Connect with us

ಸ್ಥಳೀಯ

ಎಲ್ಲರ ಚಿತ್ತ ಕ್ರಿಕೆಟಿನತ್ತ.. ಚಾಂಪಿಯನ್ ಟ್ರೋಫಿ : ಇಂದು ರೋಮಾಂಚಕ ಪಂದ್ಯ ಭಾರತ ಮತ್ತು ಪಾಕಿಸ್ತಾನ ಭಾರತ ಗೆದ್ದರೆ ಫೈನಲಿಗೆ.

Published

on

ದುಬಾೖ: ಐಸಿಸಿ ಚಾಂಪಿಯನ್ಸ್‌ ಟ್ರೋಫೀ ಯ ಕಾವ ‌ವಿವಾರ ಅರಬ್‌ ನಾಡಿನಲ್ಲಿ ಒಮ್ಮಿಂದೊಮ್ಮೆಲೇ ಏರಲಿದೆ. ಇದು ಕ್ರಿಕೆಟ್‌ ವಿಶ್ವವನ್ನೇ ವ್ಯಾಪಿಸಲಿದೆ. ಹೈ ವೋಲ್ಟೇಜ್‌ ಪಂದ್ಯಕ್ಕೆ ಭಾರತ-ಪಾಕಿಸ್ಥಾನ ತಂಡಗಳು ಸಾಕ್ಷಿಯಾಗಲಿವೆ. ತಟಸ್ಥ ತಾಣವಾದ ದುಬಾೖಯಲ್ಲಿ ನಡೆಯುವ ರೋಹಿತ್‌ -ರಿಜ್ವಾನ್‌ ಪಡೆಗಳ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಪಂದ್ಯವನ್ನು ಕಣ್ತುಂಬಿಸಿಕೊಳ್ಳಲು ಕ್ರಿಕೆಟ್‌ ಜಗತ್ತೇ ತುದಿಗಾಲಲ್ಲಿ ನಿಂತಿದೆ.

 

ಭಾರತ ಸೆಮಿಫೈನಲ್‌ ಗುರಿಯೊಂದಿಗೆ ಕಣಕ್ಕಿಳಿದರೆ, ಪಾಕಿಸ್ಥಾನ ಉಳಿವಿಗಾಗಿ ಹೋರಾಟ ನಡೆಸಬೇಕಾದ ಸಂಕಟದಲ್ಲಿದೆ. 3 ದಶಕಗಳ ಬಳಿಕ ಐಸಿಸಿ ಪಂದ್ಯಾವಳಿಯೊಂದರ ಆತಿಥ್ಯ ಪಡೆದಿರುವ ಪಾಕಿಸ್ಥಾನ, ಎರಡೇ ಪಂದ್ಯಗಳನ್ನಾಡಿ ಹೊರಬೀಳುವುದನ್ನು ಯಾವ ಕಾರಣಕ್ಕೂ ಬಯಸದು. ಹಾಗೆಯೇ ಈ ಬದ್ಧ ಎದುರಾಳಿ ಕೈಯಲ್ಲಿ ಸೋಲುವುದನ್ನು ಭಾರತವೂ ಬಯಸದು. ಹೀಗಾಗಿ ಇದು “ಮ್ಯಾಚ್‌ ಆಫ್ ದ ಟೂರ್ನಿ’ಯ ಮಹತ್ವ ಪಡೆದಿದೆ.“ಎ’ ವಿಭಾಗದ ಮುಖಾಮುಖಿಯಲ್ಲಿ ಬಾಂಗ್ಲಾದೇಶ ವಿರುದ್ಧ ಗೆಲುವು ಸಾಧಿಸಿದ ಭಾರತ, ಪಾಕಿಸ್ಥಾನವನ್ನೂ ಮಣಿಸಿದರೆ ಸೆಮಿಫೈನಲ್‌ ಸ್ಥಾನವೊಂದನ್ನು ಖಾತ್ರಿಪಡಿಸಲಿದೆ. ಆದರೆ ಆತಿಥೇಯ ಪಾಕಿಸ್ಥಾನದ ಸ್ಥಿತಿ ಇದಕ್ಕೆ ತದ್ವಿರುದ್ಧ. ಅದು ಎಲ್ಲ ದಿಕ್ಕುಗಳಿಂದಲೂ ಒತ್ತಡಕ್ಕೆ ಸಿಲುಕಿದೆ. ಕರಾಚಿಯ ಆರಂಭಿಕ ಪಂದ್ಯದಲ್ಲಿ ನ್ಯೂಜಿಲ್ಯಾಂಡ್‌ ವಿರುದ್ಧ ಅನುಭವಿಸಿದ ಸೋಲಿನಿಂದ ದಿಕ್ಕೆಟ್ಟಿದೆ. ಮರು ಪಂದ್ಯದಲ್ಲೇ ಭಾರತವನ್ನು ಎದುರಿಸಬೇಕಾದುದು, ಜತೆಗೆ ಭಾರತದೆದುರು ಯಾವತ್ತೂ ಉತ್ತಮ ಬ್ಯಾಟಿಂಗ್‌ ಪ್ರದರ್ಶಿಸುವ ಫ‌ಖರ್‌ ಜಮಾನ್‌ ಗಾಯಾಳಾಗಿ ಹೊರಬಿದ್ದ ಕಾರಣ ಒತ್ತಡ ಬಿಗಡಾಯಿಸಿದೆ. ಇವರ ಸ್ಥಾನಕ್ಕೆ ಇಮಾಮ್‌ ಉಲ್‌ ಹಕ್‌ ಬಂದಿದ್ದಾರೆ. ಆದರೆ ಇಲ್ಲಿಯೂ ಸೋಲುಂಡರೆ ಕೂಟದಿಂದ ಹೊರಬಿದ್ದ ಮೊದಲ ತಂಡವೆಂಬ ಅವಮಾನಕ್ಕೆ ಸಿಲುಕಲಿದೆ!

