Published
2 months agoon
By
Akkare Newsಪ್ರಯಾಗ್‌ರಾಜ್‌ನ ಮಹಾಕುಂಭ ಸ್ಥಳದಲ್ಲಿ ನದಿ ನೀರಿನ ಗುಣಮಟ್ಟದ ಕುರಿತು ಹಳೆಯ ಮಾದರಿಗಳನ್ನು ಆಧರಿಸಿ ವರದಿ ಸಲ್ಲಿಸಿದ್ದಕ್ಕಾಗಿ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಬುಧವಾರ ಉತ್ತರ ಪ್ರದೇಶ ಮಾಲಿನ್ಯ ನಿಯಂತ್ರಣ ಮಂಡಳಿಯನ್ನು ಪ್ರಶ್ನಿಸಿದೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.
ಯಾತ್ರೆ ಪ್ರಾರಂಭವಾಗುವ ಒಂದು ದಿನ ಮೊದಲು ಜನವರಿ 12 ರಂದು ಈ ಮಾದರಿಗಳನ್ನು ಪಡೆಯಲಾಗಿದೆ ಎಂದು ನ್ಯಾಯಮಂಡಳಿ ಹೇಳಿದೆ. “ಹಾಗಾದರೆ ನೀವು ಇಷ್ಟು ದೊಡ್ಡ ದಾಖಲೆಯನ್ನು ಏಕೆ ಸಲ್ಲಿಸಿದ್ದೀರಿ? ನಮ್ಮ ಸಮಯವನ್ನು ವ್ಯರ್ಥ ಮಾಡಲಲೆ” ಎಂದು ಅದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯನ್ನು ಕೇಳಿದೆ.
ಉತ್ತರ ಪ್ರದೇಶ ಮಾಲಿನ್ಯ ನಿಯಂತ್ರಣ ಮಂಡಳಿಯನ್ನು ಪ್ರತಿನಿಧಿಸುವ ರಾಜ್ಯ ಹೆಚ್ಚುವರಿ ಅಡ್ವೊಕೇಟ್ ಜನರಲ್, ಇತ್ತೀಚಿನ ಮಾದರಿಗಳನ್ನು ಪರೀಕ್ಷಿಸಿದ್ದು, ಅವುಗಳನ್ನು ದಾಖಲೆಯಲ್ಲಿ ಇಡುವುದಾಗಿ ನ್ಯಾಯಮಂಡಳಿಗೆ ತಿಳಿಸಿದ್ದಾರೆ. ಜಲ ಮಾಲಿನ್ಯವನ್ನು ಪರಿಹರಿಸಲು ಸರಿಪಡಿಸುವ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ಹೇಳಿದೆ.
“ಪ್ರತಿಯೊಂದು ವಿಚಲನಕ್ಕೂ, ಮೇಲ್ವಿಚಾರಣೆ ಮತ್ತು ಸರಿಪಡಿಸುವ ಕ್ರಮ ನಡೆಯುತ್ತಿದೆ” ಎಂದು ರಾಜ್ಯ ಸರ್ಕಾರ ಹೇಳಿದೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.
ಮಹಾ ಕುಂಭದಲ್ಲಿನ ನೀರು ಸ್ನಾನಕ್ಕೆ ಯೋಗ್ಯವಾಗಿದೆ ಎಂದು ಉತ್ತರ ಪ್ರದೇಶ ಮಾಲಿನ್ಯ ನಿಯಂತ್ರಣ ಮಂಡಳಿ ಬುಧವಾರ ಹೇಳಿಕೊಂಡಿದೆ. ಮಂಡಳಿಯ ಈ ಹೇಳಿಕೆ, ಫೆಬ್ರವರಿ 3 ರಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ವರದಿಗೆ ವಿರುದ್ಧವಾಗಿದೆ. ಕೇಂದ್ರ ಮಂಡಳಿಯು ತನ್ನ ವರದಿಯಲ್ಲಿ, ಗಂಗಾ ಮತ್ತು ಯಮುನಾ ನದಿ ನೀರಿನ ಗುಣಮಟ್ಟ ಸ್ನಾನಕ್ಕೆ ಯೋಗ್ಯವಲ್ಲ, ಅದರಲ್ಲಿ ಮಾನವ ಮತ್ತು ಪ್ರಾಣಿಗಳ ಮಲದಲ್ಲಿ ಸಾಮಾನ್ಯವಾಗಿ ಕಂಡುಬರುವ ಬ್ಯಾಕ್ಟೀರಿಯಾಗಳು ಹೆಚ್ಚಿನ ಮಟ್ಟದಲ್ಲಿದೆ ಎಂದು ಹೇಳಿತ್ತು.
