Published
4 weeks agoon
By
Akkare Newsದುಬಾೖ: ರವಿವಾರ ನಡೆದ ಜಿದ್ದಾಜಿದ್ದಿನ ಫೈನಲ್ ಪಂದ್ಯದಲ್ಲಿ ಭಾರತ ತಂಡ ನ್ಯೂಜಿಲ್ಯಾಂಡ್ ವಿರುದ್ಧ 4 ವಿಕೆಟ್ ಗಳಿಂದ ಜಯ ಸಾಧಿಸಿ ಚಾಂಪಿಯನ್ಸ್ ಟ್ರೋಫಿ ಮುಡಿಗೇರಿಸಿಕೊಂಡಿದೆ.
ಕೂಟದ 2 ಬಲಿಷ್ಠ ತಂಡಗಳ ನಡುವಿನ ಕಾದಾಟದಲ್ಲಿ ಅಜೇಯ ಭಾರತ ಪಟ್ಟು ಬಿಡದೆ ಗೆಲುವು ತನ್ನದಾಗಿಸಿಕೊಂಡಿತು. ವಿಶ್ವದ ಕ್ರಿಕೆಟ್ ಪ್ರೇಮಿಗಳ ನಿರೀಕ್ಷಿಸಿದಂತೆ ಪಂದ್ಯ ರೋಚಕ ಹೋರಾಟಕ್ಕೆ ಸಾಕ್ಷಿಯಾಯಿತು.
ಟಾಸ್ ಗೆದ್ದ ನ್ಯೂಜಿಲ್ಯಾಂಡ್ 7 ವಿಕೆಟ್ ನಷ್ಟಕ್ಕೆ 251 ರನ್ ಕಲೆ ಹಾಕಿತು. ಗುರಿ ಬೆನ್ನಟ್ಟಿದ ಭಾರತ ತಂಡಕ್ಕೆ ನಾಯಕ ರೋಹಿತ್ ಶರ್ಮ ಮತ್ತು ಗಿಲ್ ಉತ್ತಮ ಆರಂಭ ಒದಗಿಸಿಕೊಟ್ಟರು. ಮೊದಲ ವಿಕೆಟ್ ಗೆ 105 ರನ್ ಜತೆಯಾಟವಾಡಿದರು. ಗಿಲ್ 31(50 ಎಸೆತ) ರನ್ ಗಳಿಸಿದ್ದ ವೇಳೆ ಔಟಾದರು. ಬೆನ್ನಲ್ಲೇ ಆಡಲಿಳಿದ ಕೊಹ್ಲಿ ಅವರು ಒಂದು ರನ್ ಮಾಡುವಷ್ಟರಲ್ಲಿ ಎಲ್ ಬಿ ಡಬ್ಲ್ಯೂ ಗೆ ಔಟಾದರು. ಜವಾಬ್ದಾರಿಯುತ ಆಟವಾಡಿದ ರೋಹಿತ್ 76 ರನ್ ಗಳಿಸಿದ್ದ ವೇಳೆ ಮುನ್ನುಗ್ಗಿ ಹೊಡೆಯಲು ಹೋಗಿ ಸ್ಟಂಪ್ ಔಟಾದರು. ಆ ಬಳಿಕ ತಂಡಕ್ಕೆ ಆಧಾರವಾದ ಶ್ರೇಯಸ್ ಅಯ್ಯರ್ 48 ರನ್ ಗಳಿಸಿದ್ದ ವೇಳೆ ಔಟಾದರು. ಅಕ್ಷರ್ ಪಟೇಲ್ 29 ರನ್ ಕೊಡುಗೆ ನೀಡಿ ನಿರ್ಗಮಿಸಿದರು. ಪಾಂಡ್ಯ 18 ರನ್ ಗಳಿಸಿ ಔಟಾದರು. ಸಮಯೋಚಿತ ಆಟವಾಡಿದ ಕೆ.ಎಲ್. ರಾಹುಲ್ ಔಟಾಗದೆ 34 ರನ್ ಗಳಿಸಿ ಗೆಲುವಿನ ದಡ ಸೇರಿಸಿದರು.
ಸತತ 2 ಐಸಿಸಿ ಟ್ರೋಫಿ…
ಭಾರತ 2011ರ ಏಕದಿನ ವಿಶ್ವಕಪ್ ಗೆದ್ದ ಬಳಿಕ 2013ರಲ್ಲಿ ಚಾಂಪಿಯನ್ಸ್ ಟ್ರೋಫಿ ಗೆದ್ದಿತ್ತು. ಹೀಗೆ ಸತತ 2 ಐಸಿಸಿ ಟ್ರೋಫಿಗಳನ್ನೆತ್ತಿದ ಹಿರಿಮೆ ಧೋನಿ ಪಡೆಯದ್ದಾಗಿತ್ತು. ಇದೀಗ ರೋಹಿತ್ ಶರ್ಮ ಪಾಲಿಗೂ ಇಂಥದೊಂದು ಸುವರ್ಣಾವಕಾಶ ಲಭ್ಯವಾಗಿದೆ. ಕಳೆದ ವರ್ಷ ಟಿ20 ವಿಶ್ವ ಗೆದ್ದ ಭಾರತ, ಚಾಂಪಿಯನ್ಸ್ ಟ್ರೋಫಿಯನ್ನೂ ಎತ್ತಿ ಸತತ 2 ಐಸಿಸಿ ಕೂಟಗಳಲ್ಲಿ ತನ್ನ ಪ್ರಭುತ್ವವನ್ನು ಸ್ಥಾಪಿಸಿದಂತಾಗಿದೆ.