 

ಕರಾಚಿಯಲ್ಲಿ ನಡೆದ ಆರಂಭಿಕ ಪಂದ್ಯದಲ್ಲಿ ನ್ಯೂಜಿಲ್ಯಾಂಡ್‌ ಗೆ 320 ರನ್‌ ಬಿಟ್ಟುಕೊಟ್ಟ ಪಾಕಿಸ್ಥಾನ, ಇದನ್ನು ಹಿಂದಿಕ್ಕಲಾಗದೆ 60 ರನ್‌ ಸೋಲನ್ನು ಹೊತ್ತುಕೊಂಡಿತ್ತು. ತಂಡದ ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ವಿಭಾಗವೆರಡೂ ನಿರೀಕ್ಷಿತ ಮಟ್ಟದಲ್ಲಿಲ್ಲ ಎಂಬುದು ಇದರಿಂದ ಸಾಬೀತಾಗಿದೆ. ಅದೂ ಅಲ್ಲದೇ, ಕೆಲವೇ ದಿನಗಳಲ್ಲಿ ನ್ಯೂಜಿಲ್ಯಾಂಡ್‌ ವಿರುದ್ಧ ತವರಲ್ಲೇ 3 ಸೋಲುಂಡ ಸಂಕಟ ಪಾಕಿಸ್ಥಾನದ್ದು. ಇದಕ್ಕೂ ಹಿಂದಿನ ತ್ರಿಕೋನ ಸರಣಿಯ ಆರಂಭಿಕ ಪಂದ್ಯ ಹಾಗೂ ಫೈನಲ್‌ನಲ್ಲಿ ಕಿವೀಸ್‌ ವಿರುದ್ಧ ಎಡವಿತ್ತು.

