Published
2 days agoon
By
Akkare Newsಪುತ್ತೂರು: ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಬೆಂಗಳೂರು ಇದರ ಪುತ್ತೂರು ತಾಲೂಕ ಶಾಖೆಯ ನೇತೃತ್ವದಲ್ಲಿ ನೂತನವಾಗಿ ಪ್ರಾರಂಭಿಸಲಾದ ಪುತ್ತೂರು ತಾಲೂಕು ಸರಕಾರಿ ನೌಕರರ ಸಹಕಾರಿ ಸಂಘದ ಉದ್ಘಾಟನೆ ಹಾಗೂ ಸರಕಾರಿ ನೌಕರರ ಸಂಘದ 2024-25 ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಮಿನಿ ವಿಧಾನ ಸೌಧದ ಬಳಿಯ ಸರಕಾರಿ ನೌಕರರ ಕಟ್ಟಡದಲ್ಲಿ ನಡೆಯಿತು.
ಸಹಕಾರಿ ಸಂಘದ ಕಛೇರಿಯನ್ನು ಉದ್ಘಾಟಿಸಿದ ಸವಣೂರು ವಿದ್ಯಾರಶ್ಮೀ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ, ಸಹಕಾರಿ ರತ್ನ ಸವಣೂರು ಸೀತಾರಾಮ ರೈ ಮಾತನಾಡಿ, ದ.ಕ ಜಿಲ್ಲೆಯಲ್ಲಿ ಸಹಕಾರಿ ಕ್ಷೇತ್ರವು ಬಹಳಷ್ಟು ಪ್ರಾಮುಖ್ಯವಾಗಿದೆ. ಜಿಲ್ಲೆಯ ಆರ್ಥಿಕ ಅಭಿವೃದ್ಧಿಯಲ್ಲಿ ಸಹಕಾರಿ ಕ್ಷೇತ್ರ ಪಾತ್ರ ಪ್ರಮುಖವಾಗಿದೆ.
ಡಿಸಿಸಿ ಬ್ಯಾಂಕ್, ಕ್ಯಾಂಪ್ಕೋ, ಕೆಎಂಎಫ್ ಮೂರು ಸಂಸ್ಥೆಗಳು ರೈತರ ಒಡನಾಡಿಯಾಗಿ ಕೆಲಸ ಮಾಡುತ್ತಿದೆ. ಅದರ ಬೆಂಬಲದಿಂದ ಕೊರೋನಾದಂತೆ ಕಷ್ಟದ ಕಾಲದಲ್ಲಿ ದ.ಕ ಜಿಲ್ಲೆಯಲ್ಲಿ ಒಂದೇ ಒಂದು ಆತ್ಮಹತ್ಯೆಯಾಗಿಲ್ಲ. ಇಂದು ಸಹಕಾರಿ ಕ್ಷೇತ್ರವು ದೇಶದಾದ್ಯಂತ ವಿಶಾಲವಾಗಿದೆ. ಪ್ರಜಾಪ್ರಭುತ್ವ ಮಾದರಿಯಲ್ಲಿ ಸಹಕಾರಿ ಕ್ಷೇತ್ರವು ರಾಜಕೀಯ ರಹಿತವಾಗಿ ಕೆಲಸ ಮಾಡುತ್ತಿದೆ. ಸಹಕಾರಿ ಸಂಘಗಳು ಶೀಘ್ರದಲ್ಲಿ ಜನರ ಆರ್ಥಿಕ ಸಮಸ್ಯೆಗಳಿಗೆ ಸ್ಪಂಧನೆ ನೀಡುತ್ತಿದ್ದು ಜನರು ಸಹಕಾರಿ ಕ್ಷೇತ್ರವನ್ನೇ ಮೆಚ್ಚಿಕೊಂಡಿದ್ದಾರೆ. ದೇಶದಲ್ಲಿ ಕರ್ನಾಟಕ ರಾಜ್ಯ, ರಾಜ್ಯದಲ್ಲಿ ದ.