Published
1 month agoon
By
Akkare News
ನೂತನ ಮುಖ್ಯಮಂತ್ರಿ ರೇಖಾ ಗುಪ್ತಾ ಅವರು ಎಎಪಿಯ ಆರೋಪವನ್ನು ತಿರಸ್ಕರಿಸಿದ್ದು, ಅಂಬೇಡ್ಕರ್ ಮತ್ತು ಭಗತ್ ಸಿಂಗ್ ಅವರ ಫೋಟೋಗಳು ನನ್ನ ಕಚೇರಿಯಲ್ಲಿವೆ ಎಂದು ಹೇಳಿದ್ದಾರೆ.
ತಾನು ಅಧಿಕಾರದಲ್ಲಿದ್ದಾಗ ಮುಖ್ಯಮಂತ್ರಿ ಕಚೇರಿಯಲ್ಲಿ ಅಂಬೇಡ್ಕರ್ ಮತ್ತು ಭಗತ್ ಸಿಂಗ್ ಅವರ ಫೋಟೋಗಳು ಇದ್ದಿದ್ದು, ರೇಖಾ ಗುಪ್ತಾ ಅವರು ಸಿಎಂ ಆದ ಬಳಿಕ ಕಚೇರಿಯಲ್ಲಿ ಮಹಾತ್ಮ ಗಾಂಧಿ, ರಾಷ್ಟ್ರಪತಿ ಮುರ್ಮು ಮತ್ತು ಪ್ರಧಾನಿ ಮೋದಿ ಅವರ ಫೋಟೋಗಳು ಇರುವುದನ್ನು ಮಾಜಿ ಮುಖ್ಯಮಂತ್ರಿ ಅತಿಶಿ ಮರ್ಲೇನಾ ಅವರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
“ಬಿಜೆಪಿಯ ದಲಿತ ವಿರೋಧಿ ಮನಸ್ಥಿತಿ ಎಲ್ಲರಿಗೂ ಗೊತ್ತಿದೆ. ಇಂದು, ಅದರ ದಲಿತ ವಿರೋಧಿ ಮನಸ್ಥಿತಿಯ ಪುರಾವೆಗಳನ್ನು ಪ್ರಸ್ತುತಪಡಿಸಲಾಗಿದೆ. ಅರವಿಂದ್ ಕೇಜ್ರಿವಾಲ್ ಅವರು ದೆಹಲಿ ಸರ್ಕಾರದ ಪ್ರತಿಯೊಂದು ಕಚೇರಿಯಲ್ಲೂ ಬಾಬಾಸಾಹೇಬ್ ಅಂಬೇಡ್ಕರ್ ಮತ್ತು ಶಹೀದ್ ಭಗತ್ ಸಿಂಗ್ ಅವರ ಫೋಟೋಗಳನ್ನು ಹಾಕಿದ್ದರು. ಬಿಜೆಪಿ ಅಧಿಕಾರಕ್ಕೆ ಬಂದ ನಂತರ, ಅದು ಈ ಎರಡೂ ಫೋಟೋಗಳನ್ನು ಮುಖ್ಯಮಂತ್ರಿ ಕಚೇರಿಯಿಂದ ತೆಗೆದು ಹಾಕಿದೆ. ಬಿಜೆಪಿ ದಲಿತ ವಿರೋಧಿ ಮತ್ತು ಸಿಖ್ ವಿರೋಧಿ ಪಕ್ಷ ಎಂಬುವುದನ್ನು ಇದು ತೋರಿಸುತ್ತದೆ” ಎಂದು ಅತಿಶಿ ಅವರು ಮಾಧ್ಯಮಗಳ ಮುಂದೆ ಹೇಳಿದ್ದಾರೆ.
ಅತಿಶಿ ಹೇಳಿಕೆ ಬೆಂಬಲ ವ್ಯಕ್ತಪಡಿಸಿದೆ ಅರವಿಂದ್ ಕೇಜ್ರಿವಾಲ್ ಅವರು, “ಅಂಬೇಡ್ಕರ್ ಅವರ ಫೋಟೋವನ್ನು ತೆಗೆದುಹಾಕಿರುವುದು ಲಕ್ಷಾಂತರ ದಲಿತ ಅನುಯಾಯಿಗಳಿಗೆ ನೋವುಂಟು ಮಾಡಿದೆ” ಎಂದಿದ್ದಾರೆ.