 

ಭಾರತ ಸಂತುಲಿತ ತಂಡ
ಭಾರತ ಅತ್ಯಂತ ಸಂತುಲಿತ ತಂಡವನ್ನು ಹೊಂದಿದೆ. ಮತ್ತೆ ದುಬಾೖಯಲ್ಲೇ ಆಡುತ್ತಿದೆ. ಬಾಂಗ್ಲಾ ವಿರುದ್ಧ ಗೆಲುವು ಸಾಧಿಸಿದ ತಂಡವನ್ನೇ ಉಳಿಸಿಕೊಳ್ಳುವ ಸಾಧ್ಯತೆ ಹೆಚ್ಚು. ರೋಹಿತ್‌-ಗಿಲ್‌ ಜೋಡಿಯ ಉತ್ತಮ ಆರಂಭ, ಕೊಹ್ಲಿ ಅವರ ಬ್ಯಾಟಿಂಗ್‌ ಫಾರ್ಮ್ ಭಾರತದ ಯಶಸ್ಸಿನಲ್ಲಿ ನಿರ್ಣಾಯಕ ಪಾತ್ರ ವಹಿಸಲಿದೆ. ಅಯ್ಯರ್‌ ಹಾಗೂ ಭಡ್ತಿ ಪಡೆದು ಬರುವ ಅಕ್ಷರ್‌ ಪಟೇಲ್‌ ಬಾಂಗ್ಲಾ ವಿರುದ್ಧ ವಿಫ‌ಲರಾಗಿದ್ದರು. ಇವರು ಪಾಕ್‌ ವಿರುದ್ಧ ಉತ್ತಮ ಮೊತ್ತ ಗಳಿಸಲೇಬೇಕಿದೆ. ಬಾಂಗ್ಲಾ ಎದುರು ಗಿಲ್‌ ಒಂದೆಡೆ ಕ್ರೀಸ್‌ ಆಕ್ರಮಿಸಿಕೊಂಡು ನಿಂತು ಶತಕ ಬಾರಿಸಿದ ಪರಿಣಾಮ ಗೆಲುವು ಸುಲಭದಲ್ಲೇ ಒಲಿದಿತ್ತು.

ಬಾಂಗ್ಲಾ ವಿರುದ್ಧ ಭಾರತದ ಬೌಲಿಂಗ್‌ ನಡು ಹಂತದಲ್ಲಿ ಕೈಕೊಟ್ಟಿತ್ತು. 35ಕ್ಕೆ 5 ವಿಕೆಟ್‌ ಉರುಳಿಸಿದರೂ ಬಳಿಕ 228 ರನ್‌ ಬಿಟ್ಟುಕೊಟ್ಟಿತ್ತು. ಶಮಿ 5, ರಾಣಾ 3 ವಿಕೆಟ್‌ ಉಡಾಯಿಸಿ ಮಿಂಚಿದ್ದರು. ಸ್ಪಿನ್‌ ತ್ರಿವಳಿಗಳು ಯಶಸ್ಸು ಸಾಧಿಸಬೇಕಾದ ಅಗತ್ಯವಿದೆ. ಆದರೆ ಪಾಕ್‌ ಸ್ಪಿನ್ನಿಗೆ ಚೆನ್ನಾಗಿ ಆಡುತ್ತದೆಂಬುದನ್ನು ಮರೆಯುವಂತಿಲ್ಲ.

 

ಭಾರತಕ್ಕೆ ಇಲ್ಲಿ ಮತ್ತೂಂದು ಕೆಲಸ ಬಾಕಿ ಇದೆ. ಅದೆಂದರೆ 2017ರ ಫೈನಲ್‌ ಪಂದ್ಯಕ್ಕೆ ಸೇಡು ತೀರಿಸಿಕೊಳ್ಳುವುದು. ಅಂದಿನ ಓವಲ್‌ ಫೈನಲ್‌ನಲ್ಲಿ ಭಾರತ ಪಾಕ್‌ ಕೈಯಲ್ಲಿ 180 ರನ್ನುಗಳ ಆಘಾತಕಾರಿ ಸೋಲುಂಡಿತ್ತು!

