Published
3 months agoon
By
Akkare Newsರಾಜರಾಜೇಶ್ವರಿ ನಗರ ವಿಧಾಸಭಾ ಕ್ಷೇತ್ರ ವ್ಯಾಪ್ತಿಯ ಪೀಣ್ಯ ಪ್ರಥಮ ದರ್ಜೆ ಕಾಲೇಜು ಬಳಿಯಿರುವ ಅಕ್ಕಮಹಾದೇವಿ ಸ್ಲಂ ನಿವಾಸಿಗಳ ಮೇಲೆ ದೌರ್ಜನ್ಯ ನಡೆಸಿದ ಆರೋಪದ ಮೇಲೆ ಬಿಜೆಪಿ ಶಾಸಕ ಮುನಿರತ್ನ ವಿರುದ್ಧ ಮತ್ತೊಂದು ಎಫ್ಐಆರ್ ದಾಖಲಾಗಿದೆ.
ಶಾಸಕ ಮುನಿರತ್ನ ಮತ್ತು ಅವರ ಸಹಚರರು ನಡೆಸಿದ ದೌರ್ಜನ್ಯಕ್ಕೆ ಈ ಎಫ್ಐಆರ್ ದಾಖಲಾಗಿದೆ. “ನಮ್ಮ ಮನೆ ನೆಲಸಮ ಮಾಡಿ, ಶಾಸಕ ಮುನಿರತ್ನ ಮತ್ತು ಅವರ ಸಹಚರರು ದರ್ಪ ಮೆರೆದಿದ್ದಾರೆ” ಎಂಬ ಆರೋಪ ಕೇಳಿಬಂದಿದ್ದು, ಈ ಹಿನ್ನೆಲೆಯಲ್ಲಿ ಮುನಿರತ್ನ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಪೀಣ್ಯದಲ್ಲಿರುವ ಅಕ್ಕಮಹಾದೇವಿ ಸ್ಲಂನಲ್ಲಿ ಸುಮಾರು 50 ಕ್ಕೂ ಹೆಚ್ಚು ಬಡ ಕುಟುಂಬಗಳು ವಾಸವಾಗಿವೆ. ಶಾಸಕ ಮುನಿರತ್ನ ಮತ್ತು ಸಹಚರರು ಬುಲ್ಡೋಜರ್ ಮೂಲಕ ಎಲ್ಲರ ಮನೆಯನ್ನು ನೆಲಸಮ ಮಾಡಿದ್ದಾರೆ ಎಂದು ದೂರು ನೀಡಲಾಗಿದೆ.
ಮುನಿರತ್ನ ಸಹಚರರಾದ ವಸಂತ್ ಕುಮಾರ್, ಚನ್ನಕೇಶವ, ನವೀನ್, ರಾಮ , ಕಿಟ್ಟಿ , ಗಂಗಾ ಎಂಬುವವರು ಬಂದು ಮನೆ ನೆಲಸಮ ಮಾಡಿಸಿದ್ದಾರೆ. ಮನೆಯಲ್ಲಿ ಕೂಡಿಟಿದ್ದ ಸಾವಿರಾರು ರೂಪಾಯಿ ಹಣದ ಜೊತೆಗೆ 30 ಗ್ರಾಂ ಚಿನ್ನಾಭರಣ ಮಣ್ಣು ಪಾಲಾಗಿದೆಯೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಯಶವಂತಪುರ ಆರ್‌ಎಂಸಿ ಯಾರ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.