Published
2 months agoon
By
Akkare Newsಬೆಂಗಳೂರು, ಫೆಬ್ರವರಿ 19: ಪ್ರಮುಖ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಸಮಗ್ರ ಸಂಬಳ ಪ್ಯಾಕೇಜ್ ಖಾತೆಯನ್ನು ತೆರೆಯುವ ರಾಜ್ಯ ಸರ್ಕಾರಿ ನೌಕರರಿಗೆ 1 ಕೋಟಿ ರೂ. ಅಪಘಾತ ವಿಮೆ ಸೇರಿದಂತೆ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯಗಳನ್ನು ಒದಗಿಸುವ ರಾಜ್ಯ ಸಚಿವ ಸಂಪುಟದ ನಿರ್ಣಯವನ್ನು ರಾಜ್ಯ ಸರ್ಕಾರಿ ನೌಕರರ ಸಂಘ ಸ್ವಾಗತಿಸಿದೆ.
ಜತೆಗೆ ಇದಕ್ಕಾಗಿ ರಾಜ್ಯ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದೆ ಈ ಬಗ್ಗೆ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಅವರು ಪ್ರಕಟಣೆ ಹೊರಡಿಸಿದ್ದಾರೆ.
ರಾಜ್ಯ ಸರ್ಕಾರದ ಅಧಿಕಾರಿಗಳು/ನೌಕರರ ಮತ್ತು ಅವಲಂಬಿತ ಕುಟುಂಬದ ಸದಸ್ಯರ ಹಿತಾಸಕ್ಷತಿಗಳನ್ನು ಕಾಪಾಡುವ ಸಲುವಾಗಿ ರಾಜ್ಯ ಸಚಿವ ಸಂಪುಟದ ಸಭೆಯ ಈ ಕೆಳಗಿನ ಯೋಜನೆಗಳಿಗೆ ಅನುಮೋದನೆ ನೀಡಿದೆ.
1.ವಿವಿಧ ಬ್ಯಾಂಕ್‌ಗಳು ಒದಗಿಸುವ ಸಂಬಳ ಪ್ಯಾಕೇಜ್‌ಗಳ ಅಡಿಯಲ್ಲಿ ಖಾತೆಗಳನ್ನು ತೆರೆಯುವುದು/ಆಯ್ಕೆ ಮಾಡಿಕೊಳ್ಳುವುದನ್ನು ಎಲ್ಲ ಅಧಿಕಾರಿಗಳು/ನೌಕರರಿಗೆ (ಸರ್ಕಾರಿ/ಸರ್ಕಾರಿ ಸಂಸ್ಥೆಗಳು ಇತ್ಯಾದಿ) ಕಡ್ಡಾಯಗೊಳಿಸುವುದು.
Government Employee: ಫೆ. 20ರಂದು ಸರ್ಕಾರಿ ನೌಕರರಿಗೆ ವಿಶೇಷ ಸಾಂದರ್ಭಿಕ ರಜೆ, ಆದೇಶ
2.ಬ್ಯಾಂಕ್‌ಗಳು/ಅಂಚೆ ಕಚೇರಿಗಳು ನೀಡುವ ಪಿಎಂಜೆಜೆಬಿವೈ (PMJJBY) ಮತ್ತು ಪಿಎಂಎಸ್‌ಬಿವೈ (PMSBY) ಯೋಜನೆಗಳ ಅಡಿಯಲ್ಲಿ ಸ್ವಯಂಪ್ರೇರಿತ ಆಧಾರದ ಮೇಲೆ ವಿಮಾ ರಕ್ಷಣೆಯನ್ನು ಪಡೆಯಲು ಅಧಿಕಾರಿಗಳು/ನೌಕರರನ್ನು ಪ್ರೋತ್ಸಾಹಿಸುವುದು.
