವಿಫಲವಾದ ಕಾರಣ ಸಂತ್ರಸ್ತ ಕಾರ್ಮಿಕರ ಪಿಎಫ್ ಖಾತೆಗಳನ್ನು ಇತ್ಯರ್ಥಪಡಿಸಲು ಕಚೇರಿಗೆ ಅಡ್ಡಿಯಾಗಿದೆ ಎಂದು ವಾರಂಟ್ ಗಮನಿಸಿದೆ. ರಾಬಿನ್ ಉತ್ತಪ್ಪ ಅವರನ್ನು ಬಂಧಿಸಿ ಡಿಸೆಂಬರ್ 27ರೊಳಗೆ ವಾರೆಂಟ್ ವಾಪಸ್ ನೀಡುವಂತೆ ಪೊಲೀಸರಿಗೆ ಸೂಚಿಸಿದೆ.
ರಾಬಿನ್ ಉತ್ತಪ್ಪ ಹಿನ್ನಲೆ:
59 ಅಂತಾರಾಷ್ಟ್ರೀಯ ಕ್ರಿಕೆಡ್ ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿರುವ ರಾಬಿನ್ ಉತ್ತಪ್ಪ ಅವರು, ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಪ್ರಮುಖ ಆಟಗಾರರಾಗಿದ್ದರು. ಅವರ ಕ್ರಿಕೆಟ್ ವೃತ್ತಿಜೀವನದಲ್ಲಿ, 54 ಒಡಿಐ ಇನ್ನಿಂಗ್ಸ್‌ಗಳಲ್ಲಿ ಏಳು ಅರ್ಧ ಶತಕಗಳನ್ನು ಒಳಗೊಂಡಂತೆ 1,183 ರನ್ ಗಳಿಸಿದರು.
ರಾಬಿನ್ ಉತ್ತಪ್ಪ ಐಪಿಎಲ್‌ನಲ್ಲಿ ಪ್ರಮುಖ ಆಟಗಾರರಾಗಿದ್ದರು, ಕೋಲ್ಕತ್ತಾ ನೈಟ್ ರೈಡರ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್‌ನಂತಹ ತಂಡಗಳಿಗಾಗಿ ಆಡುತ್ತಿದ್ದರು. ಅವರು 2014 ರಲ್ಲಿ ಕೆಕೆಆರ್ ಗೆಲುವಿನ ತಂಡದ ಭಾಗವಾಗಿದ್ದರು. ಅವರ ಆಕ್ರಮಣಕಾರಿ ಬ್ಯಾಟಿಂಗ್‌ಗೆ ಹೆಸರುವಾಸಿಯಾಗಿದ್ದರು.