Published
3 hours agoon
By
Akkare Newsಮಾಸಿಕ ಹತ್ತು ಸಾವಿರ ರೂಪಾಯಿ ಗೌರವಧನ ನೀಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭರವಸೆ ನೀಡಿರುವ ಹಿನ್ನೆಲೆ, ಜನವರಿ 7ರಿಂದ ನಡೆಸುತ್ತಿದ್ದ ಮುಷ್ಕರವನ್ನು ಆಶಾ ಕಾರ್ಯಕರ್ತೆಯರು ಶುಕ್ರವಾರ (ಜ.10) ಹಿಂಪಡೆದಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ನಡೆದ ಆಶಾ ಕಾರ್ಯಕರ್ತೆಯರ ಸಂಧಾನ ಯಶಸ್ವಿಯಾಗಿದ್ದು, ಮಾಸಿಕ 10 ಸಾವಿರ ರೂ.ಗಳ ಗೌರವಧನವನ್ನು ಏಪ್ರಿಲ್ ಒಂದರಿಂದ ಅನ್ವಯವಾಗುವಂತೆ ನೀಡಲು ಸರ್ಕಾರ ಒಪ್ಪಿದೆ.
ರಾಜ್ಯ ಸರ್ಕಾರದಿಂದ ಪ್ರತಿ ತಿಂಗಳು 5000 ರೂ. ಹಾಗೂ ಕೇಂದ್ರ ಸರ್ಕಾರದ 34 ಸೇವೆಗಳಿಗೆ ನೀಡುವ ಗೌರವಧನ ಸೇರಿ ಒಟ್ಟು 10 ಸಾವಿರ ರೂ.ಗಳನ್ನು ನೀಡಲಾಗುವುದು ಎಂದು ಆಶಾ ಕಾರ್ಯಕರ್ತೆಯರಿಗೆ ಸಿಎಂ ಭರವಸೆ ನೀಡಿದ್ದಾರೆ.
ಪೋರ್ಟಲ್ ಸುಧಾರಣೆಗೆ ಸೂಚನೆ
ವಿವಿಧ ಮಾಹಿತಿಗಳನ್ನು ಪೋರ್ಟಲ್‌ನಲ್ಲಿ ನಮೂದು ಮಾಡುವುದು ಕಷ್ಟ ಸಾಧ್ಯವಾಗಿರುವ ಬಗ್ಗೆ ಮುಖ್ಯಮಂತ್ರಿಗಳ ಗಮನ ಸೆಳೆದಾಗ, ಪೋರ್ಟಲ್ ಸುಧಾರಣೆ ಮಾಡಿ ಸಮಸ್ಯೆ ಬಗೆಹರಿಸುವಂತೆ ಸಿಎಂ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಗೌರವಧನ ನಿಲ್ಲಿಸದೆ ರಜೆ
ಆಶಾ ಕಾರ್ಯಕರ್ತೆಯರ ಆರೋಗ್ಯ ಕೆಟ್ಟರೆ ಪ್ರತಿ ತಿಂಗಳು ಸಿಗುವ ರಜೆ ಕ್ರೋಡೀಕರಿಸಿ, ಗರಿಷ್ಠ ಮೂರು ತಿಂಗಳವರೆಗೆ ಗೌರವಧನ ನಿಲ್ಲಿಸದೆ ರಜೆ ಮಂಜೂರು ಮಾಡುವುದಾಗಿ ಸಿಎಂ ಭರವಸೆ ನೀಡಿದ್ದಾರೆ.
ಬಜೆಟ್‌ಗೂ ಮುನ್ನ ಸಭೆ
ಆಯವ್ಯಯ ಅಥವಾ ಬಜೆಟ್ ಪೂರ್ವಭಾವಿ ಸಭೆ ನಡೆಸುವಾಗ ಆಶಾ ಕಾರ್ಯಕರ್ತೆಯರೊಂದಿಗೂ ಸಭೆ ನಡೆಸಲಾಗುವುದು. ಸರ್ಕಾರ ನಿಮ್ಮೊಂದಿಗಿದೆ ಎಂದು ಸಿಎಂ ಹೇಳಿದ್ದಾರೆ.
ಜಾಸತ್ತಾತ್ಮಕ ಹೋರಾಟಗಳನ್ನು ಸರ್ಕಾರ ಹತ್ತಿಕ್ಕುವುದಿಲ್ಲ
ಹೋರಾಟ ಮಾಡುವುದು ಸಂವಿಧಾನ ಬದ್ಧ ಹಕ್ಕು. ಪ್ರಜಾಸತ್ತಾತ್ಮಕ ಹೋರಾಟಗಳನ್ನು ಸರ್ಕಾರ ಹತ್ತಿಕ್ಕುವುದಿಲ್ಲ ಎಂದು ಸಿಎಂ ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ
ಬುಧವಾರ (ಜ.8) ಪ್ರತಿಭಟನಾ ಸ್ಥಳಕ್ಕೆ ರಾಜ್ಯ ಸರ್ಕಾರದ ಪರವಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಭೇಟಿ ನೀಡಿದ್ದರು. ರಾಜ್ಯ ಮತ್ತು ಕೇಂದ್ರದ ಗೌರವಧನ ಸೇರಿಸಿ ಸದ್ಯಕ್ಕೆ 9,500 ರೂ. ಮುಂಗಡವಾಗಿ ನೀಡಲಾಗುವುದು. ಆದರೆ, ಆಶಾಗಳು ಮಾಡುವ ಕೆಲಸವು ಕಡಿಮೆಯಾದರೆ, ವ್ಯತ್ಯಾಸದ ಮೊತ್ತವನ್ನು ಈ 9,500ರೂ.ನಿಂದ ಕಡಿತ ಮಾಡಲಾಗುವುದು ಎಂದಿದ್ದರು.
ಆರೋಗ್ಯ ಸಚಿವರ ಈ ಹೇಳಿಕೆಯನ್ನು ಒಪ್ಪದ ಆಶಾಗಳು, 15 ಸಾವಿರ ರೂ. ನಿಶ್ಚಿತ ಗೌರವಧನ ನಿಗದಿ ಮಾಡುವುದು ಸೇರಿದಂತೆ ಇತರ ನ್ಯಾಯಯುತ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮುಷ್ಕರ ಮುಂದುವರೆಸಿದ್ದರು. ಸಿಎಂ ಸಿದ್ದರಾಮಯ್ಯ ಅವರು ಖುದ್ದಾಗಿ ನಮ್ಮ ಅಹವಾಲು ಆಲಿಸಬೇಕು ಎಂದು ಒತ್ತಾಯಿಸಿದ್ದರು.
ಹೋರಾಟಕ್ಕೆ ಮಣಿದ ಸಿಎಂ ಸಿದ್ದರಾಮಯ್ಯ, ಶುಕ್ರವಾರ (ಜ.10) ಮಧ್ಯಾಹ್ನ ಆಶಾ ಕಾರ್ಯಕರ್ತೆಯರ ಸಂಘದ ಅಧ್ಯಕ್ಷೆ ನಾಗಲಕ್ಷ್ಮಿ ಸೇರಿದಂತೆ ಪ್ರಮುಖರ ಜೊತೆ ಸಭೆ ನಡೆಸಿ ಭರವಸೆಗಳನ್ನು ನೀಡಿದರು. ಆ ಬಳಿಕ ಆಶಾಗಳು ತಮ್ಮ ಅನಿರ್ಧಿಷ್ಟಾವಧಿ ಮುಷ್ಕರ ಹಿಂಪಡೆದರು.