ಬುಧವಾರ, ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ರಾಜ್ಯ ವಿಧಾನಸಭೆಯಲ್ಲಿ ಗಂಗಾ, ಯಮುನಾ ಮತ್ತು ಪೌರಾಣಿಕ ಸರಸ್ವತಿ ನದಿಗಳ ಸಂಗಮದಲ್ಲಿರುವ ನೀರು ಸ್ನಾನಕ್ಕೆ ಮಾತ್ರವಲ್ಲ, “ಆಚಮನ” ಅಥವಾ ಪವಿತ್ರ ನೀರನ್ನು ಕುಡಿಯುವ ಧಾರ್ಮಿಕ ಆಚರಣೆಗೂ ಯೋಗ್ಯವಾಗಿದೆ ಎಂದು ಹೇಳಿದ್ದಾರೆ. ನೀರಿನ ಮಾಲಿನ್ಯದ ವರದಿಗಳು ಮಹಾ ಕುಂಭದ ಅಪಖ್ಯಾತಿ ಮಾಡಬೇಕು ಎಂಬ ಪಿತೂರಿಯ ಭಾಗವಾಗಿದೆ ಎಂದು ಅವರು ಹೇಳಿದ್ದಾರೆ.
ಇದಕ್ಕೆ ಪ್ರತಿಕ್ರಿಯೆಯಾಗಿ, ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್, ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯಿಂದಾಗಿ ಕುಂಭದಲ್ಲಿನ ನೀರು ಕಲುಷಿತವಾಗಿದೆ ಎಂದು ಬೆಳಕಿಗೆ ಬಂದಿದೆ. ರಾಜ್ಯ ಸರ್ಕಾರ ಎಲ್ಲವೂ ನಿಯಂತ್ರಣದಲ್ಲಿದೆ ಎಂದು ಹೇಳಿಕೊಂಡಿದೆ. ಅದರ ಅರ್ಥ ಮಾಧ್ಯಮಗಳು ಈ ವಿಷಯದ ಬಗ್ಗೆ ವರದಿ ಮಾಡುತ್ತಿರುವುದು ನಿಯಂತ್ರಣದಲ್ಲಿದೆ ಎಂದು ಅವರು ಟೀಕಿಸಿದ್ದಾರೆ.
“‘ನ್ಯಾಯಾಲಯ ನಿಂದನೆಯಂತೆ ‘ಸರ್ಕಾರಿ ಮಂಡಳಿ ಅಥವಾ ಪ್ರಾಧಿಕಾರದ ನಿಂದನೆ’ ಮಾಡಿದ್ದಕ್ಕಾಗಿ ಯಾರೊಬ್ಬರ ವಿರುದ್ಧವೂ ಪ್ರಕರಣ ದಾಖಲಿಸಬಹುದೇ ಎಂದು ಸಾರ್ವಜನಿಕರು ಕೇಳುತ್ತಿದ್ದಾರೆ” ಎಂದು ಅವರು ಕೇಳಿದ್ದಾರೆ.
ಮಹಾ ಕುಂಭಮೇಳವು ಜನವರಿ 13 ರಂದು ಪ್ರಾರಂಭವಾಯಿತು ಮತ್ತು ಫೆಬ್ರವರಿ 26 ರವರೆಗೆ ನಡೆಯಲಿದೆ. ತೀರ್ಥಯಾತ್ರೆಯ ಈ ಸಮಯದಲ್ಲಿ ಪ್ರತಿದಿನ ಸರಾಸರಿ ಒಂದು ಕೋಟಿಗೂ ಹೆಚ್ಚು ಜನರು ಗಂಗಾ ಮತ್ತು ಯಮುನಾ ನದಿಗಳಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ ಎಂದು ಉತ್ತರ ಪ್ರದೇಶ ಸರ್ಕಾರ ಹೇಳಿಕೊಂಡಿದೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಹೇಳಿದೆ.