Published
14 hours agoon
By
Akkare Newsಪುತ್ತೂರಿಗೆ ಬಾರದೆ ಸುಬ್ರಹ್ಮಣ್ಯಕ್ಕೆ ಹೋಗಲು, ಪುತ್ತೂರು ನಗರದ ಸಂಚಾರ ದಟ್ಟಣೆ ಕಡಿಮೆ ಮಾಡಲು ಅಲ್ಲದೆ ಮಂಗಳೂರು ಕಡೆಯಿಂದ ರಾಷ್ಟ್ರೀಯ ಹೆದ್ದಾರಿ 275ರಲ್ಲಿ ಪುತ್ತೂರಿಗೆ ಬರುವಾಗ ಸಂಚಾರ ದಟ್ಟಣೆ ಆಗದಂತೆ ತಡೆಯಲು ಚತುಷ್ಪಥ ರಿಂಗ್ ರಸ್ತೆ ನಿರ್ಮಾಣ ಮಾಡಲು ಪ್ಲಾನ್ ರೂಪಿಸಲಾಗಿದೆ. ಪ್ರಸ್ತುತ ನೆಹರೂನಗರ- ಹಾರಾಡಿ- ಪಡೀಲ್- ಕೇಪುಳು- ಜಿಡೆಕಲ್ಲು- ಬೆದ್ರಾಳ- ಪುರುಷರಕಟ್ಟೆ- ಪಂಜಳ- ಪರ್ಪುಂಜ ರಸ್ತೆಯು ಅನೇಕ ರಸ್ತೆಗಳ ಕೊಂಡಿಯಂತಿದ್ದು, ಗ್ರಾಮೀಣ ರಸ್ತೆಯಾಗಿದೆ, ಇದನ್ನೇ ಅಭಿವೃದ್ಧಿ ಮಾಡಲಾಗುತ್ತದೆ.
ಪುತ್ತೂರು: ಮಂಗಳೂರು ಬಿಟ್ಟರೆ ಜಿಲ್ಲೆಯ 2ನೇ ಅತಿದೊಡ್ಡ ನಗರವಾಗಿ ಬೆಳೆಯುತ್ತಿರುವ ಪುತ್ತೂರಿನ ಮೇಲೆ ಬೀಳುತ್ತಿರುವ ಒತ್ತಡ ತಗ್ಗಿಸುವ ಉದ್ದೇಶದಿಂದ ಇಡೀ ನಗರವನ್ನು ಹೊರಾವರಣದಿಂದಲೇ ಬಳಸಿಕೊಂಡು ಹೋಗುವ ಚತುಷ್ಪಥ ರಿಂಗ್ ರೋಡ್ ನಿರ್ಮಿಸಲು ಯೋಜನೆ ಸಿದ್ಧವಾಗುತ್ತಿದೆ.
ಒಟ್ಟು 3 ಹಂತದಲ್ಲಿ ಕಾಮಗಾರಿ ಅನುಷ್ಠಾನಗೊಳಿಸುವ ಉದ್ದೇಶ ಇಟ್ಟುಕೊಂಡು ಯೋಜನೆ ರೂಪಿಸಲಾಗಿದ್ದು, ಪ್ರತೀ ಹಂತಕ್ಕೂ ಪ್ರತ್ಯೇಕ ಯೋಜನಾ ವೆಚ್ಚ ಕಂಡುಕೊಳ್ಳಲಾಗಿದೆ. ಲೋಕೋಪಯೋಗಿ ಇಲಾಖೆ ಈ ಪ್ರಸ್ತಾವನೆ ಸಿದ್ಧಪಡಿಸಿ ಸರಕಾರಕ್ಕೆ ಸಲ್ಲಿಸಿದ್ದು, ಮಂಜೂರಾದ ಬಳಿಕ ಹಂತ ಹಂತವಾಗಿ ವರ್ತುಲ ರಸ್ತೆ ಅನುಷ್ಠಾನಕ್ಕೆ ಬರಲಿದೆ.