3.ಬ್ಯಾಂಕುಗಳು ನೀಡುವ ವಿವಿಧ ಯೋಜನೆಗಳ ಅಡಿಯಲ್ಲಿ ಸ್ವಯಂಪ್ರೇರಿತ ಆಧಾರದ ಮೇಲೆ ವೈಯಲ್ತಿಕ ಅಪಘಾತ ವಿಮಾ ರಕ್ಷಣೆಯನ್ನು ಪಡೆಯಲು ಅಧಿಕಾರಿಗಳು/ನೌಕರರನ್ನು ಪ್ರೋತ್ಸಾಹಿಸುವುದು.
4. ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಕೈಗೊಂಡಿರುವ ನಿರ್ಣಯದಂತೆ ರಾಜ್ಯ ಸರ್ಕಾರದ ಎಲ್ಲಾ ಅಧಿಕಾರಿಗಳು/ನೌಕರರು (ಸರ್ಕಾರಿ/ಸರ್ಕಾರಿ ಸಂಸ್ಥೆಗಳು ಸೇರಿದಂತೆ) ‘ಸಂಬಳ ಪ್ಯಾಕೇಜ್’ ಅಡಿಯಲ್ಲಿ ಖಾತೆ ತೆರೆಯುವುದನ್ನು ಕಡ್ಡಾಯಗೊಳಿಸುವುದು.
* ಸಮಗ್ರ ಪ್ಯಾಕೇಜ್’ ಖಾತೆ ತೆರೆಯುವ ನೌಕರರಿಗೆ ಉಚಿತವಾಗಿ ರೂ. 1.00 ಕೋಟಿ ಅಪಘಾತ ವಿಮೆ ಸೌಲಭ್ಯ ಸೇರಿದಂತೆ ಖಾತೆದಾರರಿಗೆ ಬ್ಯಾಂಕುಗಳು ಇತರೆ ಸೇವೆಗಳನ್ನು ಉಚಿತವಾಗಿ ನೀಡುವುದು.
* ಬ್ಯಾಂಕುಗಳು ನೀಡುವ PMJJBY ಮತ್ತು PMSBY ಯೋಜನೆಗಳ ಅಡಿಯಲ್ಲಿ ಸ್ವಯಂಪ್ರೇರಿತ ಆಧಾರದ ಮೇಲೆ ವಿಮಾರಕ್ಷಣೆಯನ್ನು ಪಡೆಯಲು ಅಧಿಕಾಗಳು ಮತ್ತು ನೌಕರರನ್ನು ಪ್ರೋತ್ಸಾಹಿಸುವುದು.
* ವೈಯಕ್ತಿಕ ಸಾಲ, ಗೃಹ ಸಾಲಗಳನ್ನು ಕಡಿಮೆ ಬಡ್ಡಿದರದಲ್ಲಿ ನೀಡುವುದಾಗಿ ಸಭೆಯಲ್ಲಿ ಭಾಗವಹಿಸಿದ್ದ ಬ್ಯಾಂಕ್‌ಗಳ ಮುಖ್ಯಸ್ಥರು ತಿಳಿಸಿ, ಈ ಸೌಲಭ್ಯವನ್ನು ಪಡೆಯಲು ರಾಜ್ಯ ಸರ್ಕಾರದ ಅಧಿಕಾರಿ/ನೌಕರರು ‘ಸಂಬಳ ಪ್ಯಾಕೇಜ್’ ಖಾತೆಯನ್ನು ತೆರೆಯುವಂತೆ ಮನವಿ ಮಾಡಿದರು.
