Published
1 month agoon
By
Akkare Newsಸುಡಾನ್‌ನ ವಾಡಿ ಸೈದ್ನಾ ವಾಯುನೆಲೆಯ ಬಳಿಯ ಜನವಸತಿ ಪ್ರದೇಶದಲ್ಲಿ ಮಂಗಳವಾರ (ಫೆ.25) ರಾತ್ರಿ ಮಿಲಿಟರಿ ವಿಮಾನವೊಂದು ಪತನಗೊಂಡಿದ್ದು, 46 ಜನರು ಸಾವನ್ನಪ್ಪಿದ್ದಾರೆ ಎಂದು ಸುದ್ದಿ ಸಂಸ್ಥೆ ಎಎಫ್‌ಪಿ ವರದಿ ಮಾಡಿದೆ.
ರಾಜಧಾನಿ ಖಾರ್ಟೌಮ್‌ನ ವಾಯುವ್ಯದಲ್ಲಿರುವ ಓಮ್‌ದುರ್ಮನ್‌ನಲ್ಲಿರುವ ಈ ನೆಲೆಯು ಸೇನೆಯ ಅತಿದೊಡ್ಡ ಮಿಲಿಟರಿ ಕೇಂದ್ರಗಳಲ್ಲಿ ಒಂದಾಗಿದೆ.
ಸುಡಾನ್‌ನ ಮಿಲಿಟರಿ ಬೆಂಬಲಿತ ಸರ್ಕಾರದ ಪ್ರಧಾನ ಕೇಂದ್ರವಾದ ಪೋರ್ಟ್ ಸುಡಾನ್‌ನ ಕೆಂಪು ಸಮುದ್ರ ನಗರಕ್ಕೆ ವಿಮಾನ ತೆರಳುತ್ತಿತ್ತು ಎಂದು ಸ್ಥಳೀಯ ಮಾಧ್ಯಮಗಳನ್ನು ಉಲ್ಲೇಖಿಸಿ ಎಎಫ್‌ಪಿ ತಿಳಿಸಿದೆ. ವಿಮಾನವು ಉನ್ನತ ಶ್ರೇಣಿಯ ಮಿಲಿಟರಿ ಅಧಿಕಾರಿಗಳನ್ನು ಹೊತ್ತೊಯ್ಯುತ್ತಿತ್ತು ಎಂಬ ವರದಿಗಳನ್ನು ಸೇನೆ ದೃಢಪಡಿಸಿಲ್ಲ ಮತ್ತು ನಿರಾಕರಿಸಿಲ್ಲ.
“ಅಂತಿಮ ಪರಿಶೀಲನೆಯ ಬಳಿಕ ಮೃತರ ಸಂಖ್ಯೆ 46ಕ್ಕೆ ತಲುಪಿದ್ದು, 10 ಮಂದಿ ಗಾಯಗೊಂಡಿದ್ದಾರೆ” ಎಂದು ಖಾರ್ಟೌಮ್ ಪ್ರಾದೇಶಿಕ ಸರ್ಕಾರದ ಮಾಧ್ಯಮ ಕಚೇರಿ ಹೇಳಿಕೆಯಲ್ಲಿ ತಿಳಿಸಿದೆ.
ಮಕ್ಕಳು ಸೇರಿದಂತೆ ಗಾಯಗೊಂಡ ನಾಗರಿಕರನ್ನು ತುರ್ತು ರಕ್ಷಣಾ ಸಿಬ್ಬಂದಿ ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ಸೇನೆಯೊಂದಿಗೆ ಸಂಯೋಜಿತ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.
ತಾಂತ್ರಿಕ ದೋಷದಿಂದಾಗಿ ಸೇನಾ ಸಾರಿಗೆ ವಿಮಾನ ಅಪಘಾತಕ್ಕೀಡಾಗಿರಬಹುದು ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಸೇನಾ ಮೂಲವೊಂದು ತಿಳಿಸಿದ್ದಾಗಿ ಎಎಫ್‌ಪಿ ಹೇಳಿದೆ.
ವಿಮಾನ ಪತನದ ನಂತರ ದೊಡ್ಡ ಸ್ಫೋಟದ ಶಬ್ದ ಕೇಳಿ ಬಂತು, ದಟ್ಟ ಹೊಗೆ ಆವರಿಸಿತ್ತು. ಹಲವಾರು ಮನೆಗಳಿಗೆ ಹಾನಿಯಾಗಿದೆ ಎಂದು ದುರಂತ ಸ್ಥಳದ ನಿವಾಸಿಗಳು ವಿವರಿಸಿದ್ದಾರೆ. ಅವಘಡದಿಂದ ಆ ಪ್ರದೇಶದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.