ಮಂಗಳೂರು ಕಡೆಯಿಂದ ರಾಷ್ಟ್ರೀಯ ಹೆದ್ದಾರಿ 275ರಲ್ಲಿ ಪುತ್ತೂರಿಗೆ ಬರುವಾಗ ಕಬಕ ಸಮೀಪದ ನೆಹರೂನಗರದಲ್ಲಿ ಎಡಕ್ಕೆ ಕವಲೊಡೆದ ರಸ್ತೆಯು ವಿವೇಕಾನಂದ ಕಾಲೇಜು ಪಕ್ಕದಲ್ಲಿ ಸಾಗಿ ಹಾರಾಡಿಯಲ್ಲಿ ಉಪ್ಪಿನಂಗಡಿ ರಾಜ್ಯ ಹೆದ್ದಾರಿಯನ್ನು ಸೇರುತ್ತದೆ. ಅಲ್ಲಿಂದ 500 ಮೀ. ದೂರದಲ್ಲಿ ರಾಜ್ಯ ಹೆದ್ದಾರಿಯಿಂದ ಬಲಕ್ಕೆ ಕವಲೊಡೆದ ಕೇಪುಳು ರಸ್ತೆಯು ಜಿಡೆಕಲ್ಲು ಮೂಲಕ ಬೆದ್ರಾಳದಲ್ಲಿ ಪುತ್ತೂರು- ಸವಣೂರು ರಸ್ತೆಯನ್ನು ಸೇರುತ್ತದೆ. ಈ ರಸ್ತೆಯಲ್ಲಿ ಮುಂದಕ್ಕೆ ಸಾಗಿದರೆ ಪುರುಷರಕಟ್ಟೆಯಲ್ಲಿ ಬಲಕ್ಕೆ ಕವಲೊಡೆದ ರಸ್ತೆಯು ಪಂಜಳ- ಕುರಿಯ ಮೂಲಕ ಪರ್ಪುಂಜದಲ್ಲಿ ಮತ್ತೆ ರಾಷ್ಟ್ರೀಯ ಹೆದ್ದಾರಿ 275 ನ್ನು ಸೇರುತ್ತದೆ.
ಪ್ರಸ್ತುತ ನೆಹರೂನಗರ- ಹಾರಾಡಿ- ಪಡೀಲ್- ಕೇಪುಳು- ಜಿಡೆಕಲ್ಲು- ಬೆದ್ರಾಳ- ಪುರುಷರಕಟ್ಟೆ- ಪಂಜಳ- ಪರ್ಪುಂಜ ರಸ್ತೆಯು ಅನೇಕ ರಸ್ತೆಗಳ ಕೊಂಡಿಯಂತಿದ್ದು, ಗ್ರಾಮೀಣ ರಸ್ತೆಯಾಗಿದೆ. ಇದೇ ರಸ್ತೆಯನ್ನು ಪೂರ್ಣಪ್ರಮಾಣದಲ್ಲಿ ಚತುಷ್ಪಥವಾಗಿ ಪರಿವರ್ತಿಸಿದರೆ ಪುತ್ತೂರು ನಗರಕ್ಕೆ ಸುಂದರವಾದ ವರ್ತುಲ ರಸ್ತೆ ನಿರ್ಮಾಣವಾಗಲಿದೆ. ಇದೇ ಯೋಜನೆಯನ್ನು ಪ್ರಸ್ತುತ ಲೋಕೋಪಯೋಗಿ ಇಲಾಖೆ ಸಿದ್ಧಪಡಿಸಿದೆ.
ನೆಹರೂನಗರದಿಂದ ಹಾರಾಡಿ ಪಡೀಲ್ ತನಕ ಮೊದಲ ಹಂತದ ಕಾಮಗಾರಿ, ಕೇಪುಳು- ಜಿಡೆಕಲ್ಲು,- ಬೆದ್ರಾಳವರೆಗೆ 2ನೇ ಹಂತದಲ್ಲಿ, ಪುರುಷರಕಟ್ಟೆ- ಪರ್ಪುಂಜ ಅಭಿವೃದ್ಧಿ 3ನೇ ಹಂತದಲ್ಲಿನಡೆಸುವ ಉದ್ದೇಶ ಇಟ್ಟುಕೊಳ್ಳಲಾಗಿದೆ. ಮೊದಲ ಹಂತದ 2.77 ಕಿ.ಮೀ. ಚತುಷ್ಪಥ ಮಾರ್ಗಕ್ಕೆ 23.02 ಕೋಟಿ ರೂ., 2ನೇ ಹಂತದ 3.65 ಕಿ.ಮೀ. ಚತುಷ್ಪಥ ರಸ್ತೆಗೆ 29.04 ಕೋಟಿ ರೂ. ವೆಚ್ಚದ ಪ್ರಸ್ತಾವನೆ ಸಲ್ಲಿಸಲಾಗಿದೆ. ಮೂರನೇ ಹಂತದ ಯೋಜನಾ ವೆಚ್ಚ ತಯಾರಿಸಲಾಗುತ್ತಿದೆ.