* ರಾಜ್ಯ ಸಚಿವ ಸಂಪುಟದ ನಿರ್ಣಯ ಹಾಗೂ ಇಂದು ಬ್ಯಾಂಕ್‌ಗಳ ಮುಖ್ಯಸ್ಥರು ಹಾಗೂ ಸರ್ಕಾರದ ಉನ್ನತ ಮಟ್ಟದ ಅಧಿಕಾರಿಗಳೊಂದಿಗೆ ನಡೆಸಲಾಗಿರುವ ಚರ್ಚೆಯಂತೆ ರಾಜ್ಯ ಸರ್ಕಾರದ ಎಲ್ಲಾ ಅಧಿಕಾರಿ-ನೌಕರರು ‘ಸಂಬಳ ಪ್ಯಾಕೇಜ್’ ಖಾತೆಯನ್ನು ತೆರೆಯಲು ಸಭೆಯಲ್ಲಿ ಹಾಜರಿದ್ದ ನೌಕರರ ಸಂಘಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ತಿಳಿಸಿದರು.
ಕರ್ನಟಕ ಸರ್ಕಾರವು ಸರ್ಕಾರಿ ಮತ್ತು ಇತರ ಸರ್ಕಾರಿ ಅಂಗ ಸಂಸ್ಥೆಗಳ ಉದ್ಯೋಗಿಗಳಿಗೆ ವಿವಿಧ ಯೋಜನೆಗಳನ್ನು ಜಾರಿಗೊಳಿಸಿದ್ದು, ಈಗಾಗಲೇ ಜಾರಿಯಲ್ಲಿರುವ ಸಾಮಾಜಿಕ ಭದ್ರತಾ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲು ಮತ್ತು ಸುಗಮಗೊಳಿಸಲು ಸರ್ಕಾರದಿಂದ ನೇರವಾಗಿ/ಪರೋಕ್ಷವಾಗಿ ನೇಮಕಗೊಂಡಿರುವ ವಿವಿಧ ಅಧಿಕಾರಿಗಳು/ನೌಕರರಿಗೆ ಸಾಮಾಜಿಕ ಭದ್ರತಾ ವ್ಯವಸ್ಥೆಯನನು ಜಾರಿಗೆ ತರುವ ಕುರಿತು ಚರ್ಚಿಸಲು ವಿವಿಧ ಪ್ರಮುಖ ಬ್ಯಾಂಕ್ ಅಧಿಕಾರಿಗಳೊಂದಿಗೆ ಮತ್ತು ರಾಜ್ಯದ ಸರ್ಕಾರಿ ನೌಕರರ ಸಂಘಗಳ ಅಧ್ಯಕ್ಷರು/ಪ್ರತಿನಿಧಿಗಳೊಂದಿಗೆ ಇತ್ತೀಚೆಗೆ ಸಭೆ ನಡೆಸಿ, ಈ ತೀರ್ಮಾನ ಕೈಗೊಂಡಿದೆ ಎಂದು ಪ್ರಕಟಣೆ ತಿಳಿಸಿದೆ.
ಈ ಸಭೆಯಲ್ಲಿ ಪ್ರತಿಷ್ಠಿತ ಬ್ಯಾಂಕುಗಳ ಮುಖ್ಯಸ್ಥರು, ಸರ್ಕಾರದ ಉನ್ನತ ಮಟ್ಟದ ಅಧಿಕಾರಿಗಳು, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಶ್ರೀ ಸಿ.ಎಸ್. ಷಡಾಕ್ಷರಿ, ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಹೆಚ್. ಗಿರಿಗೌಡ, ಗೌರವಾಧ್ಯಕ್ಷರಾದ ಶ್ರೀ ಎಸ್. ಬಸವರಾಜು, ಕರ್ನಾಟಕ ಸರ್ಕಾರ ಸಚಿವಾಲಯ ನೌಕರರ ಸಂಘದ ಅಧ್ಯಕ್ಷರಾದ ಶ್ರೀ ರಮೇಶ್ ಸಂಗಾ ಸೇರಿದಂತೆ ಹಲವು ವೃಂದ ಸಂಘಗಳ ಅಧ್ಯಕ್ಷರುಗಳು ಹಾಗೂ ಪದಾಧಿಕಾರಿಗಳು ಹಾಜರಿದ್ದರು.