Published
1 day agoon
By
Akkare Newsಪುತ್ತೂರು: ಶತಮಾನೋತ್ಸವದ ಹೊಸ್ತಿಲಲ್ಲಿರುವ ಮುಂಡೂರು ಸ.ಹಿ.ಪ್ರಾ ಶಾಲೆ, ಹಿರಿಯ ವಿದ್ಯಾರ್ಥಿ ಸಂಘದ ಸಹಯೋಗದಲ್ಲಿ ಎಂಆರ್‌ಪಿಎಲ್‌ನ ರೂ.40ಲಕ್ಷ ಅನುದಾನದಲ್ಲಿ ನಿರ್ಮಾಣಗೊಂಡ ಕೊಠಡಿಗಳ ಉದ್ಘಾಟನೆ, ಕಲಿಕಾ ಉದ್ಯಾನವನ ಉದ್ಘಾಟನೆ ಹಾಗೂ ವಾರ್ಷಿಕೋತ್ಸವವು ಜ.5ರಂದು ಶಾಲಾ ಆವರಣದಲ್ಲಿ ನಡೆಯಿತು.
ಸಂಜೆ ನಡೆದ ಕಾರ್ಯಕ್ರಮದಲ್ಲಿ ನೂತನ ಕೊಠಡಿಗಳನ್ನು ಉದ್ಘಾಟಿಸಿದ ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ, ಮುಂಡೂರಿನಲ್ಲಿ ಆರ್‌ಟಿಓ ಎಲೆಕ್ಟ್ರಾನಿಕ್ ಟ್ರಾಕ್‌ಗೆ 5.5ಎಕರೆ ಜಾಗ 9 ಕೋಟಿ ಮಂಜೂರಾಗಿದೆ. ಮುಂದಿನ ದಿನಗಲ್ಲಿ ಲೈಸನ್ಸ್ ಮಾಡಲು ಸುಳ್ಯ, ಬೆಳ್ತಂಗಡಿ, ಪುತ್ತೂರು ವಿಟ್ಲದವರು ಮುಂಡೂರಿಗೆ ಬರಲಿದ್ದು ಇಲ್ಲಿ ಉದ್ಯಮ ಬೆಳೆಯಲಿದೆ. ಮಕ್ಕಳ ಕ್ರೀಡಾ ಕ್ಷೇತ್ರದಲ್ಲಿ ಸಾಧನೆಗೆ ಸಹಕಾರಿಯಾಗಲು ಈಜುಕೊಳ, ಸಿಂಥೆಟಿಕ್ ಟ್ರಾಕ್, ಬಾಸ್ಕೆಟ್ ಬಾಲ್ ಸೇರಿದಂತೆ ಎಲ್ಲಾ ಸೌಲಭ್ಯಗಳನ್ನು ಒಳಗೊಂಡ ಸುಸಜ್ಜಿತ ಅಂತರಾಷ್ಟ್ರೀಯ ಕ್ರೀಡಾಂಗಣಕ್ಕೆ 20 ಎಕರೆ ಜಾಗ ನಿಗಧಿಪಡಿಸಲಾಗಿದೆ. ಪ್ರತಿದಿನ ನೂರಾರು ಮಂದಿ ಮುಂಡೂರಿಗೆ ಆಗಮಿಸಲಿದ್ದು, ರಸ್ತೆ ಅಭಿವೃದ್ಧಿಯಾಗಲಿದ್ದು ಮುಂಡೂರಿನ ಜನತೆ ಭಾಗ್ಯವಂತರು. ರಸ್ತೆ ಅಗಲೀಕರಣವಾಗಲಿದೆ ಎಂದರು.
ಎಲ್‌ಕೆಜಿಗೆ ಸರಕಾರದ ವ್ಯವಸ್ಥೆಗಳನ್ನು ಮಾಡಲಾಗುವುದು. ಹಂತ ಹಂತವಾಗಿ ಎಲ್ಲಾ ಶಾಲೆಗಳನ್ನು ಕೆಪಿಎಸ್ ಶಾಲೆಗಳನ್ನಾಗಿ ಮಾಡಲಾಗುವುದು. ಕ್ರೀಡಾಂಗಣಕ್ಕೆ ಹೆಚ್ಚಿನ ಅನುದಾನಕ್ಕೆ ಪ್ರಯತ್ನಿಸಲಾಗುವುದು. ಶಾಸಕನಾಗಿ ಪುತ್ತೂರಿನ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಹೇಳಿದ ಅವರು ಎಂಆರ್‌ಪಿಎಲ್‌ನ ಹಿರಿಯ ಅಧಿಕಾರಿಗಳಲ್ಲಿ ಚರ್ಚೆ ಮಾಡಿ ನಮ್ಮ ವಿಧಾನ ಸಭಾ ಕ್ಷೇತ್ರಕ್ಕೆ ಅನುದಾನ ನೀಡುವಂತೆ ಚರ್ಚೆ ಮಾಡಿದ್ದು ಹೆಚ್ಚಿನ ಅನುದಾನ ನೀಡಿದ್ದಾರೆ ಎಂದರು.