“ದೆಹಲಿಯ ಹೊಸ ಬಿಜೆಪಿ ಸರ್ಕಾರ ಬಾಬಾಸಾಹೇಬ್ ಅವರ ಫೋಟೋ ತೆಗೆದು ಪ್ರಧಾನಿ ಮೋದಿಯವರ ಫೋಟೋ ಹಾಕಿದೆ. ಇದು ಸರಿಯಲ್ಲ. ಇದು ಬಾಬಾಸಾಹೇಬ್ ಅವರ ಲಕ್ಷಾಂತರ ಅನುಯಾಯಿಗಳಿಗೆ ನೋವುಂಟು ಮಾಡಿದೆ. ನಾನು ಬಿಜೆಪಿಗೆ ಒಂದು ವಿನಂತಿ ಮಾಡುತ್ತೇನೆ. ನೀವು ಪ್ರಧಾನಿಯವರ ಫೋಟೋ ಹಾಕಬಹುದು. ಆದರೆ, ಬಾಬಾಸಾಹೇಬ್ ಅವರ ಫೋಟೋ ತೆಗೆಯಬೇಡಿ. ಅವರ ಫೋಟೋ ಅಲ್ಲೇ ಇರಲಿ” ಎಂದು ಕೇಜ್ರಿವಾಲ್ ಎಕ್ಸ್‌ನಲ್ಲಿ ಪೋಸ್ಟ್ ಹಾಕಿದ್ದಾರೆ.
ನೂತನ ಮುಖ್ಯಮಂತ್ರಿ ರೇಖಾ ಗುಪ್ತಾ ಅವರು ಎಎಪಿಯ ಆರೋಪವನ್ನು ತಳ್ಳಿ ಹಾಕಿದ್ದು, ದೆಹಲಿ ಸರ್ಕಾರವು ಅಂಬೇಡ್ಕರ್ ಮತ್ತು ಭಗತ್ ಸಿಂಗ್ ಅವರ ಯಾವುದೇ ಫೋಟೋಗಳನ್ನು ತೆಗೆದು ಹಾಕಿಲ್ಲ ಎಂದಿದ್ದಾರೆ.
ಎಎಪಿ ವಿರುದ್ಧ ವಾಗ್ದಾಳಿ ನಡೆಸಿರುವ ಗುಪ್ತಾ ಅವರು “ಕೇಜ್ರಿವಾಲ್ ನೇತೃತ್ವದ ಪಕ್ಷವು ಬಿಆರ್ ಅಂಬೇಡ್ಕರ್ ಮತ್ತು ಭಗತ್ ಸಿಂಗ್ ಅವರನ್ನು ಮುಂದಿಟ್ಟುಕೊಂಡು ತಮ್ಮ ಭ್ರಷ್ಟಾಚಾರ ಮತ್ತು ದುಷ್ಕೃತ್ಯಗಳನ್ನು ಮಾಚುತ್ತಿದೆ” ಎಂದು ಹೇಳಿದ್ದಾರೆ.
ಒಂದು ವಿಡಿಯೋದಲ್ಲಿ, ಮಹಾತ್ಮ ಗಾಂಧಿ, ರಾಷ್ಟ್ರಪತಿ ಮುರ್ಮು ಮತ್ತು ಪ್ರಧಾನಿ ಮೋದಿ ಅವರ ಫೋಟೋಗಳು ಸಿಎಂ ರೇಖಾ ಗುಪ್ತಾ ಅವರು ಕುಳಿತಿದ್ದ ಸ್ಥಳದ ಹಿಂದೆ ಕಂಡು ಬಂದಿದೆ. ಈ ಹಿಂದೆ ಅಲ್ಲಿ ಅಂಬೇಡ್ಕರ್ ಮತ್ತು ಭಗತ್ ಸಿಂಗ್ ಅವರ ಫೋಟೋಗಳು ಇತ್ತು ಎಂದು ಇಂಡಿಯಾ ಟುಡೇ ವರದಿ ಮಾಡಿದೆ.