ಕ ಜಿಲ್ಲೆ ಸಹಕಾರಿ ಕ್ಷೇತ್ರದ ಸಾಧನೆಯಲ್ಲಿ ಪ್ರಥಮ ಸ್ಥಾನದಲ್ಲಿದೆ. ಸಹಕಾರಿ ಕ್ಷೇತ್ರವನ್ನು ದೇಶವ್ಯಾಪಿಯಾಗಿ ಮಾಡಲು ಕೇಂದ್ರದಲ್ಲಿ ಪತ್ಯೇಕ ಸಹಕಾರಿ ಇಲಾಖೆಯನ್ನೇ ಸ್ಥಾಪಿಸಲಾಗಿದ್ದು ಸಾಕಷ್ಟು ಬದಲಾವಣೆ ಕಂಡಿದೆ ಎಂದು ಹೇಳಿದ ಅವರು ಹಲವು ಜಾತಿ, ಕಸುಬುಗಳಿಗೆ ಸಂಬಂಧಿಸಿ ಸಹಕಾರಿ ಸಂಘಗಳಿರುವಂತೆ ಸರಕಾರಿ ನೌಕರರೂ ನಿಮ್ಮ ಆವಶ್ಯಕತೆಗಳ ಪೂರೈಸಿಕೊಳ್ಳಲು ಸಹಕಾರಿಯಗುವಂತೆ ಬೈಲಾದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ದೀಪ ಬೆಳಗಿಸಿ ಉದ್ಘಾಟಿಸಿದ ಪುತ್ತೂರು ವಿಭಾಗದ ಸಹಾಯಕ ಅರಣ್ಯ ಸಂರಕ್ಷರಣಾಧಿಕಾರಿ ಸುಬ್ಬಯ್ಯ ಮಾತನಾಡಿ, ಸಣ್ಣ ಕಟ್ಟಡದಲ್ಲಿದ್ದ ಸರಕಾರಿ ನೌಕರರ ಸಂಘವು ಈಗ ಸುಸಜ್ಜಿತ ಕಟ್ಟಡವನ್ನು ಹೊಂದಿದೆ. ಎಲ್ಲರ ಸಹಕಾರದಲ್ಲಿ ಸಂಘ ಅಭಿವೃದ್ಧಿ ಹೊಂದುತ್ತಾ ಇತರ ಸಂಘಗಳಂತೆ ಸರಕಾರಿ ನೌಕರರಿಗೂ ಸಹಕಾರ ಸಂಘವನ್ನು ಸ್ಥಾಪಿಸಲಾಗಿದೆ ಎಂದರು.
ಕಂಪ್ಯೂಟರ್ ಉದ್ಘಾಟಿಸಿದ ಸಂಪ್ಯ ಅಕ್ಷಯ ಕಾಲೇಜಿನ ಅಧ್ಯಕ್ಷ ಜಯಂತ ನಡುಬೈಲು ಮಾತನಾಡಿ, ಸಹಕಾರಿ ಸಂಘಗಳು ಜನ ಸಾಮಾನ್ಯರಿಗೆ ಕೈಗೆಟಕುವ ಸಂಘವಾಗಿದೆ. ಕಷ್ಟ ಕಾಲದಲ್ಲಿ ಜನರಿಗೆ ನೆರವಿಗೆ ಬರುತ್ತಿದೆ. ಜನರ ಆರ್ಥಿಕ ಪರಿಸ್ಥಿತಿ ಸುದಾರಣೆ ಜೊತೆಗೆ ಜೊತೆಗೆ ಹಲವು ಮಂದಿಗೆ ಉದ್ಯೋಗವನ್ನು ಪಡೆಯುವಲ್ಲಿಯೂ ಸಹಕಾರಿ ಸಂಘಗಳು ಸಹಕಾರಿಯಾಗಿದೆ. ಸರಕಾರಿ ನೌಕರರ ಒಗ್ಗಟ್ಟಿನಿಂದಾಗಿ 541 ಸದಸ್ಯರಿಂದ ಪಾಲು ಬಂಡವಾಳ ಸಂಗ್ರಹವಾಗಿದೆ. ಠೇವಣಿ ಸಂಗ್ರಹದ ಜೊತೆ ಸಾಲ ವಿತರಣೆ, ಮರುಪಾವತಿಯಾಗಬೇಕು. ನಗುಮೊಗದ ಸೇವೆಯೊಂದಿಗೆ ಜನರಿಗೆ ಸ್ಪಂಧನೆ ನೀಡಬೇಕು. ಸಂಘವು ಬೆಳೆದು ಹಲವು ಶಾಖೆಗಳನ್ನು ತೆರೆಯುವಂತಾಗಲಿ ಎಂದು ಹಾರೈಸಿದರು.
