Published
3 days agoon
By
Akkare Newsಪುತ್ತೂರು :ಅಂಗನವಾಡಿ ಕೇಂದ್ರದೊಳಗೆ ಹಾವುಗಳು ಬರುತ್ತಿರುವುದರಿಂದ ಕುಳಿತುಕೊಳ್ಳಲು ಹೆದರಿಕೆಯಾಗುತ್ತಿದೆ. ಬೀದಿ ನಾಯಿಗಳು ಶಾಲಾ ಆವರಣದೊಳಗೆ ಬರುವುದರಿಂದ ನಮಗೆ ಭಯವಾಗುತ್ತಿದೆ. ಶಾಲಾ ಕ್ರೀಡಾಂಗಣಕ್ಕೆ ಆಟವಾಡಲು ಬರುವ ಹೊರಗಿನವರು ಶಾಲಾ ಪೈಪ್‌ಲೈನ್, ಕಿಟಿಕಿ ಗಾಜಿಗೆ ಹಾನಿ ಮಾಡುತ್ತಿದ್ದಾರೆ…
ಪುತ್ತೂರು ತಾಲ್ಲೂಕಿನ ಕುಂಬ್ರದ ಕೆಪಿಎಸ್ ಸಭಾಂಗಣದಲ್ಲಿ ನಡೆದ ಒಳಮೊಗ್ರು ಗ್ರಾಮ ಪಂಚಾಯಿತಿಯ ಮಕ್ಕಳ ಹಕ್ಕುಗಳ ವಿಶೇಷ ಗ್ರಾಮಸಭೆಯಲ್ಲಿ ವಿದ್ಯಾರ್ಥಿಗಳು ತೋಡಿಕೊಂಡ ಅಳಲಿದು.
ಪ್ರತಿ ಶಾಲೆಗೆ ನ್ಯಾಪ್ಕಿನ್ ಬರ್ನರ್ ಬೇಕು, ಹೆಚ್ಚುವರಿ ಶೌಚಾಲಯ ವ್ಯವಸ್ಥೆಯಾಗಬೇಕು. ಶಾಲಾ ಬಳಿ ಇರುವ ಅಪಾಯಕಾರಿ ಮರವನ್ನು ತೆರವುಗೊಳಿಸಬೇಕು ಎಂದೂ ಬೇಡಿಕೆ ಸಲ್ಲಿಸಿದರು.
ಒಳಮೊಗ್ರು ಗ್ರಾ.ಪಂ.ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು ಅಧ್ಯಕ್ಷತೆ ವಹಿಸಿದ್ದರು. ಪುತ್ತೂರು ಶಿಕ್ಷಣ ಸಂಪನ್ಮೂಲ ಕೇಂದ್ರದ ಅಧ್ಯಕ್ಷ ರಫೀಕ್ ದರ್ಬೆ ಅವರು ಮಾರ್ಗದರ್ಶಕ ಅಧಿಕಾರಿಯಾಗಿದ್ದರು. ಗ್ರಾ.ಪಂ.ವ್ಯಾಪ್ತಿಯ 6 ಶಾಲೆಗಳ ಆಯ್ದ ವಿದ್ಯಾರ್ಥಿಗಳು ಸಭೆಯಲ್ಲಿ ಸಮಸ್ಯೆ ಮತ್ತು ಬೇಡಿಕೆಳ ಬಗ್ಗೆ ತಿಳಿಸಿ ಜನಪ್ರತಿನಿಧಿ, ಅಧಿಕಾರಿಗಳ ಗಮನ ಸೆಳೆದರು.
ಬೀದಿ ನಾಯಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಶಾಲಾ ಆವರಣದೊಳಗೆ ನಾಯಿಗಳು ಓಡಾಡುತ್ತಿರುವುದರಿಂದ ಭಯವಾಗುತ್ತಿದೆ ಎಂದು ಕುಂಬ್ರ ಕೆಪಿಎಸ್, ದರ್ಬೆತ್ತಡ್ಕ ಮತ್ತು ಕುಟ್ಟಿನೋಪಿನಡ್ಕ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳು ಹೇಳಿದರು.
