Connect with us

ರಾಜಕೀಯ

ಕಾಂಗ್ರೆಸ್‌; ಇಂದು ಶಾಸಕಾಂಗ ಸಭೆ: ಒಗ್ಗಟ್ಟಿನ ಮಂತ್ರ

Published

on

ಬೆಂಗಳೂರು: ಎಐಸಿಸಿ ಅಧ್ಯಕ್ಷರ ಒಗ್ಗಟ್ಟಿನ ಪಾಠದ ಬೆನ್ನಲ್ಲೇ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆ ನಿಗದಿಯಾಗಿದ್ದು, ಬಣಗಳನ್ನು ಬದಿಗೊತ್ತಿ ಮುಖ್ಯಮಂತ್ರಿ – ಉಪಮುಖ್ಯಮಂತ್ರಿ ಒಗ್ಗಟ್ಟಿನ ಮಂತ್ರ ಪಠಿಸುವ ಸಾಧ್ಯತೆ ಇದೆ. ಇದರ ಜತೆಗೆ ಅಧಿವೇಶನದಲ್ಲಿ ಬಜೆಟ್‌ ಅನ್ನು ಸಮರ್ಥಿಸಿಕೊಳ್ಳುವಂತೆ ಶಾಸಕರು, ವಿಧಾನ ಪರಿಷತ್ತಿನ ಸದಸ್ಯರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಲಿದ್ದಾರೆ.

 

ಎರಡು ದಿನಗಳ ಹಿಂದಷ್ಟೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಮ್ಮ ತವರು ಜಿಲ್ಲೆಯಲ್ಲಿ ಇಬ್ಬರೂ ನಾಯಕರಿಗೆ ಒಗ್ಗಟ್ಟಿನ ಪಾಠ ಮಾಡಿದ್ದರು. ಅದರ ಮಧ್ಯೆಯೇ ಅಂದರೆ ಸೋಮವಾರ ಸಂಜೆ 6ಕ್ಕೆ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆ (ಸಿಎಲ್‌ಪಿ) ಕರೆಯಲಾಗಿದೆ. ಸಂಜೆ 6 ಗಂಟೆಗೆ ನಡೆಯಲಿರುವ ಸಭೆಯಲ್ಲಿ ಮುಖ್ಯವಾಗಿ ಗ್ಯಾರಂಟಿಗಳ ಜತೆಗೆ ಅಭಿವೃದ್ಧಿ ಮಂತ್ರ ಪಠಿಸಿರುವ ಬಜೆಟ್‌ ಅನ್ನು ಅಧಿವೇಶನದಲ್ಲಿ ಸಮರ್ಥಿಸಿಕೊಳ್ಳುವಂತೆ ಸೂಚನೆ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.

ಈ ಮೊದಲು ಅಧಿವೇಶನದ ಆರಂಭ (ಫೆ. 4ಕ್ಕೆ)ದಲ್ಲಿ ಸಿಎಲ್‌ಪಿ ನಿಗದಿಯಾಗಿತ್ತು. ಆದರೆ ರಾಜ್ಯಪಾಲರ ವಂದನಾ ನಿರ್ಣಯದ ಜತೆಗೆ ಬಜೆಟ್‌ ಮಂಡನೆ ಹಿನ್ನೆಲೆಯಲ್ಲಿ ಮುಂದೂಡಲ್ಪಟ್ಟಿತ್ತು. ಅದು ಈಗ ಸೋಮವಾರಕ್ಕೆ ಮರುನಿಗದಿಯಾಗಿದೆ.

