Published
1 month agoon
By
Akkare News
ರವಿವಾರದ ದುಬಾೖ ಮುಖಾಮುಖೀಯಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಪಾಕಿಸ್ಥಾನ 49.4 ಓವರ್‌ಗಳಲ್ಲಿ 241 ರನ್ನುಗಳ ಸಾಮಾನ್ಯ ಮೊತ್ತಕ್ಕೆ ಆಲೌಟ್ ಆಯಿತು. ಜವಾಬಿತ್ತ ಭಾರತ 42.3 ಓವರ್‌ಗಳಲ್ಲಿ 4 ವಿಕೆಟಿಗೆ 244 ರನ್ ಬಾರಿಸಿತು. ಇದರೊಂದಿಗೆ 2017ರ ಫೈನಲ್ ಸೋಲಿಗೆ ಸೇಡನ್ನೂ ತೀರಿಸಿಕೊಂಡಿತು. ಇದು ಚಾಂಪಿಯನ್ಸ್ ಟ್ರೋಫಿಯಲ್ಲಿ ಪಾಕ್ ವಿರುದ್ಧ 6 ಪಂದ್ಯಗಳಲ್ಲಿ ಭಾರತ ಸಾಧಿಸಿದ 3ನೇ ಜಯ.
ಕೊಹ್ಲಿ ಸೆಂಚುರಿ, ಜಯಭೇರಿ
ವಿರಾಟ್ ಕೊಹ್ಲಿ ಅವರ ಸೆಂಚುರಿ ಮತ್ತು ಭಾರತದ ಜಯಭೇರಿ ಒಟ್ಟಿಗೇ ಮೊಳಗಲ್ಪಟ್ಟದ್ದು ವಿಶೇಷವಾಗಿತ್ತು. ಖುಷ್‌ದಿಲ್ ಶಾ ಎಸೆತವನ್ನು ಬೌಂಡರಿಗೆ ಬಾರಿಸಿದ ಕೊಹ್ಲಿ ತಮ್ಮ 51ನೇ ಏಕದಿನ ಶತಕದೊಂದಿಗೆ ತಂಡದ ಗೆಲುವನ್ನೂ ಸಾರಿದರು. ಇದು ಕೊಹ್ಲಿ ಅವರ 299ನೇ ಏಕದಿನ ಪಂದ್ಯ. 111 ಎಸೆತಗಳನ್ನು ನಿಭಾಯಿಸಿದ ಕೊಹ್ಲಿ 100 ರನ್ ಬಾರಿಸಿ ಅಜೇಯರಾಗಿ ಉಳಿದರು. ಇದು 7 ಬೌಂಡರಿಗಳನ್ನು ಒಳಗೊಂಡಿತ್ತು.
ಇದೇ ಇನ್ನಿಂಗ್ಸ್ ವೇಳೆ 14 ಸಾವಿರ ರನ್ ಪೂರ್ತಿಗೊಳಿಸಿದ ವಿರಾಟ್ ಕೊಹ್ಲಿ ಭಾರತದ ಪರ ಅತ್ಯಧಿಕ 158 ಕ್ಯಾಚ್ ಪಡೆದ ಫೀಲ್ಡರ್ ಎಂಬ ದಾಖಲೆಯನ್ನೂ ತಮ್ಮ ಹೆಸರಿಗೆ ಬರೆಸಿಕೊಂಡರು. ಅಜರುದ್ದೀನ್ ದಾಖಲೆ ಪತನಗೊಂಡಿತು (156).
