Published
1 month agoon
By
Akkare News
ಪಾಣಾಜೆ ಗ್ರಾಮ ಪಂಚಾಯಿತಿ ಗ್ರಾಮ ಸಭೆಗೆ ಹಾಜರಾಗಿಲು ಬಂದಿದ್ದ ಗ್ರಾಮಸ್ಥರು, ನಮಗೆ ಗ್ರಾಮ ಸಭೆಗಿಂತ ಚಿರತೆ ಹಿಡಿಯುವುದೇ ಮುಖ್ಯ. ಮೊದಲು ಅದರ ಬಗ್ಗೆ ಗಮನ ನೀಡಿ ಎಂದು ಅಧಿಕಾರಿಗಳನ್ನು ಆಗ್ರಹಿಸಿದರು.
ಕೊಳತ್ತೂರಿನ ವ್ಯಕ್ತಿಯೊಬ್ಬರ ಹಿತ್ತಲಲ್ಲಿ ಇರಿಸಿದ್ದ ಅರಣ್ಯ ಇಲಾಖೆಯ ಬೋನಿನಲ್ಲಿ ಸಿಲುಕಿದ್ದ ಚಿರತೆಯನ್ನು ರಾತ್ರಿ ವೇಳೆ ಕೇರಳ ಅರಣ್ಯ ಇಲಾಖೆಯವರು ಕರ್ನಾಟಕ ಹಾಗೂ ಕೇರಳದ ಗಡಿ ಭಾಗದ ಬಂಟಾಜೆ ರಕ್ಷಿತಾರಣ್ಯದಲ್ಲಿ ಬಿಟ್ಟು ಹೋಗಿದ್ದಾರೆ. ಇದು ಅಧಿಕಾರಿಗಳು ಮಾಡಿದ ಅವಾಂತರ. ಅಧಿಕಾರಿಗಳು ಇಲ್ಲಿಗೆ ಬಂದು, ಚಿರತೆಯನ್ನು ಇಲ್ಲಿ ಬಿಟ್ಟು ಹೋಗಿದ್ದು ನಿಜವೇ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದರು.
ಕೇರಳದ ಅರಣ್ಯ ಇಲಾಖೆಯವರು ಇಲ್ಲಿನವರಿಗೆ ಮಾಹಿತಿ ನೀಡದೆ ಇಲ್ಲಿನ ಅರಣ್ಯ ಪ್ರದೇಶದಲ್ಲಿ ಚಿರತೆಯನ್ನು ಬಿಟ್ಟಿದ್ದಾರೆ. ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡುವವರೆಗೆ ಪ್ರತಿಭಟನೆ ನಡೆಸಲಿದ್ದೇವೆ ಎಂದು ಗ್ರಾಮಸ್ಥರು ಆಗ್ರಹಿಸಿದರು.
ಕೇರಳದ ಕಾಸರಗೋಡಿನ ಡಿಎಫ್‌ಒ ಅವರು ಅಲ್ಲಿ ಸೆರೆ ಹಿಡಿದಿರುವ ಚಿರತೆಯೊಂದನ್ನು ಬೋನಿನಲ್ಲಿ ಹಾಕಿಕೊಂಡು ಪಿಕಪ್ ವಾಹನವೊಂದರಲ್ಲಿ ಕದ್ದುಮುಚ್ಚಿ ತಂದು ಪಾಣಾಜೆ ಗ್ರಾಮದ ಜಾಂಬ್ರಿ ಪ್ರದೇಶದಲ್ಲಿ ಅಕ್ರಮವಾಗಿ ಬಿಟ್ಟು ಹೋಗಿದ್ದು, ಅವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಪಾಣಾಜೆ ಗ್ರಾಮ ಪಂಚಾಯಿತಿ ವತಿಯಿಂದ ಅಧ್ಯಕ್ಷೆ ಮೈಮುನತ್‌ಉಲ್ ಮೆಹರಾ ಅವರು ಸಂಪ್ಯ ಪೊಲೀಸ್ ಠಾಣೆಗೆ ದೂರು ನೀಡಿದರು.