Published
2 months agoon
By
Akkare Newsಪುತ್ತೂರು: 2025ರ ಡಿ. 27, 28, 29ರಂದು ನಡೆಯುವ ಶ್ರೀನಿವಾಸ ಕಲ್ಯಾಣೋತ್ಸವ ಹಾಗೂ ಸಾಮೂಹಿಕ ವಿವಾಹದ ಮಾಹಿತಿಯನ್ನು ಪುತ್ತಿಲ ಸೇವಾ ಟ್ರಸ್ಟ್ ಸಂಚಾಲಕ ಅರುಣ್ ಕುಮಾರ್ ಪುತ್ತಿಲ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 2025ರ ಡಿ. 27, 28ರಂದು ಶ್ರೀನಿವಾಸ ಕಲ್ಯಾಣೋತ್ಸವ ಜರಗಲಿದ್ದು, 29ರಂದು ದೇವರ ಎದುರಿನಲ್ಲೇ ಸಾಮೂಹಿಕ ವಿವಾಹ ನಡೆಯಲಿದೆ,ಈ ವರ್ಷ ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ 100 ವರ್ಷ ತುಂಬಿದ್ದು, ಈ ಹಿನ್ನೆಲೆಯಲ್ಲಿ 100 ಜೋಡಿಗಳಿಗೆ ಸಾಮೂಹಿಕ ವಿವಾಹ ನಡೆಸಬೇಕೆಂಬ ಸಂಕಲ್ಪ ನಮ್ಮದು. ನೂರು ಜೋಡಿಗಳಿಗೆ ವಿವಾಹ ನಡೆಸುವುದೆಂದರೆ ಸಣ್ಣ ವಿಷಯವಲ್ಲ ಎಂಬ ವಿಚಾರ ತಿಳಿದಿದೆ. ಯಾವುದೇ ಗೊಂದಲಗಳಿಗೆ ಆಸ್ಪದ ಆಗಬಾರದು ಎಂಬ ಹಿನ್ನೆಲೆಯಲ್ಲಿ ಈಗಲೇ ಸಿದ್ಧತೆ ಆರಂಭಿಸಿದ್ದೇವೆ ಎಂದರು.
ಗೋ ಶಾಲೆಗೆ ಗೋಮಾಳದ ಜಾಗಕ್ಕೆ ಮನವಿ:
ಪೇಜಾವರ ಶ್ರೀಗಳ ಅಪೇಕ್ಷೆಯಂತೆ ಗೋಶಾಲೆ ನಿರ್ಮಾಣ ಮಾಡುವ ಕಾಯಕಕ್ಕೂ ಮುಂದಾಗಿದ್ದೇವೆ. ಇದಕ್ಕಾಗಿ ಮುಂಡೂರಿನಲ್ಲಿ ಗೋಮಾಳದ ಜಾಗ ನೋಡಲಾಗಿದೆ. ಈ ಜಾಗವನ್ನು ಮಂಜೂರು ಮಾಡುವಂತೆ ಕಂದಾಯ ಇಲಾಖೆಗೆ ಅವರಿಗೆ ಮನವಿ ನೀಡಲಾಗಿದೆ. ಸರಕಾರ ಜಾಗ ಮಂಜೂರು ಮಾಡಿದರೆ ಗೋಶಾಲೆ ನಿರ್ಮಾಣ ಮಾಡುತ್ತೇವೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಟ್ರಸ್ಟ್ ಅಧ್ಯಕ್ಷ ಮಹೇಂದ್ರ ವರ್ಮ, ಪ್ರಧಾನ ಕಾರ್ಯದರ್ಶಿ ರವಿ ಕುಮಾರ್ ಮಠ, ಜತೆ ಕಾರ್ಯದರ್ಶಿ ರಾಜು ಶೆಟ್ಟಿ, ಮಾಧ್ಯಮ ಸಂಚಾಲಕ ನವೀನ್ ರೈ ಪಂಜಳ, ಸದಸ್ಯ ಪ್ರಜ್ವಲ್ ಘಾಟೆ ಉಪಸ್ಥಿತರಿದ್ದರು.