ಈ ವರ್ತುಲ ರಸ್ತೆ ರಚನೆಯಾದರೆ ಮಂಗಳೂರು ಕಡೆಯಿಂದ ಬಂದು ಸವಣೂರು- ನಿಂತಿಕಲ್- ಪಂಜ ಮೂಲಕ ಸುಬ್ರಹ್ಮಣ್ಯ ಕಡೆ ಹೋಗುವವರು ಪುತ್ತೂರು ನಗರ ಪ್ರವೇಶಿಸದೆ ಹೊಗಬಹುದು. ಅದೇ ರೀತಿ ಪುತ್ತೂರು ನಗರ ಮತ್ತು ಈಗಿನ ಬೈಪಾಸ್ ಹೆದ್ದಾರಿಯಲ್ಲಿ ದಟ್ಟಣೆ, ಇನ್ನಿತರ ಸಮಸ್ಯೆ ಉಂಟಾದಲ್ಲಿ ಮಂಗಳೂರು ಕಡೆಯಿಂದ ಬರುವ ವಾಹನಗಳು ವರ್ತುಲ ರಸ್ತೆ ಮೂಲಕ ಪರ್ಪುಂಜಕ್ಕೆ ತೆರಳಿ ಮತ್ತೆ ಹೆದ್ದಾರಿಯಲ್ಲೇ ಸುಳ್ಯ, ಮಡಿಕೇರಿಯತ್ತ ತೆರಳಬಹುದಾಗಿದೆ. ಅದೇ ರೀತಿ ವಿಟ್ಲಕಡೆಯಿಂದ ಬಂದವರು ಉಪ್ಪಿನಂಗಡಿಗೆ ತೆರಳಲು ಪುತ್ತೂರಿನ ಬೊಳುವಾರು ತನಕ ಬಾರದೆ ನೆಹರೂನಗರದಿಂದಲೇ ಆರಾಮವಾಗಿ ಹಾರಾಡಿ ಮೂಲಕ ತೆರಳಬಹುದು. ಪ್ರಸ್ತುತ ನೆಹರೂ ನಗರ- ಹಾರಾಡಿ ರಸ್ತೆಯನ್ನು ಜನ ಬಳಸುತ್ತಿದ್ದರೂ ಅಗಲ ಕಿರಿದಾದ ಕಾರಣ ಸುಲಲಿತವಾಗಿಲ್ಲ. ಅದೇ ರೀತಿ ಪಡೀಲ್- ಕೇಪುಳು- ಜಿಡೆಕಲ್ಲು- ಬೆದ್ರಾಳ ರಸ್ತೆಯೂ ಅತ್ಯಂತ ಕಿರಿದಾಗಿದೆ. ಪುರುಷರಕಟ್ಟೆ- ಪಂಜಳ- ಪರ್ಪುಂಜ ರಸ್ತೆ ಚೆನ್ನಾಗಿದ್ದರೂ ಅಗಲ ಕಿರಿದಾಗಿದೆ.
ಪ್ರಸ್ತುತ ಮಾಣಿ- ಮೈಸೂರು ಹೆದ್ದಾರಿಯಲ್ಲಿ ಪುತ್ತೂರಿನ ಮಂಜಲ್ಪಡ್ಪುವಿನಿಂದ ದರ್ಬೆ ಪತ್ರಾವೋ ಸರ್ಕಲ್‌ವರೆಗೆ ಬೈಪಾಸ್ ರಸ್ತೆಯಿದೆ. 20 ವರ್ಷಗಳ ಹಿಂದೆ ನಿರ್ಮಾಣವಾದ ಈ ಬೈಪಾಸ್‌ನಿಂದಾಗಿ ಪುತ್ತೂರು ನಗರದ ಒತ್ತಡ ಬಹುಪಾಲು ತಗ್ಗಿದೆ. ಇದಕ್ಕೂ ಮೊದಲು ಮಂಗಳೂರಿನಿಂದ ಬರುವ ವಾನಗಳು ಪುತ್ತೂರು ನಗರದ ಮೂಲಕವೇ ಮಡಿಕೇರಿಯತ್ತ ಸಾಗುತ್ತಿದ್ದವು. ಪ್ರಸ್ತುತ ವರ್ತುಲ ರಸ್ತೆ ನಿರ್ಮಾಣವಾದರೆ ಹಾಲಿ ಬೈಪಾಸ್‌ಗೆ ಉತ್ತಮ ಪರ್ಯಾಯವಾಗಲಿದೆ.
ವರ್ತುಲ ರಸ್ತೆ ನಿರ್ಮಾಣದ ಪ್ರಸ್ತಾವನೆ ಸರಕಾರಕ್ಕೆ ಸಲ್ಲಿಸಲಾಗಿದೆ. ಇದು ಹಂತ ಹಂತವಾಗಿ ನಡೆಯಬಹುದಾದ ಯೋಜನೆಯಾಗಿದೆ. ಮೊದಲ ಹಂತದ ಕಾಮಗಾರಿ ಪ್ರಥಮ ಹಂತದಲ್ಲಿಮಂಜೂರಾತಿ ಸಿಗುವ ನಿರೀಕ್ಷೆಯಿದೆ ಎಂದು ಪ್ರಮೋದ್ ಕುಮಾರ್, ಸಹಾಯಕ ಎಂಜಿನಿಯರ್, ಲೋಕೋಪಯೋಗಿ ಇಲಾಖೆ ಹೇಳಿದ್ದಾರೆ.