ಸಭೆಯಲ್ಲಿ ಮುಖ್ಯಮಂತ್ರಿ ಮೂಲಸೌಕರ್ಯ ಅಭಿವೃದ್ಧಿ ಕಾರ್ಯಕ್ರಮ ಎಂಬ ಹೊಸ ಯೋಜನೆ ಅಡಿ ರಾಜ್ಯದ ಎಲ್ಲ ವಿಧಾನಸಭಾ ಕ್ಷೇತ್ರಗಳಿಗೂ ರಸ್ತೆ, ಸಣ್ಣ ನೀರಾವರಿ ಮತ್ತು ಮೂಲಸೌಕರ್ಯ ಒದಗಿಸಲು 8 ಸಾವಿರ ಕೋಟಿ ರೂ. ಒಳಗೊಂಡಂತೆ ಹಲವು ಅಭಿವೃದ್ಧಿ ಕಾರ್ಯಕ್ರಮಗಳಿಗೆ ಹಣ ಮೀಸಲಿಡಲಾಗಿದೆ. ಇದರೊಂದಿಗೆ ಈ ಮೊದಲು ಕೇಳಿಬರುತ್ತಿದ್ದ ಅನುದಾನದ ಕೊರತೆ ಮತ್ತಿತರ ಅಪಸ್ವರಗಳಿಗೆ ಉತ್ತರ ನೀಡಲಾಗಿದೆ. ಇದನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಕಾಂಗ್ರೆಸ್‌ ಶಾಸಕಾಂಗ ಸಭೆ (ಸಿಎಲ್‌ಪಿ)ಯಲ್ಲಿ ನಿರ್ದೇಶನ ನೀಡುವ ನಿರೀಕ್ಷೆ ಇದೆ.

ವಿಪಕ್ಷಗಳನ್ನು ಎದುರಿಸಲು ಸೂಚನೆ
ವಿಪಕ್ಷಗಳು ಅನಗತ್ಯ ಆರೋಪಗಳನ್ನು ಮಾಡಲು ವೇದಿಕೆ ಸಿದ್ಧಪಡಿಸಿಕೊಂಡಿವೆ. ಅಲ್ಪಸಂಖ್ಯಾಕರ ಓಲೈಕೆ ಎಂದು ಸುಳ್ಳು ದೂರುತ್ತಿದ್ದಾರೆ. ಇದಕ್ಕೆ ಮೇಲ್ಮನೆ ಮತ್ತು ಕೆಳಮನೆ ಎರಡೂ ಸದನಗಳಲ್ಲಿ ದಿಟ್ಟ ಉತ್ತರ ನೀಡಬೇಕು. ಜತೆಗೆ ಸ್ಥಳೀಯ ಸಂಸ್ಥೆಗಳ ಚುನಾವಣೆ ಹೊಸ್ತಿಲಲ್ಲಿದೆ. ಈ ಹಿನ್ನೆಲೆಯಲ್ಲಿ ಕೂಡ ಬಜೆಟ್‌ ಮಹತ್ವ ಪಡೆದುಕೊಳ್ಳಲಿದೆ. ಇದೆಲ್ಲವನ್ನೂ ಪಕ್ಷದ ಶಾಸಕರು ಸದುಪಯೋಗ ಪಡೆದುಕೊಳ್ಳುವುದರ ಜತೆಗೆ ಅಧಿವೇಶನದ ನಂತರ ಸ್ಥಳೀಯಮಟ್ಟದಲ್ಲೂ ತಲುಪಿಸಬೇಕು ಎಂದು ಸಿಎಂ-ಡಿಸಿಎಂ ಪಾಠ ಮಾಡಲಿದ್ದಾರೆ ಎಂದೂ ಮೂಲಗಳು ತಿಳಿಸಿವೆ.

 

ಸಿದ್ದು, ಡಿಕೆಶಿ ದಿಲ್ಲಿಗೆ
ಈ ಮೊದಲೇ ನಿರ್ಧರಿಸಿದಂತೆ ತೆರವಾದ ನಾಲ್ಕು ಮೇಲ್ಮನೆ ಸ್ಥಾನಗಳ ನಾಮನಿರ್ದೇಶನಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್‌ ಇಬ್ಬರೂ ದಿಲ್ಲಿಗೆ ತೆರಳಲಿದ್ದಾರೆ. ಇದೇ ವೇಳೆ ಸಚಿವ ಸಂಪುಟ ಪುನಾರಚನೆ ಬಗ್ಗೆಯೂ ಚರ್ಚೆ ನಡೆಯುವ ಸಾಧ್ಯತೆ ಇದೆ ಎಂದೂ ಹೇಳಲಾಗಿದೆ.

 

 

 

Continue Reading
Click to comment

Leave a Reply

Your email address will not be published. Required fields are marked *

Advertisement