ಲಾಂಛನ ಬಿಡುಗಡೆ ಮಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್ ಮಾತನಾಡಿ, ಕರಾವಳಿಯಲ್ಲಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ವಿಫುಲ ಅವಕಾಶವಿದೆ. ಬ್ಯಾಂಕಿಂಗ್ ಕ್ಷೇತ್ರದ ಬಹಳಷ್ಟು ಬದಲಾವಣೆಯಾಗಿದ್ದು ಈಗ ಸ್ಪರ್ಧೆಯಿದೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿಯೂ ಕಠಿಣ ಪರಿಶ್ರಮ, ಪ್ರಾಮಾಣಿಕ ಸೇವೆಯ ಅಗತ್ಯವಿದೆ. ಪುತ್ತೂರು ಸರಕಾರಿ ನೌಕರರ ಸಂಘವು ಶಿಸ್ತು ಬದ್ದವಾಗಿ ನಡೆಯುತ್ತಿರುವುದರ ಫಲವಾಗಿ ಸಂಘವು ಯಶಸ್ವಿಯಾಗಿ ಮುನ್ನಡೆದು ಸಹಕಾರ ಸಂಘ ಸ್ಥಾಪನೆಯಾಗಿದೆ ಎಂದರು.
ಠೇವಣಿ ಪತ್ರ ಬಿಡುಗಡೆ ಮಾಡಿ, ವಿತರಿಸಿದ ಕುಂಬ್ರ ಮೂರ್ತೆದಾರರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಆರ್.ಸಿ ನಾರಾಯಣ ಮಾತನಾಡಿ, ಪ್ರಾಥಮಿಕ ಶಿಕ್ಷಣ ನೀಡುವ ಶಿಕ್ಷಣ ನೀಡುವ ಇಲಾಖೆಯಿಂದ ಪಿಂಚಣಿ ನೀಡುವ ತನಕದ ಎಲ್ಲಾ ಇಲಾಖೆಗಳು ಸಹಕಾರಿ ಸಂಘದಲ್ಲಿದ್ದಾರೆ. ಹೀಗಾಗಿ ಪಾಲು ಬಂಡಾವಳ, ಠೇವಣಿಗೆ ಬರವಿಲ್ಲ. ಠೇವಣಿ ಪಡೆದು ಸಾಲ ವಿತರಿಸಿದಾಗ ಸಹಕಾರಿ ಸಂಘ ಬೆಳೆಯಲಿದೆ. ಸಹಕಾರಿ ಸಂಘಕ್ಕೆ ಕಷ್ಟದ ಕಾಲದಲ್ಲಿ ಜನರು ಬರುತ್ತಿದ್ದು ಗೌರವದಿಂದ ಸಾಲ ನೀಡುತ್ತೇವೆ. ಸಾಲ ಪಡೆದುಕೊಂಡವರು ಅಷ್ಟೇ ಗೌರವದಿಂದ ಮರುಪಾವತಿಸಿದಾಗ ಸಹಕಾರಿ ಸಂಘಗಳು ಬೆಳೆಯಲಿದೆ. ಸರಕಾರಿ ನೌಕರರು ಸಮುದಾಯದ ಜೊತೆ ಇರುವವರು. ಜನರ ಹತ್ತಾರು ನೋವುಗಳಿಗೆ ಸ್ಪಂಧನೆ ನೀಡುವವರಿದ್ದಾರೆ ಎಂದರು.
ಮುಖ್ಯ ಅತಿಥಿ ತಾಲೂಕು ಆರೋಗ್ಯಾಧಿಕಾರಿ ದೀಪಕ್ ರೈ ಮಾತನಾಡಿದರು.
ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನ ಪುತ್ತೂರು ಪ್ರಧಾನ ಶಾಖೆಯ ವ್ಯವಸ್ಥಾಪಕ ಹರೀಶ್ ರೈ, ಸರಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಮೌರೀಸ್ ಮಸ್ಕರೇನಸ್, ಕೃಷ್ಣಪ್ಪ ಕೆ. ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸರಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಮೌರಿಸ್ ಮಸ್ಕರೇನಸ್, ಸಹಕಾರಿ ಸಂಘದ ಸ್ಥಾಪನೆಗೆ ನಾಂದಿ ಹಾಡಿದ್ದ ಕೃಷ್ಣಪ್ಪ ಕೆ., ಮಾಮಚ್ಚನ್, ಸಂಘದ ಮುಖ್ಯ ಪ್ರವರ್ತಕ ಪುರುಷೋತ್ತಮ ಬಿ. ಸರಕಾರಿ ನೌಕರರ ಸಂಘದ ಚುನಾವಣೆ ನಡೆಸಿಕೊಟ್ಟ ನಿವೃತ್ತ ಉಪ ತಹಶೀಲ್ದಾರ್ ಸೂರಪ್ಪ ಗೌಡ ಹಾಗೂ ಫ್ಯಾಟ್ರಿಕ್ ಲೋಬೋರವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಸರಕಾರಿ ನೌಕರರ ಸಂಘದ ಪದಾಧಿಕಾರಿಗಳ ಪದಗ್ರಹಣ ನಡೆಯಿತು.