ಆರಂಭ: ಅ. 2.30
ಪ್ರಸಾರ: ಸ್ಟಾರ್‌
ಸ್ಪೋರ್ಟ್ಸ್‌

ಚಾಂಪಿಯನ್ಸ್‌ ಟ್ರೋಫಿಯಲ್ಲಿ ಭಾರತ-ಪಾಕ್‌
ಪಂದ್ಯ-05 ಭಾರತ ಜಯ-02 ಪಾಕ್‌ ಜಯ-03

2004 ಬರ್ಮಿಂಗ್‌ಹ್ಯಾಮ್‌ ಪಾಕಿಸ್ಥಾನಕ್ಕೆ 3 ವಿಕೆಟ್‌ ಜಯ
ರಾಹುಲ್‌ ದ್ರಾವಿಡ್‌ ಅವರ 67 ಹಾಗೂ ಅಜಿತ್‌ ಅಗರ್ಕರ್‌ ಅವರ 47 ರನ್‌ ನೆರವಿನಿಂದ ಭಾರತ ಹಾಗೂ ಹೀಗೂ 200 ರನ್‌ ಪೇರಿಸಿತು. ಶೋಯಿಬ್‌ ಅಖ್ತರ್‌ ಮತ್ತು ನವೀದ್‌ ಅಲ್‌ ಹಸನ್‌ ತಲಾ 4 ವಿಕೆಟ್‌ ಕೆಡವಿದರು. ಪಾಕಿಸ್ಥಾನ 49.2 ಓವರ್‌ಗಳಲ್ಲಿ 7 ವಿಕೆಟಿಗೆ 201 ರನ್‌ ಬಾರಿಸಿ ಗೆದ್ದು ಬಂದಿತು. ಆರಂಭಕಾರ ಮೊಹಮ್ಮದ್‌ ಯೂಸುಫ್ ಅಜೇಯ 81 ರನ್‌ ಹೊಡೆದು ತಂಡವನ್ನು ದಡ ಸೇರಿಸಿದರು

 

 

2009 ಸೆಂಚುರಿಯನ್‌ ಪಾಕಿಸ್ಥಾನಕ್ಕೆ 54 ರನ್‌ ಜಯ
ಶೋಯಿಬ್‌ ಮಲಿಕ್‌ 128, ಮೊಹಮ್ಮದ್‌ ಯೂಸುಫ್ 87 ರನ್‌ ಬಾರಿಸಿ ಪಾಕ್‌ ಮೊತ್ತವನ್ನು 302ಕ್ಕೆ ಏರಿಸಿದರು (9 ವಿಕೆಟ್‌). ಬೌಲಿಂಗ್‌ ನಲ್ಲಿ ಅಶಿಷ್‌ ನೆಹ್ರಾ ಮಾತ್ರವೇ ಪರಿಣಾಮ ಬೀರಿದರು (55ಕ್ಕೆ 4). ಚೇಸಿಂಗ್‌ ವೇಳೆ ದ್ರಾವಿಡ್‌ 76, ಗಂಭೀರ್‌ 57 ರನ್‌, ಸುರೇಶ್‌ ರೈನಾ 46 ಹೊಡೆದರೂ ತೆಂಡುಲ್ಕರ್‌, ಕೊಹ್ಲಿ, ಧೋನಿ ಯಶಸ್ಸು ಕಾಣಲಿಲ್ಲ. ಭಾರತ 44.5 ಓವರ್‌ಗಳಲ್ಲಿ 248ಕ್ಕೆ ಆಲೌಟ್‌ ಆಯಿತು.