ಕುಂಬ್ರ ಕೆಪಿಎಸ್‌ನಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗಿದೆ. ಶಾಲಾ ಮೈದಾನಕ್ಕೆ ಹೊರಗಿನವರು ಆಟವಾಡಲು ಬಂದು ಶಾಲೆಯ ಕಿಟಿಕಿ ಗಾಜು, ನೀರಿನ ಪೈಪ್‌ಗೆ ಹಾನಿ ಮಾಡುತ್ತಿದ್ದಾರೆ ಎಂದು ಪರ್ಪುಂಜ ಮತ್ತು ಕುಟ್ಟಿನೋಪಿನಡ್ಕ ಶಾಲೆಯ ವಿದ್ಯಾರ್ಥಿಗಳು ದೂರಿದರು. ಬೀಟ್ ಪೊಲೀಸರು ಶಾಲೆಗೆ ಆಗಾಗ ಬರುತ್ತಿರಬೇಕು ಎಂದು ವಿದ್ಯಾರ್ಥಿಗಳು ಮನವಿ ಮಾಡಿದರು.
ಕುಂಬ್ರ ಅಂಗನವಾಡಿ ಕಟ್ಟಡದೊಳಗೆ ಆಗಾಗ ಹಾವು ಬರುತ್ತಿರುವುದರಿಂದ ಹೆದರಿಕೆಯಾಗುತ್ತಿದ್ದು, ಹೊಸ ಕಟ್ಟಡ ನಿರ್ಮಿಸಬೇಕು ಎಂದು ಅಲ್ಲಿನ ಪುಟಾಣಿ ಬೇಡಿಕೆ ಮುಂದಿಟ್ಟರು. ಶತಮಾನೋತ್ಸವ ಸಂಭ್ರಮದಲ್ಲಿರುವ ಕೈಕಾರ ಶಾಲಾ ಆವರಣದಲ್ಲಿ ಹೈಮಾಸ್ಟ್ ಲೈಟ್ ಅಳವಡಿಸಬೇಕು. ಶಾಲೆ ಬಳಿ ಅಪಾಯಕಾರಿ ಸ್ಥಿತಿಯ ಮರ ತೆರವುಗೊಳಿಸಬೇಕು ಎಂದು ವಿದ್ಯಾರ್ಥಿಗಳು ಬೇಡಿಕೆ ಮುಂದಿಟ್ಟರು.
ಕುಂಬ್ರ ಕೆಪಿಎಸ್ ಪ್ರೌಢ ಶಾಲೆ ವಿಭಾಗದ ಬಾಲಕಿಯರಿಗೆ ಹೆಚ್ಚುವರಿ ಶೌಚಾಲಯ ವ್ಯವಸ್ಥೆಯಾಗಬೇಕೆಂದು ತಿಳಿಸಿದರು. ಶೌಚಾಲಯದ ಕೊರತೆ ಬಗ್ಗೆ ಅಜ್ಜಿಕಲ್ಲು ಶಾಲಾ ವಿದ್ಯಾರ್ಥಿಗಳೂ ಮನವಿ ಮಾಡಿದರು.
ಕುಂಬ್ರ ಕೆಪಿಎಸ್‌ಗೆ ಕುಡಿಯುವ ನೀರಿಗೆ ಸಂಬಂಧಿಸಿ ಕೂಡಲೇ ಕ್ರಮ ಕೈಗೊಳ್ಳಲಾಗುವುದು. ಬೇಡಿಕೆಗಳನ್ನು ಈಡೇರಿಸಲು ಪಂಚಾಯಿತಿಯಿಂದ ಸಹಕಾರ ನೀಡಲಾಗುವುದು ಎಂದು ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು ತಿಳಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ಆರತಿ, ಮೆಸ್ಕಾಂನ ರವೀಂದ್ರ, ಸಮುದಾಯ ಆರೋಗ್ಯ ಅಧಿಕಾರಿ ವಿದ್ಯಾಶ್ರೀ, ಬೀಟ್ ಪೊಲೀಸ್ ಶರಣಪ್ಪ ಎಚ್.ಪಾಟೀಲ್ ಮಾಹಿತಿ ನೀಡಿದರು.