ಚೇಸಿಂಗ್ ವೇಳೆ ರೋಹಿತ್ ಶರ್ಮ ಅಬ್ಬರಿಸಿದರು. ಆದರೆ ಇನ್ನಿಂಗ್ಸ್ ವಿಸ್ತರಿಸಲು ವಿಫಲರಾದರು. 15 ಎಸೆತಗಳಿಂದ 20 ರನ್ ಮಾಡಿ (3 ಬೌಂಡರಿ, 1 ಸಿಕ್ಸರ್) ಅಫ್ರಿದಿ ಎಸೆತದಲ್ಲಿ ಬೌಲ್ಡ್ ಆದರು. ಆದರೆ ಶುಭಮನ್ ಗಿಲ್ ಅಫ್ರಿದಿಯನ್ನೇ ಟಾರ್ಗೆಟ್ ಮಾಡಿಕೊಂಡರು. ಅವರ ಏಳೂ ಬೌಂಡರಿಗಳು ಅಫ್ರಿದಿ ಎಸೆತದಲ್ಲೇ ಸಿಡಿದವು! ಗಿಲ್ ಗಳಿಕೆ 52 ಎಸೆತಗಳಿಂದ 46 ರನ್ (7 ಬೌಂಡರಿ).
3ನೇ ವಿಕೆಟಿಗೆ ಕೊಹ್ಲಿ-ಅಯ್ಯರ್ 129 ಎಸೆತಗಳಿಂದ 114 ರನ್ ಪೇರಿಸಿ ಭಾರತದ ಗೆಲುವನ್ನು ಖಾತ್ರಿಗೊಳಿಸಿದರು. ಅಯ್ಯರ್ ಅರ್ಧ ಶತಕದೊಂದಿಗೆ ಮಿಂಚಿದರು (67 ಎಸೆತ, 56 ರನ್, 5 ಫೋರ್, 1 ಸಿಕ್ಸರ್).
ಪಾಕಿಸ್ಥಾನಕ್ಕೆ ಕಡಿವಾಣ
ಪಾಕಿಸ್ಥಾನ ಸರದಿಯಲ್ಲಿ ಏಕೈಕ ಅರ್ಧ ಶತಕ ದಾಖಲಾಯಿತು. ವನ್‌ಡೌನ್ ಬ್ಯಾಟರ್ ಸೌದ್ ಶಕೀಲ್ ಸರ್ವಾಧಿಕ 62 ರನ್ ಹೊಡೆದರು (76 ಎಸೆತ, 5 ಬೌಂಡರಿ). 46 ರನ್ ಮಾಡಿದ ನಾಯಕ ಮೊಹಮ್ಮದ್ ರಿಜ್ವಾನ್ ಅವರದು ಅನಂತರದ ಹೆಚ್ಚಿನ ಗಳಿಕೆ. ಇವರಿಬ್ಬರ ಶತಕದ ಜತೆಯಾಟ ಪಾಕ್ ಸರದಿಯ ಹೈಲೈಟ್ ಎನಿಸಿತು. ಕೊನೆಯಲ್ಲಿ ಖುಷ್‌ದಿಲ್ ಷಾ 39 ಎಸೆತಗಳಿಂದ 38 ರನ್ ಹೊಡೆದರು.
ಭಾರತದ ಬೌಲಿಂಗ್ ಸರದಿಯಲ್ಲಿ ಮಿಂಚಿದವರೆಂದರೆ ಚೈನಾಮನ್ ಕುಲದೀಪ್ ಯಾದವ್ (40ಕ್ಕೆ 3). ಸತತ ಎಸೆತಗಳಲ್ಲಿ ಸಲ್ಮಾನ್ ಆಘಾ ಮತ್ತು ಶಾಹೀನ್ ಶಾ ಅಫ್ರಿದಿ ವಿಕೆಟ್‌ಗಳನ್ನು ಹಾರಿಸಿದ ಕುಲದೀಪ್ ಪಾಕಿಸ್ಥಾನದ ದೊಡ್ಡ ಮೊತ್ತದ ಯೋಜನೆಗೆ ಬ್ರೇಕ್ ಹಾಕಿದರು. ಹಾರ್ದಿಕ್ ಪಾಂಡ್ಯ 2 ವಿಕೆಟ್ ಕೆಡವಿದರು. ಆದರೆ ಶಮಿ ಪರಿಣಾಮ ಬೀರಲಿಲ್ಲ. ಮೊದಲ ಓವರ್‌ನಲ್ಲೇ 5 ವೈಡ್ ಎಸೆದು ಲಯ ತಪ್ಪಿದರು. ಶಮಿ ಹೊರತುಪಡಿಸಿ ಉಳಿದವರೆಲ್ಲ ವಿಕೆಟ್ ಉರುಳಿಸುವಲ್ಲಿ ಯಶಸ್ವಿಯಾದರು.