ಹೊಸ ಕಟ್ಟಡ ನಾಮಫಲಕ ಅನಾವರಣಗೊಳಿಸಿ, ಸನ್ಮಾನ ಸ್ವೀಕರಿಸಿದ ಎಂಆರ್‌ಪಿಎಲ್‌ನ ಜನರಲ್ ಮ್ಯಾನೇಜರ್ ಸತೀಶ್ ಮಾತನಾಡಿ, ಹಬ್ಬದ ವಾತಾವರಣವಿದೆ. ಎಂಆರ್‌ಪಿಎಲ್‌ನ ಲಾಭಾಂಶದ ಶೇ.2ರನ್ನು ಸಿಎಸ್‌ಆರ್ ಅನುದಾನದ ಮೂಲಕ ಸಮಾಜದ ಶಿಕ್ಷಣ ಆರೋಗ್ಯ ಮೊದಲಾದ ಆವಶ್ಯಕ ಕ್ಷೇತ್ರಗಳಿಗೆ ವಿನಿಯೋಗಿಸಲಾಗುತ್ತಿದೆ. ರಾಜ್ಯದಲ್ಲಿ ಸರಕಾರಿ ಪ್ರಾಥಮಿಕ ಶಾಲೆಗಳ ಆವಶ್ಯಕತೆಯ ಪರಿಶೀಲಿಸಿ ಕಟ್ಟಡ, ಛಾವಣಿ, ಫೀಠೋಪಕರಣಗಳಿಗೆ ಅನುದಾನ ನೀಡಲಾಗುತ್ತಿದೆ. ಮುಂಡೂರು ಶಾಲೆಗೆ ನೀಡಿದ ರೂ.40ಲಕ್ಷ ಸಿಎಸ್‌ಆರ್ ಅನುದಾನದಲ್ಲಿ ಭವ್ಯ ಕಟ್ಟಡ ನಿರ್ಮಾಣಗೊಂಡಿದೆ. ಮುಂಡೂರು ಗ್ರಾಮದ ಮಕ್ಕಳು ಇದರ ಪ್ರಯೋಜನೆನ್ನು ಪಡೆದುಕೊಂಡು ರಾಜ್ಯಮಟ್ಟದಲ್ಲಿ ಹೆಸರುಗಳಿಸುವಂತಾಗಲಿ ಎಂದರು.
ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ಕೊಡಗು ಜಿಲ್ಲಾಧ್ಯಕ್ಷ ಉನೈಝ್ ಮಾತನಾಡಿ, ಕನ್ನಡ ಶಾಲೆಗಳು ಉಳಿದರೆ ಮಾತ್ರ ನಮ್ಮ ಸಂಸ್ಕೃತಿ ಉಳಿಯಲು ಸಾಧ್ಯ. ಹೀಗಾಗಿ ಕೊಡಗು ಜಿಲ್ಲೆಯ ಕರ್ನಾಟಕ ರಕ್ಷಣಾ ಸ್ವಾಭಿಮಾನಿ ಬಣದಿಂದ ಕನ್ನಡ ಶಾಲೆ ಉಳಿಸಿ ಬೆಳೆಸುವ ಅಭಿಯಾನ ರಾಜ್ಯದ್ಯಂತ ಹಮಿಕೊಳ್ಳಲಾಗುತ್ತಿದ್ದು ಕಲಿಕಾ ಉದ್ಯಾನವನವನ್ನು ಕೊಡುಗೆ ನೀಡಲಾಗುತ್ತಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಮುಂಡೂರು ಗ್ರಾ.ಪಂ ಅಧ್ಯಕ್ಷ ಚಂದ್ರಶೇಖರ ಎನ್‌ಎಸ್‌ಡಿ ಮಾತನಾಡಿ, ಪ್ರಾಥಮಿಕ ಹಂತದಿಂದ ಅಭಿವೃದ್ಧಿಯಾಗುವ ಉದ್ದೇಶದಿಂದ ಎಂಆರ್‌ಪಿಎಲ್‌ನಿಂದ ಕೊಡುಗೆ ನೀಡಿದ್ದು ಬೆಳೆಯಲು ಸಹಕಾರಿಯಾಗಲಿದೆ. ಖಾಸಗಿ ಶಾಲೆಗಳಿಗಿಂತ ಮುಂದಿದ್ದು ಸರಕಾರಿ ಶಾಲೆಗಳು ಮುಂದುವರಿದಿದ್ದು ಪೋಷಕರು ಮಕ್ಕಳನ್ನು ಸರಕಾರಿ ಶಾಲೆಗಳಿಗೆ ದಾಖಲಿಸುವಂತೆ ವಿನಂತಿಸಿದರು.