ಶಿಕ್ಷಕಿ ವೀಣಾ ಪ್ರಾರ್ಥಿಸಿದರು. ಸರಕಾರಿ ನೌಕರರ ಸಂಘದ ಅಧ್ಯಕ್ಷ ಶಿವಾನಂದ ಆಚಾರ್ಯ ಸ್ವಾಗತಿಸಿದರು. ರಾಜ್ಯ ಪರಿಷತ್ ಸದಸ್ಯ ಮಹಮ್ಮದ್ ಅಶ್ರಫ್ ಕಾರ್ಯಕ್ರಮ ನಿರೂಪಿಸಿ, ಹಿರಿಯ ಉಪಾಧ್ಯಕ್ಷೆ ಪದ್ಮಾವತಿ ಎಂ.ಆರ್ ವಂದಿಸಿದರು. ಸಂಘದ ಕಾರ್ಯದರ್ಶಿ ಅಬ್ರಹಾಂ ಎಸ್.ಎ., ಖಜಾಂಚಿ ಚಂದ್ರ ನಾಯ್ಕ್, ನಾಗೇಶ್ ಎಂ., ಸುಲೋಚನ ಪಿ.ಕೆ., ಸುಧೀರ್, ಸಹಕಾರ ಸಂಘದ ಪ್ರವರ್ತಕರಾದ ಧರ್ಣಪ್ಪ ಗೌಡ, ಹೊನ್ನಪ್ಪ ಗೌಡ, ತನುಜಾ, ಕವಿತಾ, ಕೃಷ್ಣ ಬಿ., ಚಂದ್ರಶೇಖರ ನಾಯ್ಕ್ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.
ಸರಕಾರಿ ನೌಕರರಿಗೊಂದು ಸಹಕಾರ ಸಂಘ ಸ್ಥಾಪಿಸುವ ನಮ್ಮ ಹಲವು ವರ್ಷಗಳ ಕನಸು ನನಸಾಗಿದೆ. ಸರಕಾರಿ ನೌಕರರ ಸಂಘ ಮಾಜಿ ಅಧ್ಯಕ್ಷರುಗಳ ಪರಿಶ್ರಮ ಫಲವಾಗಿ ಸುಸಜ್ಜಿತ ಕಟ್ಟಡ, ಸಭಾಭವನ ನಿರ್ಮಾಣಗೊಂಡಿದೆ. ಸಹಕಾರಿ ಸಂಘ ಸ್ಥಾಪಿಸುವುದು ನಮ್ಮ ಬಹುಮುಖ್ಯ ಆಕಾಂಕ್ಷೆಯಾಗಿತ್ತು. ಹಂತ ಹಂತವಾಗಿ ಹಿರಿಯ ಮಾರ್ಗದರ್ಶನ ಪಡೆದು ಸಹಕಾರಿ ಸಂಘ ಸ್ಥಾಪನೆಗೊಂಡಿದ್ದು ಸಂಘದಲ್ಲಿ 541 ಸದಸ್ಯರಿಂದ ರೂ.೧೫ಲಕ್ಷ ಪಾಲು ಬಂಡವಾಳ ಸಂಗ್ರಹವಾಗಿದೆ. ಎಲ್ಲರ ಸಹಕಾರದಿಂದ ಸಹಕಾರಿ ಸಂಘ ಸ್ಥಾಪನೆಯಾಗಿದೆ. ಇದಕ್ಕಾಗಿ ಎಲ್ಲಾ ಇಲಾಖೆಗಳ ಅಧಿಕಾರಿ, ಸಿಬಂದಿಗಳು ಕೈಜೋಡಿಸಿದ್ದಾರೆ.
-ಶಿವಾನಂದ ಆಚಾರ್ಯ, ಅಧ್ಯಕ್ಷರು, ಸರಕಾರಿ ನೌಕರರ ಸಂಘ