ಪಾಕಿಸ್ಥಾನ ಪವರ್ ಪ್ಲೇಯಲ್ಲಿ ಪರದಾಡಿತು. 9.2 ಓವರ್‌ಗಳಲ್ಲಿ ಆರಂಭಿಕರಿಬ್ಬರನ್ನೂ ಕಳೆದುಕೊಂಡು ಕೇವಲ 47 ರನ್ ಮಾಡಿತ್ತು. ಹಾರ್ದಿಕ್ ಪಾಂಡ್ಯ 9ನೇ ಓವರ್‌ನಲ್ಲಿ ಬಾಬರ್ ಆಜಂ (23) ವಿಕೆಟ್ ಹಾರಿಸಿ ಭಾರತಕ್ಕೆ ಮೊದಲ ಯಶಸ್ಸು ತಂದಿತ್ತರು. ಮುಂದಿನ ಓವರ್‌ನಲ್ಲೇ ಇಮಾಮ್ ಉಲ್ ಹಕ್ (10) ರನೌಟಾದರು. ಫಖರ್ ಜಮಾನ್ ಬದಲು ಇಮಾಮ್ ಅವಕಾಶ ಪಡೆದಿದ್ದರು.
3ನೇ ವಿಕೆಟಿಗೆ ಜತೆಗೂಡಿದ ಸೌದ್ ಶಕೀಲ್ ಮತ್ತು ನಾಯಕ ಮೊಹಮ್ಮದ್ ರಿಜ್ವಾನ್ ಪಾಕಿಸ್ಥಾನವನ್ನು ಆರಂಭಿಕ ಆಘಾತದಿಂದ ಚೇತರಿಸುವಂತೆ ಮಾಡಿದರು. 144 ಎಸೆತಗಳಿಂದ 104 ರನ್ ಪೇರಿಸಿದರು. ಇವರನ್ನು ಅಕ್ಷರ್ ಪಟೇಲ್ ಬೇರ್ಪಡಿಸಿದ ಬಳಿಕ ಭಾರತದ ಬೌಲರ್ ಮೇಲುಗೈ ಸಾಧಿಸಿದರು. 34ನೇ ಓವರ್‌ನಲ್ಲಿ 2ಕ್ಕೆ 151 ರನ್ ಮಾಡಿದ್ದ ಪಾಕಿಸ್ಥಾನ 270 ರನ್ ಪೇರಿಸುವ ನಿರೀಕ್ಷೆ ಇತ್ತು. ಆದರೆ 90 ರನ್ ಅಂತರದಲ್ಲಿ 8 ವಿಕೆಟ್ ಕಳೆದುಕೊಂಡಿತು.
ಭಾರತಕ್ಕಿನ್ನು 6 ದಿನಗಳ ಕಾಲ ವಿರಾಮ. ಮುಂದಿನ ರವಿವಾರ ನ್ಯೂಜಿಲ್ಯಾಂಡ್ ವಿರುದ್ಧ ತನ್ನ ಕೊನೆಯ ಲೀಗ್ ಪಂದ್ಯವನ್ನು ಆಡಲಿದೆ. ಇದು ಲೀಗ್ ಹಂತದ ಕೊನೆಯ ಪಂದ್ಯವೂ ಆಗಿದೆ.