ಶಿಕ್ಷಣ ಸಮನ್ವಯಾಧಿಕಾರಿ ನವೀನ್ ಸ್ಟಿಫನ್ ವೇಗಸ್ ಮಾತನಾಡಿ, ಶಿಕ್ಷಕರು ಹಾಗೂ ಎಸ್‌ಡಿಎಂಸಿಯವರ ಶ್ರಮದಿಂದ ಅಭಿವೃದ್ಧಿಯಲ್ಲಿ ಮುನ್ನಡೆಯುತ್ತಿದೆ ಎಂದರು. ರಾಜ್ಯ ಸರಕಾರಿ ನೌಕರರ ಸಂಘದ ನಿರ್ದೇಶಕಿ ತನುಜಾ ಮಾತನಾಡಿ, ಶಾಲೆಯ ಕಲಿಕಾ ಉದ್ಯಾನವನಕ್ಕೆ ಆರ್ಥಿಕ ದೇಣಿಗೆ ನೀಡುವುದಾಗಿ ತಿಳಿಸಿದರು. ಪಜಿಮಣ್ಣು ಶ್ರೀನಿವಾಸ ಕಾವೆರಮ್ಮ ಮೆಮೋರಿಯಲ್ ಟ್ರಸ್ಟ್ ನ ಅಧ್ಯಕ್ಷ ಎಂ.ಪಿ ಬಾಲಕೃಷ್ಣ, ಮುಂಡೂರು ಗ್ರಾ.ಪಂ ಸದಸ್ಯರಾದ ಉಮೇಶ್ ಅಂಬಟ, ಕಾವ್ಯ, ಕೊಡುಗೈ ದಾನು ಗುಲಾಬಿ ಶೆಟ್ಟಿ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಬಾಲಕೃಷ್ಣ, ಮುಂಡೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಉಪಾಧ್ಯಕ್ಷ ಯಾಕೂಬ್ ಮುಲಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸನ್ಮಾನ:
ಶಾಲೆಗೆ ನೂತನ ಕಟ್ಟಡ ಒದಗಿಸಿದ ಎಂಆರ್‌ಪಿಎಲ್‌ನ ಜನರಲ್ ಮ್ಯಾನೇಜರ್ ಸತೀಶ್, ಶಾಸಕ ಅಶೋಕ್ ಕುಮಾರ್ ರೈ, ಕಲಿಕಾ ಉದ್ಯಾನವನ ಕೊಡುಗೆ ನೀಡಿದ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬನದ ಕೊಡಗು ಜಿಲ್ಲಾಧ್ಯಕ್ಷ ಉನೈಝ್, ಕ್ರೀಡಾ ಕ್ಷೇತ್ರ ಸಾಧಕ ವಿದ್ಯಾರ್ಥಿನಿ ತಶ್ರೀಫಾ, ಕಟ್ಟಡ ಕಾಮಗಾರಿ ನಿರ್ವಹಿಸಿದ ಗುತ್ತಿಗೆದಾರ ರಾಜ್‌ಕುಮಾರ್ ರೈ ಬೆದ್ರಾಳ, ಶಾಲಾ ಮುಖ್ಯಗುರು ವಿಜಯ ಪಿ., ಶಿಕ್ಷಕರಾದ ರಾಮಚಂದ್ರ, ವನಿತಾ, ಅನ್ನಪೂರ್ಣ, ರವೀಂದ್ರ ಶಾಸ್ತ್ರಿ, ಅಬ್ದುಲ್ ಬಶೀರ್, ಮೂಕಾಂಬಿಕಾ ಸಿ.ಎಚ್., ಅಂಕಿತಾ, ತೇಜಸ್ವಿನಿ, ಶಕುಂತಳಾ, ಅಕ್ಷರದಾಸೋಹ ಸಿಬಂದಿಗಳಾದ ಪ್ರತಿಮಾ ಎ.ಆರ್., ಲೀಲಾವತಿ ಹಾಗೂ ಗೀತಾ ಕೆ.ಯವರನ್ನು ಸನ್ಮಾನಿಸಲಾಯಿತು.
