Published
13 hours agoon
By
Akkare Newsಮಂಗಳೂರು:ಡಿಸೆಂಬರ್ 24; ಕರಾವಳಿ ಭಾಗದ ಜನರಿಗೆ ರೈಲ್ವೆ ಇಲಾಖೆ ಶೀಘ್ರದಲ್ಲೇ ಸಿಹಿಸುದ್ದಿ ನೀಡಲಿದೆ. ಮಂಗಳೂರು-ಪುತ್ತೂರು ನಡುವಿನ ಪ್ಯಾಸೆಂಜರ್ ರೈಲನ್ನು ಸುಬ್ರಮಣ್ಯ ತನಕ ವಿಸ್ತರಣೆ ಮಾಡಬೇಕು ಎಂಬ ಬಹುಕಾಲದ ಬೇಡಿಕೆಗೆ ಈಗ ಮನ್ನಣೆ ಸಿಕ್ಕಿದೆ. ರೈಲು ವಿಸ್ತರಣೆ ಮಾಡಲು ತಾತ್ಕಾಲಿಕ ವೇಳಾಪಟ್ಟಿಯನ್ನು ಸಹ ಕಳಿಸಲಾಗಿದ್ದು, ರೈಲ್ವೆ ಇಲಾಖೆ ಅಂತಿಮ ಒಪ್ಪಿಗೆ ಸಿಗುವುದು ಬಾಕಿ ಇದೆ.
ಮೀಟರ್ ಗೇಜ್ ಕಾಲದಲ್ಲಿ ಸುಬ್ರಮಣ್ಯದಿಂದ ಮಂಗಳೂರಿಗೆ ಬೆಳಗ್ಗೆ ಮತ್ತು ಸಂಜೆ ಪ್ಯಾಸೆಂಬರ್ ರೈಲು ಸಂಚಾರವನ್ನು ನಡೆಸುತ್ತಿತ್ತು. ರೈಲು ನಂಬರ್ 06484/ 85 ಪ್ರಯಾಣಿಕರಿಗೆ ಅನುಕೂಲವಾಗಿತ್ತು. ಆದರೆ, ಹಳಿ ಪರಿವರ್ತನೆ ಬಳಿಕ ರೈಲು ಪುತ್ತೂರು ತನಕ ಮಾತ್ರ ಸಂಚಾರ ನಡೆಸುತ್ತಿದೆ.
ಕರಾವಳಿ ಭಾಗದ ರೈಲು ಸಂಪರ್ಕ: ಪ್ರಮುಖ ಬೇಡಿಕೆಗೆ ಸ್ಪಂದಿಸಿದ ರೈಲ್ವೆ ಸಚಿವರು
ಮಂಗಳೂರು-ಪುತ್ತೂರು ನಡುವಿನ ಪ್ಯಾಸೆಂಜರ್ ರೈಲನ್ನು ಸುಬ್ರಮಣ್ಯ ರೋಡ್ ನಿಲ್ದಾಣದ ತನಕ ವಿಸ್ತರಣೆ ಮಾಡಬೇಕು ಎಂದು ಪ್ರಯಾಣಿಕರು, ಪ್ರಯಾಣಿಕರ ಸಂಘಟನೆಗಳು ಜನಪ್ರತಿನಿಧಿಗಳಿಗೆ, ಸರ್ಕಾರಕ್ಕೆ, ರೈಲ್ವೆ ಸಚಿವಾಲಯಕ್ಕೆ ಮನವಿ ಸಲ್ಲಿಸುತ್ತಲೇ ಇದ್ದವು.
Vande Bharat Express: ವಂದೇ ಭಾರತ್ ರೈಲು, ಕರ್ನಾಟಕ ಕರಾವಳಿ ಜನರಿಗೆ ಸಿಹಿಸುದ್ದಿ
ಈಗ ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟಾ ಸಹ ಈ ಕುರಿತು ರೈಲ್ವೆ ಇಲಾಖೆಗೆ ಮನವಿ ಸಲ್ಲಿಸಿದ್ದರು. ರೈಲ್ವೆ ಸಚಿವರು, ರೈಲ್ವೆ ಮಂಡಳಿಯನ್ನು ಭೇಟಿ ಮಾಡಿ ಈ ಕುರಿತು ಆಗ್ರಹಿಸಿದ್ದರು. ಅಂತಿಮವಾಗಿ ಇಲಾಖೆ ಈ ಬೇಡಿಕೆ ಕುರಿತು ಗಮನಹರಿಸಿದ್ದು, ಪ್ಯಾಸೆಂಜರ್ ರೈಲು ವಿಸ್ತರಣೆಯಾಗುವ ನಿರೀಕ್ಷೆ ಇದೆ.