2013 ಬರ್ಮಿಂಗ್‌ಹ್ಯಾಮ್‌ ಭಾರತಕ್ಕೆ 8 ವಿಕೆಟ್‌ ಜಯ
ಭಾರತ ಡಿಎಲ್‌ಎಸ್‌ ನಿಯಮದಂತೆ 8 ವಿಕೆಟ್‌ಗಳ ಜಯ ಸಾಧಿಸಿತು. ಪಾಕಿಸ್ಥಾನ 39.4 ಓವರ್‌ಗಳಲ್ಲಿ 165ಕ್ಕೆ ಕುಸಿದರೆ, ಭಾರತ 19.1 ಓವರ್‌ ಗಳಲ್ಲಿ 2 ವಿಕೆಟಿಗೆ 102 ರನ್‌ ಬಾರಿಸಿತು. ಭುವನೇಶ್ವರ್‌ ಕುಮಾರ್‌, ಇಶಾಂತ್‌ ಶರ್ಮ, ಆರ್‌. ಆಶ್ವಿ‌ನ್‌ ಮತ್ತು ರವೀಂದ್ರ ಜಡೇಜ ತಲಾ 2 ವಿಕೆಟ್‌ ಕೆಡವಿ ಪಾಕ್‌ಗೆ ಕಡಿವಾಣ ಹಾಕಿದರು. ಚೇಸಿಂಗ್‌ ವೇಳೆ ಶಿಖರ್‌ ಧವನ್‌ 48 ರನ್‌ ಹೊಡೆದರು.

2017 ಬರ್ಮಿಂಗ್‌ಹ್ಯಾಮ್‌ ಭಾರತಕ್ಕೆ 124 ರನ್‌ ಜಯ
ಭಾರತವಿಲ್ಲಿ ಪವರ್‌ಫ‌ುಲ್‌ ಬ್ಯಾಟಿಂಗ್‌ ಪ್ರದರ್ಶಿಸಿ ಕೇವಲ 3 ವಿಕೆಟಿಗೆ 319 ರನ್‌ ಪೇರಿಸಿತು. ರೋಹಿತ್‌ 91, ಧವನ್‌ 68, ಕೊಹ್ಲಿ ಅಜೇಯ 81, ಯುವರಾಜ್‌ 53 ರನ್‌ ಬಾರಿಸಿದರು. ಮಳೆಯಿಂದ ಪಾಕಿಸ್ಥಾನಕ್ಕೆ 41 ಓವರ್‌ಗಳಲ್ಲಿ 289 ರನ್‌ ಟಾರ್ಗೆಟ್‌ ಲಭಿಸಿತು. ಅದು 33.4 ಓವರ್‌ ಗಳಲ್ಲಿ 164ಕ್ಕೆ ಕುಸಿಯಿತು. ಉಮೇಶ್‌ ಯಾದವ್‌ 3, ಪಾಂಡ್ಯ ಮತ್ತು ಜಡೇಜ 2 ವಿಕೆಟ್‌ ಉರುಳಿಸಿದರು.

2017 ಓವಲ್‌ ಪಾಕಿಸ್ಥಾನಕ್ಕೆ 180 ರನ್‌ ಜಯ
ಇತ್ತಂಡಗಳು ಫೈನಲ್‌ನಲ್ಲಿ ಮತ್ತೆ ಎದುರಾದವು. ಈ ಏಕಪಕ್ಷೀಯ ಪಂದ್ಯವನ್ನು 180 ರನ್ನುಗಳಿಂದ ಗೆದ್ದ ಪಾಕ್‌ ಚಾಂಪಿಯನ್‌ ಆಗಿ ಮೂಡಿಬಂತು. ಫ‌ಖರ್‌ ಜಮಾನ್‌ ಅವರ 114 ರನ್‌ ಸಾಹಸದಿಂದ ಪಾಕಿಸ್ಥಾನ 4ಕ್ಕೆ 338 ರನ್‌ ಪೇರಿಸಿದರೆ, ಭಾರತ 30.3 ಓವರ್‌ಗಳಲ್ಲಿ 159ಕ್ಕೆ ಸರ್ವಪತನ ಕಂಡಿತು. ಬ್ಯಾಟಿಂಗ್‌ನಲ್ಲಿ ಮಿಂಚಿದ್ದು ಹಾರ್ದಿಕ್‌ ಪಾಂಡ್ಯ ಮಾತ್ರ (76). ಮೊಹಮ್ಮದ್‌ ಆಮಿರ್‌, ಹಸನ್‌ ಅಲಿ 3 ವಿಕೆಟ್‌ ಕೆಡವಿದರು

Continue Reading
Click to comment

Leave a Reply

Your email address will not be published. Required fields are marked *

Advertisement