ದತ್ತಿನಿಧಿ ವಿತರಣೆ
ಪಜಿಮಣ್ಣು ಶ್ರೀನಿವಾಸ ಕಾವೇರಮ್ಮ ಮೆಮೋರಿಯಲ್ ಟ್ರಸ್ಟ್ ಮೂಲಕ ಶಾಲೆಯ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ನೀಡುವ ದತ್ತಿನಿಧಿಯನ್ನು ಟ್ರಸ್ಟ್‌ನ ಅಧ್ಯಕ್ಷ ಎಂ.ಪಿ ಜಯರಾಮ ವಿತರಿಸಿದರು. ಶಾಂತಿ ಮಹೇಶ್ ವಿಶೇಷ ಪ್ರತಿಭೆಗಳಿಗೆ ನೀಡುವ ನಗದು ಪುರಸ್ಕಾರವನ್ನು ಗುಲಾಬಿ ಶೆಟ್ಟಿ ವಿತರಿಸಿದರು. ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷ ಮಂಡಳಿ ನಡೆಸುವ ಡ್ರಾಯಿಂಗ್ ಸ್ಪರ್ಧೆಯಲ್ಲಿ ಡಿಸ್ಟಿಂಕ್ಷನ್ ಪಡೆದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಪೋಷಕರಿಗೆ ನಡೆಸಿದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ರೈನ್‌ಬೋ ಆಂಗ್ಲ ಹಸ್ತಪತ್ರಿಕೆ ಬಿಡುಗಡೆ
ಶಾಲಾ ವಿದ್ಯಾರ್ಥಿಗಳಿಂದ ಮೂಡಿಬಂದಿರುವ ಎರಡನೇ ವರ್ಷದ ರೈನ್‌ಬೋ ಆಂಗ್ಲ ಹಸ್ತಪತ್ರಿಕೆಯನ್ನು ಶಿಕ್ಷಣ ಸಮನ್ವಯಾಧಿಕಾರಿ ನವೀನ್ ಸ್ಟಿಫನ್ ವೇಗಸ್ ಬಿಡುಗಡೆಗೊಳಿಸಿದರು. ಯಕ್ಷಗಾನ ಶಿಕ್ಷಕ ಉತ್ತಮ್ ಪಡ್ಪು, ಡ್ರಾಯಿಂಗ್ ಶಿಕ್ಷಕ ಶಿವಸುಬ್ರಹ್ಮಣ್ಯ, ಭರತನಾಟ್ಯ ಶಿಕ್ಷಕಿ ಸಂಧ್ಯಾ ಗಣೇಶ್, ಯತೀಶ್ ಮುಂಡೂರು, ದೀಕ್ಷಿತ್ ಮುಂಡೂರು, ಮುಖ್ಯಗುರು ವಿಜಯ ಪಿ ಸ್ವಾಗತಿಸಿದರು. ಎಸ್‌ಡಿಎಂಸಿ ಅಧ್ಯಕ್ಷ ರಮೇಶ್ ಗೌಡ ಪಜಿಮಣ್ಣು ವಂದಿಸಿದರು. ಶಿಕ್ಷಕರಾದ ರಾಮಚಂದ್ರ ವರದಿ ವಾಚಿಸಿ, ಅಬ್ದುಲ್ ಬಶೀರ್ ಕಾರ್ಯಕ್ರಮ ನಿರೂಪಿಸಿದರು.
ಸಾಂಸ್ಕೃತಿಕ ಸಂಜೆ ಕಾರ್ಯಕ್ರಮದಲ್ಲಿ ಅಂಗನವಾಡಿ, ಎಲ್‌ಕೆಜಿ ಹಾಗೂ ಯುಕೆಜಿ ಮಕ್ಕಳಿಂದ ನೃತ್ಯ ವೈವಿದ್ಯ, ಶಾಲಾ ವಿದ್ಯಾರ್ಥಿಗಳಿಂದ ವಿವಿಧ ವೈವಿದ್ಯಮಯ ಕಾರ್ಯಕ್ರಮ ಹಾಗೂ ಉತ್ತಮ್ ಪಡ್ಪು ಮಾರ್ಗದರ್ಶನದಲ್ಲಿ ಶಾಲಾ ವಿದ್ಯಾರ್ಥಿಗಳಿಂದ ‘ಲವಕುಶ’ ಎಂಬ ಯಕ್ಷಗಾನ ನಡೆಯಿತು.