ಪಾಕಿಸ್ಥಾನ
ಇಮಾಮ್ ಉಲ್ ಹಕ್ ರನೌಟ್ 10
ಬಾಬರ್ ಆಜಂ ಸಿ ರಾಹುಲ್ ಬಿ ಪಾಂಡ್ಯ 23
ಸೌದ್ ಶಕೀಲ್ ಸಿ ಅಕ್ಷರ್ ಬಿ ಪಾಂಡ್ಯ 62
ಮೊಹಮ್ಮದ್ ರಿಜ್ವಾನ್ ಬಿ ಅಕ್ಷರ್ 46
ಸಲ್ಮಾನ್ ಆಘಾ ಸಿ ಜಡೇಜ ಬಿ ಕುಲದೀಪ್ 19
ತಯ್ಯಬ್ ತಾಹಿರ್ ಬಿ ಜಡೇಜ 4
ಖುಷ್‌ದಿಲ್ ಶಾ ಸಿ ಕೊಹ್ಲಿ ಬಿ ರಾಣಾ 38
ಶಾಹೀನ್ ಶಾ ಅಫ್ರಿದಿ ಎಲ್‌ಬಿಡಬ್ಲ್ಯು ಕುಲದೀಪ್ 0
ನಸೀಮ್ ಶಾ ಸಿ ಕೊಹ್ಲಿ ಬಿ ಕುಲದೀಪ್ 14
ಹ್ಯಾರಿಸ್ ರೌಫ್ ರನೌಟ್ 8
ಅಬ್ರಾರ್ ಅಹ್ಮದ್ ಔಟಾಗದೆ 0
ಇತರ 17
ಒಟ್ಟು (49.4 ಓವರ್‌ಗಳಲ್ಲಿ ಆಲೌಟ್) 241
ವಿಕೆಟ್ ಪತನ: 1-41, 2-47, 3-151, 4-159, 5-165, 6-200, 7-200, 8-222, 9-242.
ಬೌಲಿಂಗ್: ಮೊಹಮ್ಮದ್ ಶಮಿ 8-0-43-0
ಹರ್ಷಿತ್ ರಾಣಾ 7.4-0-30-1
ಹಾರ್ದಿಕ್ ಪಾಂಡ್ಯ 8-0-31-2
ಅಕ್ಷರ್ ಪಟೇಲ್ 10-0-49-1
ಕುಲದೀಪ್ ಯಾದವ್ 9-0-40-3
ರವೀಂದ್ರ ಜಡೇಜ 7-0-40-1
ಭಾರತ
ರೋಹಿತ್ ಶರ್ಮ ಬಿ ಅಫ್ರಿದಿ 20
ಶುಭಮನ್ ಗಿಲ್ ಬಿ ಅಬ್ರಾರ್ 46
ವಿರಾಟ್ ಕೊಹ್ಲಿ ಔಟಾಗದೆ 100
ಶ್ರೇಯಸ್ ಆಯ್ಯರ್ ಸಿ ಇಮಾಮ್ ಬಿ ಶಾ 56
ಹಾರ್ದಿಕ್ ಪಾಂಡ್ಯ ಸಿ ರಿಜ್ವಾನ್ ಬಿ ಅಫ್ರಿದಿ 8
ಅಕ್ಷರ್ ಪಟೇಲ್ ಔಟಾಗದೆ 3
ಇತರ 11
ಒಟ್ಟು (42.3 ಓವರ್‌ಗಳಲ್ಲಿ 4 ವಿಕೆಟಿಗೆ) 244
ವಿಕೆಟ್ ಪತನ: 1-31, 2-100, 3-214.
ಬೌಲಿಂಗ್:ಶಾಹೀನ್ ಶಾ ಅಫ್ರಿದಿ8-0-74-2
ನಸೀಮ್ ಶಾ 8-0-37-0
ಹ್ಯಾರಿಸ್ ರೌಫ್ 7-0-52-0
ಅಬ್ರಾರ್ ಅಹ್ಮದ್ 10-0-28-1
ಖುಷ್‌ದಿಲ್ ಶಾ 7.3-0-43-1
ಆಲ್ಮಾನ್ ಆಘಾ 2-0-10-0
ಪಂದ್ಯಶ್ರೇಷ್ಠ: ವಿರಾಟ್ ಕೊಹ್ಲಿ