ಕರಾವಳಿ-ತಿರುಪತಿ ರೈಲು: ಶನಿವಾರದಿಂದ ಆರಂಭ, ವೇಳಾಪಟ್ಟಿ, ನಿಲ್ದಾಣ, ದರ
ವೇಳಾಪಟ್ಟಿ ಸಲ್ಲಿಕೆ: ಪಾಲಕ್ಕಾಡ್ ರೈಲ್ವೆ ವಿಭಾಗದ ಅಧಿಕಾರಿಗಳು ಈ ಕುರಿತು ಮಾಹಿತಿ ನೀಡಿದ್ದು ಮಂಗಳೂರು-ಪುತ್ತೂರು ನಡುವಿನ ಪ್ಯಾಸೆಂಜರ್ ರೈಲನ್ನು ಸುಬ್ರಮಣ್ಯಕ್ಕೆ ವಿಸ್ತರಣೆ ಮಾಡುವ ಕುರಿತು ಪ್ರಸ್ತಾವನೆ, ವೇಳಾಪಟ್ಟಿಯನ್ನು ನೈಋತ್ಯ ರೈಲ್ವೆಗೆ ಸಲ್ಲಿಕೆ ಮಾಡಲಾಗಿದೆ. ಅಲ್ಲಿಂದ ರೈಲ್ವೆ ಮಂಡಳಿಗೆ ಕಳಿಸಲಾಗಿದೆ ಎಂದು ಹೇಳಿದ್ದಾರೆ.
ತಾತ್ಕಾಲಿಕ ವೇಳಾಪಟ್ಟಿಯ ಪ್ರಕಾರ ಮಂಗಳೂರು ಸೆಂಟ್ರಲ್‌ನಿಂದ ರೈಲು ಬೆಳಗ್ಗೆ 4ಕ್ಕೆ ಹೊರಟು ಸುಬ್ರಮಣ್ಯ ರೋಡ್‌ಗೆ 6.30ಕ್ಕೆ ತಲುಪಲಿದೆ. ಸುಬ್ರಮಣ್ಯದಿಂದ ಬೆಳಗ್ಗೆ 7ಕ್ಕೆ ಹೊರಟು, 9.30ಕ್ಕೆ ಮಂಗಳೂರು ಸೆಂಟ್ರಲ್ ತಲುಪಲಿದೆ. ಮಂಗಳೂರು ಸೆಂಟ್ರಲ್‌ನಿಂದ ಸಂಜೆ 6ಕ್ಕೆ ಹೊರಟು, 8.15ಕ್ಕೆ ಸುಬ್ರಮಣ್ಯ ತಲುಪಲಿದೆ. ಸುಬ್ರಮಣ್ಯದಿಂದ ರಾತ್ರಿ 8.40ಕ್ಕೆ ಹೊರಟು, ಮಂಗಳೂರಿಗೆ ರಾತ್ರಿ 11.15ಕ್ಕೆ ತಲುಪಲಿದೆ.
ಈ ಪ್ಯಾಸೆಂಜರ್ ರೈಲು ವಿಸ್ತರಣೆಯಿಂದ ಸುಬ್ರಮಣ್ಯ ಕಡೆಗೆ ಸಂಚಾರ ನಡೆಸುವ ಗ್ರಾಮೀಣ ಜನರು, ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ನವೆಂಬರ್ 18ರಂದೇ ನೈಋತ್ಯ ರೈಲ್ವೆ ಮೂಲಕ ಈ ಕುರಿತ ಪ್ರಸ್ತಾವನೆ ರೈಲ್ವೆ ಮಂಡಳಿಗೆ ಸಲ್ಲಿಕೆಯಾಗಿದೆ. ಆದ್ದರಿಂದ ಮಂಡಳಿಯ ಅಂತಿಮ ಒಪ್ಪಿಗೆ ಬಾಕಿ ಇದೆ.
ಪಶ್ಚಿಮ ಕರಾವಳಿ ರೈಲ್ವೆ ಯಾತ್ರಿ ಅಭಿವೃದ್ಧಿ ಸಮಿತಿ ಸಹ ಈ ಕುರಿತು ಹಲವು ಮನವಿಗಳನ್ನು ಸಲ್ಲಿಕೆ ಮಾಡಿದೆ. ಪ್ಯಾಸೆಂಜರ್ ರೈಲು ಸಂಚಾರವನ್ನು ವಿಸ್ತರಣೆ ಮಾಡಬೇಕು ಎಂದು ಬೇಡಿಕೆ ಇಟ್ಟಿದೆ. ರೈಲು ಸೇವೆ ವಿಸ್ತರಣೆಗೊಂಡರೆ ಸುಳ್ಯ ಭಾಗದ ಜನರಿಗೆ ಹೆಚ್ಚು ಅನುಕೂಲವಾಗಲಿದೆ ಎಂದು ಅಂದಾಜಿಸಲಾಗಿದೆ.
ಕೆಲವು ದಿನಗಳ ಹಿಂದೆ ಪಾಲಕ್ಕಾಡ್‌ನಲ್ಲಿ ನಡೆದ ಮಂಗಳೂರು ರೈಲ್ವೆ ಬಳಕೆದಾರರ ಸಲಹಾ ಸಮಿತಿಯ ಸಭೆಯಲ್ಲಿಯೂ ಮಂಗಳೂರು-ಪುತ್ತೂರು ಪ್ಯಾಸೆಂಜರ್ ರೈಲು ಸುಬ್ರಮಣ್ಯ ತನಕ ವಿಸ್ತರಣೆ ಮಾಡುವ ಬೇಡಿಕೆ ಕುರಿತು ಚರ್ಚೆಗಳು ನಡೆದಿತ್ತು. ಅಧಿಕಾರಿಗಳು ಈ ಕುರಿತು ಮಂಡಳಿ ಗಮನ ಸೆಳೆಯುವ ಭರವಸೆಯನ್ನು ನೀಡಿದ್ದರು.